ನವ ದೆಹಲಿ: ಜಗದೀಪ್ ಧನಕರ್ ಅವರು ಇಂದು ದೇಶದ 14ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ಭವನದಲ್ಲಿ, ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಗದೀಪ್ ಧನಕರ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿ ಇನ್ನಿತರರು ಇದ್ದರು. ಇಂದು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಜಗದೀಪ್ ಧನಕರ್ ಅವರು ರಾಜ್ಘಾಟ್ಗೆ ಭೇಟಿ ಕೊಟ್ಟು, ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿದರು.
ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾಗಿರುವ ಜಗದೀಪ್ ಧನಕರ್ ಅವರು ಆಗಸ್ಟ್ 6ರಂದು ಉಪರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದಾರೆ. 528 ಮತಗಳನ್ನು ಪಡೆದು, ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಒಟ್ಟಾರೆ ಹೇಳಬೇಕು ಎಂದರೆ ಜಗದೀಪ್ ಧನಕರ್ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಶೇ.74.36ರಷ್ಟು ಮತ ಗಳಿಸಿದ್ದಾರೆ. 1997ರಿಂದ ಈಚೆಗೆ ಯಾವ ಉಪರಾಷ್ಟ್ರಪತಿಯೂ ಇಷ್ಟು ಮತ ಗಳಿಸಿ ಗೆದ್ದಿರಲಿಲ್ಲ.
ಜಗದೀಪ್ ಧನಕರ್ ಅವರು ಒಂದು ಕೃಷಿ ಕುಟುಂಬದಿಂದ ಬಂದವರು. ಮೂಲತಃ ರಾಜಸ್ಥಾನದ ಝುಂಜುನು ಜಿಲ್ಲೆಯವರು. ಚಿತ್ತೂರ್ಗರ್ಥ್ನಲ್ಲಿರುವ ಸೈನಿಕ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದರು. ನಂತರ ರಾಜಸ್ಥಾನ ಯೂನಿವರ್ಸಿಟಿಯಲ್ಲಿ ಎಲ್ಎಲ್ಬಿ ಅಧ್ಯಯನ ಮಾಡಿದರು. ಇವರು ವಕೀಲರಾಗಿ ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಪ್ರತಿನಿಧಿಸಿದ್ದಾರೆ. 1989ರಲ್ಲಿ ಮೊಟ್ಟಮೊದಲು ಝುಂಜುನು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾದರು. ಆಗ ಅವರು ಸ್ಪರ್ಧಿಸಿದ್ದು ಜನತಾ ದಳ್ನಿಂದ. ನಂತರ ಬಿಜೆಪಿ ಸೇರ್ಪಡೆಯಾದ ಅವರನ್ನು ಬಿಜೆಪಿ 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿತು. ಈ ಸಲ ಅಚ್ಚರಿಯೆಂಬಂತೆ ಉಪರಾಷ್ಟ್ರಪತಿ ಹುದ್ದೆಗೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತ್ತು.
ಇದನ್ನೂ ಓದಿ: Vice President Election 2022 | ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್ ಧನಕರ್ ಬಿಜೆಪಿ ಅಭ್ಯರ್ಥಿ