ನವದೆಹಲಿ: ದೇಶದ ಮುಸ್ಲಿಮರು ಸೇರಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯಲಾಗುತ್ತಿದೆ, ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪಗಳು, ಟೀಕೆಗಳು, ವಿದೇಶಿ ಪತ್ರಿಕೆಗಳ ವರದಿಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದರ ಬೆನ್ನಲ್ಲೇ, “ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಮುಸ್ಲಿಮರ ಮನದ ಮಾತನ್ನೂ ಕೇಳಬೇಕು” ಎಂಬುದಾಗಿ ದೆಹಲಿಯಲ್ಲಿರುವ ಜಾಮಾ ಮಸೀದಿಯ ಶಾಹಿ ಇಮಾಮ್ (Shahi Imam On Modi) ಸೈಯದ್ ಅಹ್ಮದ್ ಬುಖಾರಿ (Syed Ahmed Bukhari) ಒತ್ತಾಯಿಸಿದ್ದಾರೆ.
ಮಾತುಕತೆ ನಡೆಸಲಿ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳು ನಡೆಸಿಕೊಡುವ ಮನ್ ಕೀ ಬಾತ್ ರೇಡಿಯೊ ಕಾರ್ಯಕ್ರಮವನ್ನು ಉಲ್ಲೇಖಿಸಿ ಸೈಯದ್ ಅಹ್ಮದ್ ಬುಖಾರಿ ಅವರು ಮೋದಿ ಅವರನ್ನು ಒತ್ತಾಯಿಸಿದರು. “ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳ ಜತೆ ಮಾತುಕತೆ ನಡೆಸಬೇಕು. ಮುಸ್ಲಿಮರ ಸಮಸ್ಯೆಗಳನ್ನು ಕೂಡ ಆಲಿಸಬೇಕು. ಮೇಲಾಗಿ, ಮುಸ್ಲಿಮರ ಮನದ ಮಾತು ಆಲಿಸಬೇಕು” ಎಂದು ಹೇಳಿದರು.
“ಭಾರತದಲ್ಲಿ ಮುಸ್ಲಿಮರ ನಂಬಿಕೆಗಳನ್ನು ಬಹಿರಂಗವಾಗಿಯೇ ಖಂಡಿಸಲಾಗುತ್ತಿದೆ. ನುಹ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವು ಗ್ರಾಮಗಳು ಮುಸ್ಲಿಮರನ್ನು ಬಹಿಷ್ಕಾರ ಹಾಕಿವೆ. ಮುಸ್ಲಿಮರ ಜತೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳುತ್ತಿವೆ. ಚಲಿಸುತ್ತಿದ್ದ ರೈಲಿನಲ್ಲಿಯೇ ನಾಲ್ವರನ್ನು ಕೊಲೆ ಮಾಡಲಾಗಿದೆ. ಜಗತ್ತಿನಲ್ಲಿ ಮುಸ್ಲಿಮೇತರರು ವಾಸಿಸುವ 57 ದೇಶಗಳಿವೆ. ಆದರೆ, ಯಾವ ದೇಶದಲ್ಲೂ ಮುಸ್ಲಿಮೇತರರ ಜೀವಕ್ಕೆ ಕುತ್ತಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿ: Ram Mandir: ರಾಮ ಮಂದಿರದ ಗರ್ಭಗುಡಿ ಕಾಮಗಾರಿ ಮುಸ್ಲಿಮರಿಗೆ ನೀಡಿದ್ದು ಸರಿಯಲ್ಲ ಎಂದ ಮುತಾಲಿಕ್
ದೇಶದಲ್ಲಿ ಹಿಂದುಗಳು ಹಾಗೂ ಮುಸ್ಲಿಮರ ಸಂಬಂಧ, ಸೌಹಾರ್ದದ ಬಗ್ಗೆಯೂ ಸೈಯದ್ ಅಹ್ಮದ್ ಬುಖಾರಿ ಮಾತನಾಡಿದರು. “ದೇಶದಲ್ಲಿ ಹಿಂದುಗಳು ಹಾಗೂ ಮುಸ್ಲಿಮರ ಸಂಬಂಧವು ದಿನೇದಿನೆ ಹಳಸುತ್ತಿದೆ. ಇಂತಹ ಕೆಟ್ಟ ದಿನಗಳನ್ನು ನೋಡಲು ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರೇ? ಹಿಂದುಗಳು ಹಾಗೂ ಮುಸ್ಲಿಮರು ಬೇರಾಗಿ ಬದುಕಲು ಸಾಧ್ಯವೇ? ದಯಮಾಡಿ ನರೇಂದ್ರ ಮೋದಿ ಅವರು ಭಾರತದ ಮುಸ್ಲಿಮರ ಮನದ ಮಾತನ್ನು ಆಲಿಸಬೇಕು” ಎಂದು ಹೇಳಿದರು.