ಭುವನೇಶ್ವರ್: ಒಡಿಶಾದ ಭುವನೇಶ್ವರ್ನ ಹೊರವಲಯದಲ್ಲಿರುವ ಗೋಪಿನಾಥ್ಪುರ ದೇವಸ್ಥಾನದಲ್ಲಿ, ದೇವರಿಗೆ ಹಾಕಿದ್ದ ಆಭರಣಗಳನ್ನು ಕದ್ದ ಕಳ್ಳ (Jewel Thief), 9 ವರ್ಷಗಳ ಬಳಿಕ ಅವನ್ನೆಲ್ಲ ಹಿಂದಿರುಗಿಸಿದ್ದಾನೆ. ಹಾಗಂತ ಕಳ್ಳ ಯಾರು ಎಂದು ಗೊತ್ತಾಗಿಲ್ಲ. 2014ರಲ್ಲಿ ಕಳವಾಗಿದ್ದ ಆ ಆಭರಣಗಳೆಲ್ಲ ಸೋಮವಾರ ದೇಗುಲದ ಬಳಿಯೇ ಸಿಕ್ಕಿದೆ. ಒಂದು ದೊಡ್ಡ ಬ್ಯಾಗ್ನಲ್ಲಿ ಆಭರಣಗಳೆಲ್ಲ ಇದ್ದವು. ಆ ಬ್ಯಾಗ್ನಲ್ಲಿ ಒಂದು ಪತ್ರವೂ ಇತ್ತು. ಅದು ಆ ಕಳ್ಳನೇ ಬರೆದಿಟ್ಟಿದ್ದು ಆಗಿತ್ತು. ಅಷ್ಟೇ ಅಲ್ಲ, ಜತೆಗೆ 301 ರೂಪಾಯಿ ಇಟ್ಟು ಹೋಗಿದ್ದ. 201ರೂಪಾಯಿ ದೇವಸ್ಥಾನಕ್ಕೆ ದಕ್ಷಿಣೆ ಮತ್ತು 100 ರೂಪಾಯಿ ತನ್ನ ತಪ್ಪಿಗೆ ದಂಡ ಎಂದೂ ಪತ್ರದಲ್ಲಿ ಬರೆದಿದ್ದಾನೆ.
‘9ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ಯಾಗ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಆಭರಣಗಳನ್ನು ಕೊಂಡೊಯ್ದಿದ್ದೆ. ಅಂದು ಆಭರಣಗಳನ್ನು ತೆಗೆದುಕೊಂಡು ಹೋದಾಗಿನಿಂದಲೂ ಹಲವು ಸಮಸ್ಯೆಗಳನ್ನು ಎದುರಿಸಿದೆ. ಒಂದಲ್ಲ ಒಂದು ಸಮಸ್ಯೆ ಬರುತ್ತಲೇ ಇತ್ತು. ಹಾಗಾಗಿ ಆಭರಣಗಳನ್ನೆಲ್ಲ ಮತ್ತೆ ದೇವರಿಗೆ ಒಪ್ಪಿಸಲು ನಿರ್ಧಿರಿಸಿ ತಂದಿಟ್ಟಿದ್ದೇನೆ. ಆದರೆ ನಾನು ಈ ಪತ್ರದಲ್ಲಿ ನನ್ನ ಹೆಸರನ್ನಾಗಲೀ, ನನ್ನ ಹಳ್ಳಿ, ವಿಳಾಸವನ್ನಾಗಲೀ ಉಲ್ಲೇಖ ಮಾಡುವುದಿಲ್ಲ’ ಎಂದಿದ್ದಾರೆ.
ಈ ಬ್ಯಾಗ್ನಲ್ಲಿರುವುದು ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು. ಶಿರಸ್ತ್ರಾಣ, ಕಿವಿಯೋಲೆಗಳು, ಬ್ರೇಸ್ಲೆಟ್ಗಳು ಇವೆ. ಇವೆಲ್ಲವೂ ಗೋಪಿನಾಥ ದೇವಸ್ಥಾನದಲ್ಲಿ ಇರುವ ಕೃಷ್ಣ ಮತ್ತು ರಾಧೆಗೆ ಸೇರಿದ್ದಾಗಿತ್ತು. ಒಂದು ಕೊಳಲು ಕೂಡ ಇತ್ತು. ಇದೀಗ ಬ್ಯಾಗ್ನ್ನು ಕಳ್ಳ ದೇವಸ್ಥಾನದ ಪಕ್ಕದಲ್ಲಿರುವ ಮನೆಯ ಬಳಿಯೇ ಇಟ್ಟು ಹೋಗಿದ್ದಾನೆ. 2014ರಲ್ಲಿ ಆಭರಣ ಕಳೆದು ಹೋದಾಗಲೇ ದೇಗುಲದ ವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಆದರೆ ಇಷ್ಟುವರ್ಷಗಳಾದರೂ ಆಭರಣ ಸಿಕ್ಕಿರಲಿಲ್ಲ. ಈಗ ಸಿಕ್ಕಿದ್ದಕ್ಕೆ ದೇಗುಲದ ಅರ್ಚಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Tirupati Temple | ವಿಪ್ರೊಗಿಂತಲೂ ತಿರುಪತಿ ದೇವಸ್ಥಾನದ ಆಸ್ತಿ ಮೌಲ್ಯವೇ ಹೆಚ್ಚು; ಎಷ್ಟಿದೆ ಗೊತ್ತಾ ತಿಮ್ಮಪ್ಪನ ಸಂಪತ್ತು?
‘ದೇವರ ಆಭರಣಗಳು ಮತ್ತೆ ಸಿಗುತ್ತವೆ ಎಂಬ ಬಗ್ಗೆ ಆಸೆಯನ್ನೇ ಬಿಟ್ಟುಬಿಟ್ಟಿದ್ದೆವು. ಆದರೆ ನಿಜಕ್ಕೂ ಇದು ಪವಾಡವೇ ಆಗಿದೆ. ಯಾಕೆಂದರೆ ಪೊಲೀಸರು ಎಷ್ಟೇ ಹುಡುಕಿದರೂ ಆಭರಣಗಳು ಸಿಕ್ಕಿರಲಿಲ್ಲ. ಹೀಗಾಗಿ ಈ 9ವರ್ಷಗಳಲ್ಲಿ ನಾವು ದೇವರಿಗಾಗಿ ಹೊಸ ಆಭರಣಗಳನ್ನೂ ಖರೀದಿ ಮಾಡಿಯಾಗಿತ್ತು. ತನ್ನ ಆಭರಣಗಳನ್ನು ಕದ್ದವನಿಗೆ ಆ ದೇವರೇ ಶಿಕ್ಷಿಸಿದ್ದಾರೆ. ಹಾಗಾಗಿಯೇ ಅವನೇ ಬಂದು ಇವುಗಳನ್ನು ಇಟ್ಟು ಹೋಗಿದ್ದಾನೆ’ ಎಂದು ದೇಗುಲ ಅರ್ಚಕರಾದ ಕೈಲಾಶ್ ಪಾಂಡಾ ತಿಳಿಸಿದ್ದಾರೆ.