Site icon Vistara News

ಹೈಸ್ಕೂಲ್​ ಕ್ರೀಡಾಕೂಟದಲ್ಲಿ ದುರಂತ; ವಿದ್ಯಾರ್ಥಿಯ ಕುತ್ತಿಗೆಯ ಬಲಭಾಗಕ್ಕೆ ಚುಚ್ಚಿ ಎಡಭಾಗದಿಂದ ಹೊರಬಿದ್ದ ಜಾವೆಲಿನ್​

Javelin 2

ಒಡಿಶಾದ ಬಲಂಗೀರ್ ಜಿಲ್ಲೆಯ ಸರ್ಕಾರಿ ಹೈಸ್ಕೂಲ್​​ವೊಂದರಲ್ಲಿ ನಡೆಯುತ್ತಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಯೊಬ್ಬ ಎಸೆದ ಜಾವೆಲಿನ್​ (ಈಟಿ) ಇನ್ನೊಬ್ಬ ವಿದ್ಯಾರ್ಥಿಯ ಕತ್ತಿಗೆ ಚುಚ್ಚಿ, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವಕ್ಕೇನೂ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ನಡೆದಿದ್ದು ಅಗಲ್​​ಪುರ್​ ಗಂಡುಮಕ್ಕಳ ಪಂಚಾಯತ್​ ಹೈಸ್ಕೂಲ್​​ನಲ್ಲಿ. ಡಿಸೆಂಬರ್​ 17ರಂದು ಕ್ರೀಡಾಕೂಟ ನಡೆಯುತ್ತಿತ್ತು. ಬೆಳಗ್ಗೆಯಿಂದಲೂ ಶಾಲಾ ಮೈದಾನದಲ್ಲಿ ಮಕ್ಕಳ ಕಲರವ, ವಿವಿಧ ಆಟಗಳು ಶುರುವಾಗಿದ್ದವು. ಒಂದೆಡೆ ಕ್ರೀಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕೆಲವು ಮಕ್ಕಳು ತಾವು ಮುಂದೆ ಭಾಗವಹಿಸಬೇಕಾದ ಆಟಗಳ ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬ ಹುಡುಗ ಜಾವೆಲಿನ್​ ಥ್ರೋ ಪ್ರ್ಯಾಕ್ಟೀಸ್ ಮಾಡುತ್ತಿದ್ದ. ಆತ ಎಸೆದ ಜಾವೆಲಿನ್​ ಹಾರಿ ಬಂದು ಅಲ್ಲೇ ಸ್ವಲ್ಪ ದೂರದಲ್ಲಿ ನಿಂತಿದ್ದ 9ನೇ ಕ್ಲಾಸ್​ ಹುಡುಗ ಸದಾನಂದ್​ ಮೆಹೆರ್​ ಎಂಬಾತ ಕುತ್ತಿಗೆಯ ಬಲಭಾಗಕ್ಕೆ ಚುಚ್ಚಿ, ಎಡಭಾಗದಿಂದ ಹೊರಬಿದ್ದಿದೆ.

ಬಾಲಕನನ್ನು ಕೂಡಲೇ ಬಲಂಗೀರ್​ನ ಭಿಬಾ ಭೋಯ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನನ್ನು ಐಸಿಯುದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಹಾಗೇ ಬಾಲಕನ ಚಿಕಿತ್ಸೆಗೆ ಜಿಲ್ಲಾಡಳಿತದಿಂದ 30 ಸಾವಿರ ರೂಪಾಯಿ ನೆರವು ನೀಡಲಾಗಿದೆ. ವಿದ್ಯಾರ್ಥಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಎಷ್ಟೇ ಖರ್ಚಾದರೂ ಅದನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒದಗಿಸಲಾಗುವುದು ಎಂದೂ ಹೇಳಿದ್ದಾರೆ. ಇತ್ತ ಶಾಲೆಯಲ್ಲಿ ಕ್ರೀಡಾಕೂಟ ರದ್ದುಗೊಂಡಿದೆ.

ಇದನ್ನೂ ಓದಿ: Stray Dogs Attack | ಬೀದಿ ನಾಯಿಗಳ ದಾಳಿಗೆ ನಾಲ್ಕೂವರೆ ವರ್ಷದ ಬಾಲಕ ಬಲಿ

Exit mobile version