ನವ ದೆಹಲಿ: ಬ್ರಾಹ್ಮಣ ಸಮುದಾಯದ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದ ತೃಣಮೂಲ ಕಾಂಗ್ರೆಸ್ನ ರಾಜ್ಯ ಸಭಾ ಸಂಸದ ಜವಾಹರ್ ಸರ್ಕಾರ್ ವಿರುದ್ಧ ಅನೇಕ ಪ್ರಮುಖ ನಾಯಕರು, ಗಣ್ಯರು ವಾಗ್ದಾಳಿ ನಡೆಸಿದ್ದಾರೆ. ತಮ್ಮ ಟ್ವೀಟ್ನಿಂದ ಆಗುತ್ತಿರುವ ವಿವಾದದ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಜವಾಹರ್ ಸರ್ಕಾರ್ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಹಾಗಿದ್ದಾಗ್ಯೂ ಅದರ ಸ್ಕ್ರೀನ್ಶಾಟ್ಗಳು ಎಲ್ಲೆಡೆ ಹರಿದಾಡುತ್ತಿವೆ.
‘ಭಾರತದಲ್ಲಿ ಇಸ್ಲಾಂ ರಾಜರುಗಳ ಆಡಳಿತ ಇತಿಹಾಸದಲ್ಲಿ ಒಂದು ರಕ್ತಸಿಕ್ತ ಅಧ್ಯಾಯ. ಕ್ರೂರ ರಾಜರ ಆಳ್ವಿಕೆಯಿಂದ 80 ಮಿಲಿಯನ್ಗಳಷ್ಟು ಜನಸಂಖ್ಯೆ ಕಡಿಮೆಯಾಯಿತು. 2.5 ಮಿಲಿಯನ್ ಮಹಿಳೆಯರನ್ನು ಗುಲಾಮರಂತೆ ಹರಾಜು ಹಾಕಲಾಯಿತು. ಖಲ್ಜಿ ನಳಂದಾವನ್ನು ಸುಟ್ಟು ಹಾಕಿದ. ಆದರೆ ನಾವು ಮಾಡಿದ್ದೇನು? ಅದೇ ಖಲ್ಜಿ ಹೆಸರನ್ನು ನಳಂದಾ ಬಳಿಯ ರೈಲ್ವೆ ಸ್ಟೇಶನ್ಗೆ ಇಟ್ಟಿದ್ದೇವೆ..’ ಎಂದು ಖ್ಯಾತ ಪ್ಯಾನಲಿಸ್ಟ್, ಅಂಕಣಕಾರ ಆನಂದ್ ರಘುನಾಥನ್ ಅವರು ಟ್ವೀಟ್ ಮಾಡಿದ್ದರು. ಆ ಟ್ವೀಟ್ ರೀಟ್ವೀಟ್ ಮಾಡಿಕೊಂಡ ಜವಾಹರ್ ಸಿರ್ಕಾರ್, ‘ಮುಸ್ಲಿಮರು ಕಿತ್ತುಕೊಂಡಿದ್ದು ಶೇ.1ರಷ್ಟನ್ನು. ಅದಕ್ಕಾಗಿ ಶೇ.99ರಷ್ಟು ಭಾರತೀಯರು ಇಸ್ಲಾಂ ಪೋಬಿಯಾಕ್ಕೆ ಒಳಗಾಗಿದ್ದಾರೆ. ಆದರೆ ಬೌದ್ಧ ಧರ್ಮಕ್ಕೆ ಸಂಬಂಧಪಟ್ಟ ಮಹತ್ವದ ಶಿಲ್ಪಕಲೆಗಳನ್ನು ನಾಶ ಮಾಡಿದ್ದು ಯಾರು? ಬ್ರಾಹ್ಮಣರೇ ಅಲ್ಲವೇ?. ಇಲ್ಲಿನ ಬ್ರಾಹ್ಮಣರ ಅಹಂಕಾರ ತಗ್ಗಿಸುವ ಕೆಲಸವನ್ನು ಶಿಕ್ಷಣ ಮಾಡಬೇಕು’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬ್ರಾಹ್ಮಣ ಸಮುದಾಯದ ಗಣ್ಯರು, ಪ್ರಮುಖರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಸರ್ಕಾರ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಸಿ. ರಾಜಗೋಪಾಲಾಚಾರಿ (ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ, ವಕೀಲ, ಖ್ಯಾತ ಬರಹಗಾರ) ಅವರ ಮರಿಮೊಮ್ಮಗ ಸಿ.ಆರ್.ಕೇಶವನ್ ಅವರು ‘ಸರ್ಕಾರ್ ಜೀ ಅವರೇ, ನೀವು ಯಾವ ಸಮುದಾಯ (ಬ್ರಾಹ್ಮಣ)ದ ವಿರುದ್ಧ ವಿಷ ಕಾರುತ್ತಿದ್ದೀರೋ, ಅದೇ ಸಮುದಾಯದಿಂದಲೇ ನಿಮ್ಮ ನಾಯಕಿ ಮಮತಾ ಬ್ಯಾನರ್ಜಿ ಕೂಡ ಬಂದಿದ್ದಾರೆ’ ಎಂದು ಹೇಳಿದ್ದಾರೆ. ಹಾಗೇ, ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಜವಾಹರ್ ಸರ್ಕಾರ್ ಅವರ ಮಾತುಗಳನ್ನು ಖಂಡಿಸಿದ್ದಾರೆ. ‘ನಿಮ್ಮ ಮಾತುಗಳಿಗೆ ನನ್ನ ಬಲವಾದ ಆಕ್ಷೇಪವಿದೆ. ಒಂದು ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಇದೊಂದು ಅಸಹ್ಯಕರ ಮತ್ತು ದ್ವೇಷಪೂರಿತ ಟ್ವೀಟ್. ಕೂಡಲೇ ನಿಮ್ಮ ಟ್ವೀಟ್ ಡಿಲೀಟ್ ಮಾಡಿ’ ಎಂದು ಆಗ್ರಹಿಸಿದ್ದರು. ಸದ್ಯ ಸರ್ಕಾರ್, ತಮ್ಮ ಟ್ವೀಟ್ ಡೀಲಿಟ್ ಮಾಡಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.
ಇದನ್ನೂ ಓದಿ: Vishwakarma Jayanti | ಬ್ರಾಹ್ಮಣರಿಗೆ ಮೀಸಲಾತಿ ಕೊಟ್ಟಿದ್ದು ಸಂವಿಧಾನ ವಿರೋಧಿ ನೀತಿ: ಸಿದ್ದರಾಮಯ್ಯ