ಇಂದು ಪಶ್ಚಿಮ ಬಂಗಾಳದ ಹೌರಾಹ್ ರೈಲ್ವೆ ಸ್ಟೇಶನ್ನಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡುವ ವೇಳೆ ಹೈಡ್ರಾಮಾವೇ ನಡೆದು ಹೋಯಿತು. ಈ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತರ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರೂ ಭಾಗವಹಿಸಬೇಕಿತ್ತು. ಆದರೆ ಅಮ್ಮ ನಿಧನರಾದ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಆಗಮಿಸಿರಲಿಲ್ಲ.
ಹೌರಾಹ್-ನ್ಯೂ ಜಲಪೈಗುರಿ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ವೇಳೆ ರೈಲ್ವೆ ಸ್ಟೇಶನ್ನಲ್ಲಿ ನೆರೆದಿದ್ದವರೆಲ್ಲ ‘ಜೈ ಶ್ರೀರಾಮ್’ ಎಂದು ಕೂಗಲು ಪ್ರಾರಂಭಿಸಿದರು. ಇದರಿಂದ ತೀವ್ರ ಕಿರಿಕಿರಿ ಅನುಭವಿಸಿದ ಸಿಎಂ ಮಮತಾ ಬ್ಯಾನರ್ಜಿ, ‘ವೇದಿಕೆಗೆ ಹೋಗದೆ, ಜನರು ಕುಳಿತಿದ್ದ ಜಾಗಕ್ಕೇ ಬಂದು ಕುರ್ಚಿಯಲ್ಲಿ ಕುಳಿತರು. ಅದನ್ನು ಗಮನಿಸಿದ ಸಚಿವ ಅಶ್ವಿನಿ ವೈಷ್ಣವ್, ಮತ್ತು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಮಮತಾ ಬ್ಯಾನರ್ಜಿಯವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಹಾಗೇ, ವೇದಿಕೆಗೂ ಕರೆದಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಕಡೆಗೂ ವೇದಿಕೆ ಹತ್ತಲೇ ಇಲ್ಲ.
ಪಶ್ಚಿಮ ಬಂಗಾಳದ ಮೊದಲ ಮತ್ತು ದೇಶದ ಏಳನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಮತ್ತು ಇತರ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದರು. ಈ ರೈಲು ಹೌರಾಹ್ನಿಂದ ನ್ಯೂ ಜಲಪೈಗುರಿಗೆ 564 ಕಿಮೀ ದೂರ ಸಂಚಾರ ಮಾಡಲಿದೆ. ಈ ರೈಲು ಪ್ರಯಾಣದ ಅವಧಿ 7.45 ತಾಸು. ಬಾರೋಸಿ, ಮಾಲ್ಡಾ ಮತ್ತು ಬೋಲ್ಪುರದಲ್ಲಿ ನಿಲುಗಡೆಗೊಳ್ಳಲಿದೆ.
ಇದನ್ನೂ ಓದಿ: Heeraben Modi | ತನ್ನಮ್ಮ ಪಟ್ಟ ಕಷ್ಟ ನೆನೆದು ಅಮೆರಿಕದಲ್ಲಿ ಕಣ್ಣೀರು ಹಾಕಿದ್ದರು ಪ್ರಧಾನಿ ನರೇಂದ್ರ ಮೋದಿ