ನವ ದೆಹಲಿ: ಬಿಬಿಸಿ ಮಾಧ್ಯಮ ಸಂಸ್ಥೆಯ ದೆಹಲಿ ಮತ್ತು ಮುಂಬಯಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid On BBC) ನಡೆಸಿದ್ದು, ಮಂಗಳವಾರ ಬೆಳಗ್ಗೆ 11ಗಂಟೆಯಿಂದಲೂ ಶೋಧಕಾರ್ಯ ಮುಂದುವರಿದಿದೆ. ಐಟಿ ಅಧಿಕಾರಿಗಳು ಬಿಬಿಸಿ ಉದ್ಯೋಗಿಗಳ ಮೊಬೈಲ್, ಲ್ಯಾಪ್ಟಾಪ್ಗಳನ್ನೆಲ್ಲ ಜಪ್ತಿ ಮಾಡಿ ಸ್ಕ್ಯಾನ್ ಮಾಡುತ್ತಿದ್ದಾರೆ. ಈ ಮಧ್ಯೆ, ಭಾರತದಲ್ಲಿ ಬ್ರಿಟಿಷ್ ಮಾಧ್ಯಮ ಸಂಸ್ಥೆಯನ್ನು ಐಟಿ ಸರ್ವೇ ಮಾಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದೇವೆ ಎಂದು ಯುಕೆ ಸರ್ಕಾರ ತಿಳಿಸಿದೆ.
ಬಿಬಿಸಿ ಮಾಧ್ಯಮ ಸಂಸ್ಥೆ ತೆರಿಗೆ ವಂಚನೆ ಮಾಡಿದೆ ಎಂಬ ಆರೋಪದಡಿ ಐಟಿ ದಾಳಿಯಾಗಿದೆ. ಕೇವಲ ಮುಂಬಯಿ, ದೆಹಲಿ ಮಾತ್ರವಲ್ಲದೆ, ಬಿಬಿಸಿಯ ಇನ್ನೆರಡು ಕಚೇರಿಗಳನ್ನು ಕೂಡ ರೇಡ್ ಮಾಡಲಾಗಿದೆ. ‘ಬಿಬಿಸಿ ಅಂತಾರಾಷ್ಟ್ರೀಯ ತೆರಿಗೆ ನಿಯಮಗಳ ಉಲ್ಲಂಘನೆ ಮಾಡಿದೆ ಮತ್ತು ಹಣ ವರ್ಗಾವಣೆ ಅಕ್ರಮದ ಆರೋಪವೂ ಸಂಸ್ಥೆ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ ಬಿಬಿಸಿ ನೋಟಿಸ್ಗೆ ಉತ್ತರಿಸಲಿಲ್ಲ. ಲೆಕ್ಕ ಒದಗಿಸುವ ಬದಲು, ತನ್ನ ಆದಾಯವನ್ನು ಬೇರೆ ಕಡೆ ಅಕ್ರಮವಾಗಿ ವರ್ಗಾವಣೆ ಮಾಡಿದೆ. ಹೀಗಾಗಿ ದಾಳಿ ನಡೆಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ. ಸದ್ಯ ಐಟಿ ಅಧಿಕಾರಿಗಳು ಕಂಪನಿಯ ಉದ್ಯಮಕ್ಕೆ ಸಂಬಂಧಪಟ್ಟ ವಿವಿಧ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹಾಗೇ, ‘ನಾವು ಸರ್ವೇ ಮಾಡುತ್ತಿದ್ದೇವೆ. ನಮ್ಮ ಕೆಲಸ ಮುಗಿದ ಮೇಲೆ ಉದ್ಯೋಗಿಗಳ ಮೊಬೈಲ್, ಲ್ಯಾಪ್ಟಾಪ್ಗಳನ್ನು ವಾಪಸ್ ಕೊಡುತ್ತೇವೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ: IT Raid On BBC: ಬಿಬಿಸಿ ಮಾಧ್ಯಮ ಸಂಸ್ಥೆಯ ದೆಹಲಿ, ಮುಂಬಯಿ ಕಚೇರಿಗಳ ಮೇಲೆ ಐಟಿ ರೇಡ್; ಉದ್ಯೋಗಿಗಳ ಮೊಬೈಲ್ ಜಪ್ತಿ
ಬಿಬಿಸಿಯಿಂದ ಟ್ವೀಟ್
ಆದಾಯ ತೆರಿಗೆ ಅಧಿಕಾರಿಗಳು ಸಮೀಕ್ಷೆ ನಡೆಸಲು ಕಚೇರಿಗೆ ಬಂದ ಬೆನ್ನಲ್ಲೇ ಬಿಬಿಸಿ ಟ್ವೀಟ್ ಮಾಡಿದೆ. ‘ನಮ್ಮ ಸಂಸ್ಥೆಯ ಮುಂಬಯಿ ಮತ್ತು ದೆಹಲಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ. ನಾವು ಅವರಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದೇವೆ. ನಮ್ಮ ಕೆಲಸ ಅಭಾದಿತ’ ಎಂದು ಹೇಳಿದೆ.
ಯುಎಸ್ ಹೇಳೋದೇನು?
ಭಾರತದಲ್ಲಿ ಬಿಬಿಸಿ ಕಚೇರಿಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮೀಕ್ಷೆಗೆ ಒಳಪಡಿಸಿದ್ದರ ಬಗ್ಗೆ ಅಮೆರಿಕ ಪ್ರತಿಕ್ರಿಯೆ ನೀಡಿ ‘ಈ ವಿಷಯದಲ್ಲಿ ಯಾವುದೇ ಜಡ್ಜ್ಮೆಂಟ್ ಕೊಡುವ ಸನ್ನಿವೇಶದಲ್ಲಿ ನಾವಿಲ್ಲ. ಈ ಬಗ್ಗೆ ಭಾರತದ ಅಧಿಕಾರಿಗಳ ಬಳಿಯೇ ಹೆಚ್ಚಿನ ಮಾಹಿತಿ ಕೇಳಬೇಕು’ ಎಂದು ಹೇಳಿದೆ.