ಇಂದೋರ್ : ಅನುಮತಿ ಇಲ್ಲದೇ ತಮ್ಮ ಫೋಟೋಗಳನ್ನು ಕ್ಲಿಕ್ಕಿಸುವುದು ಹಿರಿಯ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ (Jaya Bachchan) ಅವರಿಗೆ ಕೊಂಚವೂ ಹಿಡಿಸುವುದಿಲ್ಲ. ಅಂಥವರ ವಿರುದ್ಧ ಸ್ಥಳದಲ್ಲೇ ರೇಗಾಡುತ್ತಾರೆ ಅವರು. ಈ ಹಿಂದೆ ಇಂಥ ಹಲವು ಪ್ರಸಂಗಗಳು ನಡೆದಿದ್ದು, ಇಂಟರ್ನೆಂಟ್ನಲ್ಲಿ ಹಲವು ವಿಡಿಯೊಗಳು ಇದಕ್ಕೆ ಪೂರಕ ಸಾಕ್ಷಿಗಳನ್ನು ಒದಗಿಸುತ್ತವೆ. ಆದರೆ, ಪ್ಯಾಪರಾಜಿಗಳಿಗೆ ಇವೆಲ್ಲವೂ ಅರ್ಥವಾಗುವುದಿಲ್ಲ. ಮತ್ತೆ ಮತ್ತೆ ಅವರ ಚಿತ್ರವನ್ನು ತೆಗೆಯಲು ಹೋಗಿ ಬೈಸಿಕೊಳ್ಳುತ್ತಿದ್ದಾರೆ. ಅಂಥದ್ದೇ ಒಂದು ಪ್ರಸಂಗ ಇಂದೋರ್ ಏರ್ಪೋರ್ಟ್ನಲ್ಲಿ ನಡೆದಿದ್ದು ಆ ವಿಡಿಯೊ ಇನ್ಸ್ಟಾಗ್ರಾಮ್ನಲ್ಲಿದೆ.
ಪತಿ ಅಮಿತಾಭ್ ಬಚ್ಚನ್ ಅವರ ಜತೆ ಇಂದೋರ್ಗೆ ಬಂದಿದ್ದ ಜಯಾ ಬಚ್ಚನ್ ಅವರು ಏರ್ಪೋರ್ಟ್ನಲ್ಲಿ ಸಾಗುತ್ತಿರುವಾಗ ವ್ಯಕ್ತಿಯೊಬ್ಬರು ಹೂವಿನ ಬೊಕೆ ಕೊಡಲು ಮುಂದಾಗುತ್ತಾರೆ. ಹಿಂದೆ ಇದ್ದ ವ್ಯಕ್ತಿ ಆ ಕ್ಷಣವನ್ನು ವಿಡಿಯೊ ಮಾಡಲು ಮುಂದಾಗುತ್ತಾರೆ. ಕೆರಳಿದ ಜಯಾ ಅವರು, ದಯವಿಟ್ಟು ಫೋಟೊ ತೆಗಿಯಬೇಡಿ ಎಂದು ಹೇಳುತ್ತಾರೆ. ಆದರೂ ಅತ ಮುಂದುವರಿಸುತ್ತಾನೆ.
ಚಿತ್ರೀಕರಣ ಮಾಡುವುದು ಮುಂದುವರಿದಂತೆ ಮತ್ತಷ್ಟು ಕ್ರೋಧಗೊಂಡ ಜಯಾ, ನಾನು ಇಂಗ್ಲಿಷ್ನಲ್ಲಿ ಹೇಳುತ್ತಿರುವುದು ನಿಮಗೆ ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ತಕ್ಷಣ ಮುಂದಿದ್ದ ವ್ಯಕ್ತಿ ವಿಡಿಯೊ ಮಾಡುತ್ತಿದ್ದವನಿಗೆ ಅಡ್ಡ ಬರುತ್ತಾನೆ. ಕೋಪ ತಣಿಯದ ಜಯಾ ಬಚ್ಚನ್, ಇಂಥ ವ್ಯಕ್ತಿಗಳನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದ ಹೇಳುತ್ತಾರೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಜಯಾ ಅವರನ್ನು ಹಿಟ್ಲರ್ ಎಂದು ಕರೆದರೆ, ಇನ್ನೂ ಹಲವರು ಅನುಮತಿ ಇಲ್ಲದೇ ಫೋಟೊ ತೆಗೆಯುವುದು ಅಥವಾ ವಿಡಿಯೊಗ್ರಫಿ ಮಾಡುವುದುತಪ್ಪು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಮಿತಾಭ್ ಗೆದ್ದ 6 ಸವಾಲುಗಳು! ತಿರಸ್ಕಾರ, ಅಪಮಾನ, ನೋವುಗಳನ್ನು ಮೀರಿ ನಿಂತ ಖುಷಿ