ರಾಂಚಿ: ಜಾರ್ಖಂಡ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗಣಿ ಗುತ್ತಿಗೆ ಇಕ್ಕಟ್ಟಿನಲ್ಲಿ ಸಿಲುಕಿರುವ ಹೇಮಂತ್ ಸೊರೆನ್ (Hemant Soren) ಅವರು ರಾಜೀನಾಮೆ ನೀಡುತ್ತಾರೆ ಎಂಬ ಕುರಿತು ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅವರು ರಾಜೀನಾಮೆ ನೀಡುತ್ತಿಲ್ಲ ಎಂದು ಮೈತ್ರಿ ಪಕ್ಷಗಳು ತಿಳಿಸಿವೆ. ಅಲ್ಲಿಗೆ, ಸೊರೆನ್ ಅವರು ರಾಜೀನಾಮೆ ನೀಡುತ್ತಿಲ್ಲ ಎಂದಾದರೆ ಮುಂದಿನ ಆಯ್ಕೆಗಳು ಏನು ಎಂಬ ಕುತೂಹಲ ಮೂಡಿದೆ.
“ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ರಾಜೀನಾಮೆ ನೀಡುತ್ತಿಲ್ಲ. ರಾಜ್ಯಪಾಲರು ಕಾನೂನು ಪ್ರಕ್ರಿಯೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ದಿನಗಳಲ್ಲಿ ಪರಿಸ್ಥಿತಿ ತಿಳಿಗೊಳಿಸುವುದಾಗಿಯೂ ಭರವಸೆ ನೀಡಿದ್ದಾರೆ. ಆದರೆ, ನಿಗದಿತ ಮಾಹಿತಿಯು ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ” ಎಂದು ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಬಂಧು ತಿರ್ಕೆ ತಿಳಿಸಿದ್ದಾರೆ. ಹಾಗಾಗಿ, ರಾಜ್ಯಪಾಲ ರಮೇಶ್ ಬೈಸ್ ಅವರ ತೀರ್ಮಾನದ ಬಳಿಕ ಮುಂದಿನ ಆಯ್ಕೆಗಳ ಕುರಿತು ಚರ್ಚಿಸಲು ಸೊರೆನ್ ಹಾಗೂ ಮಿತ್ರಪಕ್ಷಗಳು ತೀರ್ಮಾನಿಸಿವೆ ಎಂದು ತಿಳಿದುಬಂದಿದೆ.
ಸೊರೆನ್ ಅವರ ಅನರ್ಹತೆ ಕುರಿತು ಚುನಾವಣೆ ಆಯೋಗವು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಾಗಾಗಿ, ಅವರು ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಶಾಸಕರನ್ನು ಒಗ್ಗೂಡಿಸಿ ಬಲ ಪ್ರದರ್ಶಿಸುತ್ತಿದ್ದಾರೆ. ಗುರುವಾರ ಯುಪಿಎ ನಿಯೋಗವು ರಾಜ್ಯಪಾಲರನ್ನೂ ಭೇಟಿಯಾಗಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದೆ. ಇದರ ಮಧ್ಯೆಯೇ, ಹೇಮಂತ್ ಸೊರೆನ್ ಅವರು ಸಂಪುಟ ಸಭೆ ನಡೆಸಿದ್ದಾರೆ.
ಇದನ್ನೂ ಓದಿ | ಜಾರ್ಖಂಡ ಶಾಸಕರು, ಸಚಿವರನ್ನೆಲ್ಲ ಕರೆದುಕೊಂಡು ಜಲಾಶಯಕ್ಕೆ ಹೋದ ಸಿಎಂ ಹೇಮಂತ್ ಸೊರೆನ್