ಈಗೆರಡು ವರ್ಷಗಳ ಹಿಂದಷ್ಟೇ ಶ್ವಾಸಕೋಶ ಕಸಿಗೆ ಒಳಗಾಗಿದ್ದ ಜಾರ್ಖಂಡ ಶಿಕ್ಷಣ ಸಚಿವ, ಜಾರ್ಖಂಡ ಮುಕ್ತಿ ಮೋರ್ಚಾ ನಾಯಕ ಜಗರ್ನಾಥ್ ಮಹತೋ (Jagarnath Mahto) ಅವರು ಇಂದು ಮುಂಜಾನೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 56ವರ್ಷ ಅವರು 2020ರ ನವೆಂಬರ್ನಲ್ಲಿ ಕೊವಿಡ್ 19 ಸೋಂಕಿಗೆ ಒಳಗಾಗಿದ್ದರು. ಆಗ ಅವರ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿತ್ತು. ಹೀಗಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿಯೇ ಶ್ವಾಸಕೋಶ ಕಸಿ ಸರ್ಜರಿ ಮಾಡಲಾಗಿತ್ತು. ಅದಾದ ಮೇಲೆ ಎಂಟು ತಿಂಗಳು ಅವರು ಚೆನ್ನೈನಲ್ಲೇ ಇದ್ದು, 2021ರ ಜೂನ್ನಲ್ಲಿ ರಾಂಚಿಗೆ ವಾಪಸ್ ಹೋಗಿದ್ದರು. ಕಳೆದ ತಿಂಗಳು ಜಾರ್ಖಂಡ್ನ ಬಜೆಟ್ ಅಧಿವೇಶನದ ವೇಳೆ ಅವರು ಮತ್ತೆ ಅಸ್ವಸ್ಥರಾಗಿದ್ದು. ಕೂಡಲೇ ಏರ್ಲಿಫ್ಟ್ ಮಾಡಿ, ಚೆನ್ನೈನ ಇದೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 57ವರ್ಷದ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಜಗರ್ನಾಥ್ ಮಹತೋ ನಿಧನಕ್ಕೆ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಕಂಬನಿ ಮಿಡಿದಿದ್ದಾರೆ. ‘ನಮ್ಮ ಟೈಗರ್ ಜಗರ್ನಾಥ್ ದಾ ಇನ್ನಿಲ್ಲ. ಮಹಾನ್ ಚಳವಳಿಗಾರ, ಹೋರಾಟಗಾರ, ಶ್ರಮಜೀವಿ ಮತ್ತು ಜನಪ್ರಿಯ ನಾಯಕನನ್ನು ಜಾರ್ಖಂಡ್ ರಾಜ್ಯ ಕಳೆದುಕೊಂಡಿತು. ಇದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಕರುಣಿಸಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಜಾರ್ಖಂಡ್ನ ದುಮ್ರಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ, ಈ ಸಲ ಶಿಕ್ಷಣ ಸಚಿವರಾಗಿದ್ದರು. ಇವರಿಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಹೇಮಂತ್ ಸೊರೆನ್ ನಿಧನದ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಜಾರ್ಖಂಡ್‌ನಲ್ಲಿ ಶೋಕಾಚರಣೆ ಇರಲಿದ್ದು, ಇಂದು ಸಂಜೆ ನಡೆಯಲಿದ್ದ ಸಂಪುಟ ಸಭೆಯೂ ರದ್ದಾಗಿದೆ. ಜಾರ್ಖಂಡ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಾಬುಲಾಲ್ ಮರಂಡಿ ಅವರೂ ಜಗರ್ನಾಥ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ಜಗರ್ನಾಥ್ ಅವರು ಕಳೆದ ಎರಡು ವರ್ಷಗಳಿಂದಲೂ ಶ್ವಾಸಕೋಶ ಸಂಬಂಧಿ ರೋಗದ ವಿರುದ್ಧ ಸೆಣೆಸಾಡುತ್ತಿದ್ದರು. ನನಗೆ ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ, ವೈಯಕ್ತಿಕವಾಗಿ ಅವರ ಬಗ್ಗೆ, ಅವರಲ್ಲಿರುವ ಉತ್ಸಾಹದ ಬಗ್ಗೆ ಅಪಾರ ಗೌರವ ಹೊಂದಿದ್ದೆ’ ಎಂದು ಹೇಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೂ ಸಹ ಜಗರ್ನಾಥ್ ಮಹತೋ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಜಾರ್ಖಂಡದ ಶಾಲಾ ಶಿಕ್ಷಣ ಸಚಿವ ಜಗರ್ನಾಥ್ ನಿಧನದ ಸುದ್ದಿ ಕೇಳಿ ನೋವಾಯಿತು ಎಂದಿದ್ದಾರೆ.