ಪಂಜಾಬ್ನ ಫಿಲ್ಲೌರ್ನಲ್ಲಿ ಸಾಗುತ್ತಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯೊಟ್ಟಿಗೆ ನಡೆಯುತ್ತಿದ್ದ ಜಲಂಧರ್ ಕ್ಷೇತ್ರದ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ (76) (Santokh Singh Chaudhary), ದಾರಿ ಮಧ್ಯೆಯೇ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಕಾಲ್ನಡಿಗೆ ಶುರುವಾದ ಕೆಲವೇ ಹೊತ್ತಲ್ಲಿ ಈ ದುರಂತ ನಡೆದಿದೆ. ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಚೌಧರಿ ಅಸ್ವಸ್ಥಗೊಂಡು ಕೆಳಗೆ ಬಿದ್ದರು. ಯಾತ್ರೆಯನ್ನು ಕೂಡಲೇ ಸ್ಥಗಿತಗೊಳಿಸಿ, ಅವರನ್ನು ಆಂಬುಲೆನ್ಸ್ ಮೂಲಕ ಪಾಗ್ವಾರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಪ್ರಯೋಜನವಾಗಲಿಲ್ಲ. ಅವರ ಜೀವ ಹೋಗಿತ್ತು ಎಂದು ಪಕ್ಷದ ಹಿರಿಯ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ತಿಳಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ನಾಳೆ ಮುಂದುವರಿಯುವ ಸಾಧ್ಯತೆ ಇದೆ.
ಸಂತೋಖ್ ಸಿಂಗ್ ಚೌಧರಿ ಅವರು 1946ರ ಜೂನ್ 18ರಂದು ಪಂಜಾಬ್ನ ಧಳಿವಾಲ್ನಲ್ಲಿ ಹುಟ್ಟಿದ್ದರು. ಇವರು ವಕೀಲರಾಗಿದ್ದವರು. ಬಳಿಕ ರಾಜಕೀಯ ಪ್ರವೇಶ ಮಾಡಿದ್ದಾರೆ. ಈ ಹಿಂದೆ ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಚಿವರೂ ಆಗಿದ್ದರು. ಬಳಿಕ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಜಲಂಧರ್ನಿಂದ ಗೆದ್ದು ಸಂಸದರಾಗಿದ್ದಾರೆ. ಇವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತಿತರ ನಾಯಕರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Bharat Jodo Yatra | ಭಾರತ್ ಜೋಡೋ ಯಾತ್ರೆಯ ಸಮಾರೋಪಕ್ಕೆ 21 ಪಕ್ಷಗಳಿಗೆ ಆಹ್ವಾನ, ಜೆಡಿಎಸ್‌ಗಿಲ್ಲ ಆಮಂತ್ರಣ