ನವ ದೆಹಲಿ: ಜೈವೀರ್ ಶೆರ್ಗಿಲ್ ಅವರು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಪತ್ರವನ್ನು ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದ ಅವರು, ‘ಕಾಂಗ್ರೆಸ್ನ ನಿರ್ಧಾರಗಳಲ್ಲಿ ಸಾರ್ವಜನಿಕರ ಅಥವಾ ದೇಶದ ಒಳಿತು ಇರುವುದಿಲ್ಲ. ಹಾಗೇ, ಸ್ವ ಹಿತಾಸಕ್ತಿಯೇ ಪ್ರಮುಖವಾಗಿರುವವರು ಪಕ್ಷದ ಪ್ರಮುಖ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ದೊಡ್ಡವರ ಮುಖಸ್ತುತಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಈಗ ಕಾಂಗ್ರೆಸ್ನಲ್ಲಿರುವ ನಿರ್ಣಾಯಕರ ದೃಷ್ಟಿಕೋನ ಮತ್ತು ಪಕ್ಷದ ಸಿದ್ಧಾಂತಕ್ಕೆ ಹೊಂದಾಣಿಕೆಯೇ ಆಗುತ್ತಿಲ್ಲ. ಇದು ಕಾಂಗ್ರೆಸ್ ಮೇಲೆ ಅಪಾರ ನಿರೀಕ್ಷೆ ಇಟ್ಟಿರುವ ಆಧುನಿಕ ಭಾರತದ ಜನರು ಅದರಲ್ಲೂ ಯುವಜನರಿಗೆ ನಿರಾಸೆ ಉಂಟು ಮಾಡುವ ಫಲಿತಾಂಶ ಕೊಡುತ್ತಿದೆ’ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.
ಜೈವೀರ್ ಶೆರ್ಗಿಲ್ ಅವರು ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರರಾಗಿದ್ದರೂ ಕಳೆದ ಕೆಲವು ತಿಂಗಳಿಂದಲೂ ಒಂದು ಸುದ್ದಿಗೋಷ್ಠಿ ನಡೆಸಲು ಅವರಿಗೆ ಅವಕಾಶ ನೀಡಿರಲಿಲ್ಲ. ಅದೂ ಒಂದು ಅಸಮಾಧಾನದಿಂದ ಶೆರ್ಗಿಲ್ ರಾಜೀನಾಮೆ ಕೊಟ್ಟಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಗುಲಾಂ ನಬಿ ಆಜಾದ್ ಅವರು ಕೂಡ ಪಕ್ಷದ ಪ್ರಮುಖ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ಜಮ್ಮು-ಕಾಶ್ಮೀರದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಅದಾದ ಒಂದು ತಾಸಿನಲ್ಲಿ ತಮ್ಮ ಹುದ್ದೆ ತೊರೆದಿದ್ದರು. ಹಾಗೇ, ಆನಂದ್ ಶರ್ಮಾ ಅವರು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸಂಚಾಲಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ನಿರಂತರವಾಗಿ ನಿರ್ಲಕ್ಷ್ಯವಾಗುತ್ತಿದ್ದೇನೆ ಮತ್ತು ಅವಮಾನಿತನಾಗುತ್ತಿದ್ದೇನೆ. ಹಾಗಾಗಿ ಪಕ್ಷ ಬಿಡುತ್ತಿದ್ದೇನೆ ಎಂದಿದ್ದರು. ಅದರ ಬೆನ್ನಲ್ಲೇ ಇದೀಗ ಶೆರ್ಗಿಲ್ ಕೂಡ ಪಕ್ಷದ ಒಂದು ಮಹತ್ವದ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.
ಅಂದಹಾಗೇ, ಶೆರ್ಗಿಲ್ ಮೂಲತಃ ಪಂಜಾಬ್ನವರು. ಸುಪ್ರೀಂಕೋರ್ಟ್ ವಕೀಲರು ಕೂಡ ಹೌದು. ಅವರಿಗೆ ಇನ್ನೂ 39ವರ್ಷಗಳಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಮುಖ ಯುವ ನಾಯಕರು. ಒಂದೆಡೆ ಕಾಂಗ್ರೆಸ್ನಲ್ಲಿ ನೂತನ ಅಧ್ಯಕ್ಷರ ನೇಮಕಾತಿ ಕಸರತ್ತು ನಡೆಯುತ್ತಿದೆ. ಇನ್ನೊಂದೆಡೆ ಇಂದು ಸೋನಿಯಾ ಗಾಂಧಿ ತಮ್ಮಿಬ್ಬರು ಮಕ್ಕಳೊಂದಿಗೆ ವಿದೇಶಕ್ಕೆ ಹೋಗಿದ್ದಾರೆ. ಹಾಗೇ, ಪ್ರಮುಖ ನಾಯಕರು ಒಬ್ಬೊಬ್ಬರಾಗಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Sonia Gandhi | ಮಗ, ಮಗಳ ಜತೆ ಸೋನಿಯಾ ಗಾಂಧಿ ಇಂದು ವಿದೇಶಕ್ಕೆ ಹೋಗುತ್ತಿರುವುದೇಕೆ?