ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಮಗ, ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ಬಿಟ್ಟಾ ಕರಾಟೆ ಪತ್ನಿ ಸೇರಿ, ಒಟ್ಟು ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ವಜಾಗೊಳಿಸಿದೆ. ಡಾ. ಮುಹೀತ್ ಅಹ್ಮದ್ ಭಟ್ ಮತ್ತು ಮಜೀದ್ ಹುಸೇನ್ ಖಾದಿರಿ,ಇನ್ನಿಬ್ಬರು ವಜಾಗೊಂಡ ಸರ್ಕಾರಿ ಉದ್ಯೋಗಿಗಳು. ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಂಟು ಹೊಂದಿರುವವರನ್ನು ಹುಡುಕಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ತನಿಖೆಯ ಭಾಗವಾಗಿಯೇ ಈ ನಾಲ್ವರನ್ನು ವಜಾಗೊಳಿಸಲಾಗಿದೆ.
1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಪ್ರಮುಖ ಆರೋಪಿ ಬಿಟ್ಟಾ ಕರಾಟೆ (ಫಾರೂಕ್ ಅಹ್ಮದ್ ದಾರ್)ಯ ಪತ್ನಿ, ಅಸ್ಸಾಬಾ-ಉಲ್-ಅರ್ಜಮಂಡ್ ಖಾನ್ ಜಮ್ಮು ಕಾಶ್ಮೀರದ ಆಡಳಿತ ಸೇವೆಗಳ ಅಧಿಕಾರಿಯಾಗಿದ್ದು, ಗ್ರಾಮೀಣಾಭಿವೃದ್ಧಿ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯನ್ನು ಈಗ ವಜಾಗೊಳಿಸಲಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಪುತ್ರ ಸೈಯದ್ ಅಬ್ದುಲ್ ಮುಯೀದ್, ಜಮ್ಮು ಕಾಶ್ಮೀರದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇನ್ನುಳಿದ ಡಾ. ಮುಹೀತ್ ಅಹ್ಮದ್ ಭಟ್ ಮತ್ತು ಮಜೀದ್ ಹುಸೇನ್ ಖಾದಿರಿ ಇಬ್ಬರೂ ಕಾಶ್ಮೀರ ಯೂನಿವರ್ಸಿಟಿ ಉದ್ಯೋಗಿಗಳು.
ಉಗ್ರಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪ ಹೊತ್ತಿರುವ ಸರ್ಕಾರಿ ಉದ್ಯೋಗಿಗಳನ್ನು ಮುಲಾಜಿಲ್ಲದೆ ವಜಾ ಮಾಡಲಾಗುತ್ತಿದೆ. ಜಮ್ಮು-ಕಾಶ್ಮೀರದ ಭದ್ರತೆ ದೃಷ್ಟಿಯಿಂದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ಭಾರತ ಸಂವಿಧಾನದ ಆರ್ಟಿಕಲ್ 311ರಡಿ ಇವರನ್ನೆಲ್ಲ ವಜಾಗೊಳಿಸಲಾಗಿದೆ. ಆರೋಪ ಹೊತ್ತಿರುವ ಉದ್ಯೋಗಿಗಳನ್ನು ಯಾವುದೇ ವಿಚಾರಣೆಗೆ ಒಳಪಡಿಸದೆ, ನೇರವಾಗಿ ವಜಾಗೊಳಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಆರ್ಟಿಕಲ್ ಇದು. ಕಳೆದ ವರ್ಷವೂ ಕೂಡ ಹಲವು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.
ಇದನ್ನೂ ಓದಿ: ಕಾಶ್ಮೀರದಲ್ಲಿ ವಲಸೆ ಕಾರ್ಮಿಕನನ್ನು ಕೊಂದ ಉಗ್ರರು; ಮಧ್ಯರಾತ್ರಿ ಗುಂಡಿನ ದಾಳಿ