ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಎನ್ಕೌಂಟರ್ನಲ್ಲಿ ಭಾರತೀಯ ಸೇನೆ ಯೋಧ ಸಿಪಾಯಿ ಪವನ್ ಕುಮಾರ್ (28) ಹುತಾತ್ಮರಾಗಿದ್ದಾರೆ (Army Jawan Pawan Kumar). ಇನ್ನೊಬ್ಬ ಯೋಧ ಗಾಯಗೊಂಡಿದ್ದಾಗಿ ವರದಿಯಾಗಿದೆ.
ಫೆ.28ರ ಮುಂಜಾನೆಯಿಂದಲೂ ಪುಲ್ವಾಮಾದ ಆವಂತಿಪೋರಾದಲ್ಲಿರುವ ಪದಗಾಂಪೋರಾ ಎಂಬಲ್ಲಿ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿತ್ತು. ಇಲ್ಲಿ ಉಗ್ರರು ಮಸೀದಿಯಲ್ಲಿ ಅಡಗಿ ಕುಳಿತಿದ್ದರು. ಅವರ ವಿರುದ್ಧ ಸೇನೆ, ಸಿಆರ್ಪಿಎಫ್ ಸಿಬ್ಬಂದಿ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಭಾನುವಾರ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾರನ್ನು ಹತ್ಯೆಗೈದ ಉಗ್ರ ಸೇರಿ, ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದು ಹಾಕಿದ್ದವು.
ಇದನ್ನೂ ಓದಿ: ಪುಲ್ವಾಮಾದಲ್ಲಿ ಮತ್ತೊಬ್ಬ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ; ಶಸ್ತ್ರಾಸ್ತ್ರಗಳ ವಶ, ಮುಂದುವರಿದ ಎನ್ಕೌಂಟರ್
ಈ ಹೋರಾಟದಲ್ಲಿ ಭಾರತೀಯ ಸೇನೆಯ ಯೋಧ ಪವನ್ ಕುಮಾರ್ ಹುತಾತ್ಮರಾಗಿದ್ದು, ಇವರ ಮೂಲತಃ ಶಿಮ್ಲಾದವರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಸೇನೆ ‘ಪುಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಹೋರಾಟದಲ್ಲಿ ಜೀವ ತ್ಯಾಗ ಮಾಡಿದ ಪವನ್ ಕುಮಾರ್ಗೆ ನಮ್ಮ ಸೆಲ್ಯೂಟ್. ಅವರ ಕುಟುಂಬ ಈ ಮರಣದ ದುಃಖ ಸಹಿಸಲಿ’ ಎಂದು ಹೇಳಿದೆ. ಪವನ್ ಕುಮಾರ್ ಅವರು 55ನೇ ರಾಷ್ಟ್ರೀಯ ರೈಫಲ್ಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉಗ್ರರ ವಿರುದ್ಧ ವೀರಾವೇಶದಿಂದ ಹೋರಾಡಿದ ಪವನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.