ಮುಂಬಯಿ: ಮಹಿಳೆಯರನ್ನು/ಯುವತಿಯರನ್ನು ಐಟಂ ಎಂದು ಅಶ್ಲೀಲ ಸ್ವರೂಪದಲ್ಲಿ ಕರೆಯುವ ಒಂದು ಕೆಟ್ಟ ವಾಡಿಕೆ ಅನೇಕರಲ್ಲಿದೆ. ಅದೇ ರೀತಿ 15 ವರ್ಷದ ಹುಡುಗಿಯನ್ನು ಐಟಂ ಎಂದು ಕರೆದು-ಚುಡಾಯಿಸಿ, ಅಶ್ಲೀಲವಾಗಿ ಚುಡಾಯಿಸಿದ್ದ 25 ವರ್ಷದ ಯುವಉದ್ಯಮಿಗೆ ಮುಂಬಯಿ ಕೋರ್ಟ್ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ‘ಹಾಗೆ ಅಪರಿಚಿತ ಸ್ತ್ರೀಯನ್ನು ಐಟಂ ಎಂದು ಕರೆದು, ಆಕೆಯ ತಲೆಕೂದಲನ್ನು ಹಿಡಿದು ಎಳೆಯುವುದೆಲ್ಲ ಆ ಮಹಿಳೆ/ಯುವತಿ/ಬಾಲಕಿಯರ ಘನತೆಗೆ ಧಕ್ಕೆ ತಂದಂತೆ. ಐಟಂ ಎಂಬುದು ಅತ್ಯಂತ ಕೀಳುಪದ. ಐಪಿಸಿ ಸೆಕ್ಷನ್ 354 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 12ರಡಿಯಲ್ಲಿ ಶಿಕ್ಷಾರ್ಹ ಅಪರಾಧ’ ಎಂದು ಕೋರ್ಟ್ ಹೇಳಿದೆ.
ಆರೋಪಿ ಅಬ್ರಾರ್ ಖಾನ್ ವಿರುದ್ಧ ಯುವತಿ ದೂರು ನೀಡಿದ್ದಳು. ಇದು 2015ರಲ್ಲಿ ನಡೆದ ಘಟನೆಯಾದರೂ ಈಗ ಆರೋಪಿಗೆ ಶಿಕ್ಷೆ ನೀಡಲಾಗಿದೆ. 2015ರ ಜುಲೈ 14ರಂದು ಮಧ್ಯಾಹ್ನ 1.30ರ ಹೊತ್ತಿಗೆ ಹುಡುಗಿ ಶಾಲೆಗೆ ಹೋಗಿದ್ದಳು. ಹಾಗೇ, 2.10ರ ಹೊತ್ತಿಗೆ ಅದೇ ಮಾರ್ಗದಲ್ಲಿ ವಾಪಸ್ ಬಂದಿದ್ದಳು. ಆಗ ಅಬ್ರಾರ್ ಖಾನ್ ಮತ್ತು ಆತನ ಗೆಳೆಯರು ಅಲ್ಲೇ ರಸ್ತೆ ಪಕ್ಕ ಕಟ್ಟೆ ಮೇಲೆ ಕುಳಿತಿದ್ದವರು ಹುಡುಗಿಯನ್ನು ನೋಡಿ, ‘ಈ ಐಟಂ ಎಲ್ಲಿಗೆ ಹೋಗುತ್ತಿದೆ?’ ಎಂದು ಕೇಳಿದ್ದ. ಬಾಲಕಿ ಸುಮ್ಮನೆ ಮುಂದೆ ಬಂದಾಗ ‘ಇಲ್ಲಿ ಕೇಳು ಐಟಂ, ಬಾ ಇಲ್ಲಿ’ ಎಂದೂ ಕರೆದಿದ್ದ. ಜತೆಗೆ ಅವಳ ಕೂದಲನ್ನೂ ಹಿಡಿದು ಎಳೆದಿದ್ದ. ಮನೆಗೆ ಬಂದ ಬಾಲಕಿ ತಂದೆ-ತಾಯಿ ಬಳಿ ಈ ವಿಚಾರ ಹೇಳಿಕೊಂಡಿದ್ದಳು. ಬಳಿಕ ಪಾಲಕರೇ ಮಗಳನ್ನು ಠಾಣೆಗೆ ಕರೆದುಕೊಂಡು ಹೋಗಿ, ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲು ಏರಿತ್ತು.
ಅಬ್ರಾರ್ ಖಾನ್ ತಾನೇನೂ ಅಪರಾಧ ಮಾಡಿಲ್ಲ ಎಂದೇ ವಾದಿಸುತ್ತ ಬಂದಿದ್ದ. ‘ ಆ ಹುಡುಗಿಗೆ ನಾನು ಸ್ನೇಹಿತ. ಆಕೆಯೊಂದಿಗೆ ಚೆನ್ನಾಗಿಯೇ ಇದ್ದೆ. ಆದರೆ ನಮ್ಮಿಬ್ಬರ ಸ್ನೇಹ ಬಾಲಕಿಯ ತಂದೆ-ತಾಯಿಗೆ ಇಷ್ಟ ಇರಲಿಲ್ಲ. ಹಾಗಾಗಿಯೇ ನನ್ನ ವಿರುದ್ಧ ದೂರು ನೀಡಿದ್ದಾರೆ’ ಎಂದು ಹೇಳಿಕೊಂಡಿದ್ದ. ಅದಕ್ಕೂ ಮೊದಲು ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಬರುವ ಹೊತ್ತಲ್ಲಿ ಪರಾರಿಯಾಗಿದ್ದ. ನಂತರದ ದಿನಗಳಲ್ಲಿ ನಾಲ್ಕು ಜನ ಸಾಕ್ಷಿ ಕೂಡ ಹೇಳಿದ್ದರು. ಇದೀಗ ತೀರ್ಪು ಹೊರಬಿದ್ದಿದ್ದು, 25ವರ್ಷದ ಉದ್ಯಮಿಗೆ ಜೈಲುಶಿಕ್ಷೆಯಾಗಿದೆ.
ಇದನ್ನೂ ಓದಿ: Rane Bungalow | ಕೇಂದ್ರ ಸಚಿವ ರಾಣೆಗೆ ಸೇರಿದ ಬಂಗ್ಲೆ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ಆದೇಶ