ಮುಂಬಯಿ: 2013ರಲ್ಲಿ ಇಡೀ ಮನರಂಜನಾ ಕ್ಷೇತ್ರಕ್ಕೆ ಶಾಕ್ ನೀಡಿದ್ದ, ಅಮೆರಿಕ ಮೂಲದ, ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ (Jiah Khan Suicide Case) ಪ್ರಕರಣಕ್ಕೆ ಸಂಬಂಧಪಟ್ಟ ಅಂತಿಮ ತೀರ್ಪು ಇಂದು ಹೊರಬಿದ್ದಿದೆ. ಘಟನೆ ನಡೆದು ದಶಕದ ನಂತರ ಇಂದು ಮುಂಬಯಿಯ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿ ‘ಜಿಯಾ ಖಾನ್ ಆತ್ಮಹತ್ಯೆಗೆ ಆಕೆಯ ಪ್ರಿಯಕರನಾಗಿದ್ದ ಸೂರಜ್ ಪಾಂಚೋಲಿ (Sooraj Pancholi) ಕಾರಣನಲ್ಲ. ಆತ ನಿರಪರಾಧಿ‘ ಎಂದು ತೀರ್ಪು ನೀಡಿದೆ. ಈ ಮೂಲಕ ಸೂರಜ್ರನ್ನು ಕೇಸ್ನಿಂದ ಖುಲಾಸೆಗೊಳಿಸಿದೆ.
ಜಿಯಾ ಖಾನ್ ಅವರ ಮೊದಲ ಹೆಸರು ನಫೀಸಾ ಖಾನ್. ತಂದೆ ಅಲಿ ರಿಜ್ವಿ ಖಾನ್ ಅವರು ಭಾರತ ಮೂಲದ ಉದ್ಯಮಿ. ಅವರು ರಬಿಯಾ ಅಮಿನ್ರನ್ನು ಮದುವೆಯಾದ ಬಳಿಕ ಯುಎಸ್ಗೆ ಹೋಗಿ ನೆಲೆಸಿದ್ದರು. ನಫೀಸಾ ಖಾನ್ (ಜಿಯಾ ಖಾನ್) ಹುಟ್ಟಿದ್ದು ಅಮೆರಿಕದ ನ್ಯೂಯಾರ್ಕ್ನಲ್ಲಿ. ಜಿಯಾಗೆ 2ವರ್ಷವಿದ್ದಾಗಲೇ ಅಲಿ ರಿಜ್ವಿ ತಮ್ಮ ಕುಟುಂಬವನ್ನು ಬಿಟ್ಟು ಹೋಗಿದ್ದಾರೆ. ಅದಾದ ಮೇಲೆ ರಬಿಯಾ ಅಮಿನ್ ತಮ್ಮ ಮಕ್ಕಳೊಂದಿಗೆ ಭಾರತಕ್ಕೆ ಬಂದು ನೆಲೆಸಿದರು. ಜಿಯಾ ಖಾನ್ 16ವರ್ಷ ಇದ್ದಾಗಲೇ ಹಿಂದಿ ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಮುಂಬಯಿಯ ಜುಹುವಿನಲ್ಲಿ ಮನೆ ಮಾಡಿದ್ದರು. ಜೀವನ ಏರಿಳಿತದಲ್ಲಿ ಸಾಗುತ್ತಿದ್ದಾಗಲೇ ಜಿಯಾ ಅವರು 2013ರ ಜೂನ್ 3ರಂದು, ತಮ್ಮ 25ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಹುವಿನಲ್ಲಿರುವ ತಮ್ಮ ಮನೆಯಲ್ಲಿ, ಅಮ್ಮ-ಸಹೋದರಿ ಇಬ್ಬರೂ ಇಲ್ಲದ ಸಮಯದಲ್ಲಿ ಜಿಯಾ ಖಾನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
6ಪುಟಗಳ ಪತ್ರ ಸಿಕ್ಕಿತ್ತು..!
ಜಿಯಾ ಖಾನ್ ಸಾವು ಆಕೆಯ ಕುಟುಂಬಕ್ಕೆ, ಮನರಂಜನಾ ಕ್ಷೇತ್ರಕ್ಕೆ, ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಅಂದು ಆಕೆಯ ಅಂತ್ಯಕ್ರಿಯೆಯಲ್ಲಿ ಆಮಿರ್ ಖಾನ್, ಕಿರಣ್ ರಾವ್, ರಿತೇಶ್ ದೇಶ್ಮುಖ್, ನಗ್ಮಾ ಸೇರಿ ಬಾಲಿವುಡ್ನ ಹಲವು ಗಣ್ಯರು ಪಾಲ್ಗೊಂಡಿದ್ದರು. ಅದಾಗಿ ನಾಲ್ಕು ದಿನದ ಬಳಿಕ ಅಂದರೆ ಜೂನ್ 7ರಂದು ಜಿಯಾ ಖಾನ್ ಮನೆಯಲ್ಲಿ ಆಕೆಯೇ ಬರೆದಿದ್ದ ಆರು ಪುಟಗಳ ಒಂದು ಪತ್ರ ಸಿಕ್ಕಿತ್ತು. ಅದು ಅವಳ ಪ್ರಿಯಕರನಾಗಿದ್ದ ನಟ ಸೂರಜ್ ಪಾಂಚೋಲಿಯನ್ನು ಉದ್ದೇಶಿಸಿ ಬರೆದಿದ್ದಾಗಿತ್ತು. ಸೂರಜ್ ಪಾಂಚೋಲಿಯಿಂದ ಪ್ರತಿನಿತ್ಯ ಮಾನಸಿಕ-ದೈಹಿಕ ಹಿಂಸೆಯಾಗುತ್ತಿದೆ’ ಎಂದು ಆಕೆ ಪತ್ರದಲ್ಲಿ ಹೇಳಿದ್ದಲ್ಲದೆ, ಸೂರಜ್ನಿಂದಾಗಿ ಗರ್ಭ ಧರಿಸಿ, ಬಳಿಕ ಅವನ ಒತ್ತಾಯಕ್ಕೆ ಗರ್ಭಪಾತ ಮಾಡಿಸಿಕೊಂಡೆ ಎಂಬಿತ್ಯಾದಿ ಹಲವು ವಿಷಯಗಳು ಪತ್ರದಲ್ಲಿ ಇದ್ದವು. ಈ ಸುದೀರ್ಘ ಪತ್ರವನ್ನು ಜಿಯಾ ಖಾನ್ ಕುಟುಂಬದವರು ಮಾಧ್ಯಮಗಳ ಎದುರು ಬಿಡುಗಡೆ ಮಾಡಿದ್ದರು.
ಜಿಯಾ ಖಾನ್ ತಾಯಿ ಅವರು ಸ್ಥಳೀಯ ನ್ಯಾಯಾಲಯದಲ್ಲಿ ಸೂರಜ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಇದೊಂದು ಕೊಲೆ, ಆತ್ಮಹತ್ಯೆಯಲ್ಲ ಎಂದು ಅವರು ವಾದಿಸಿದ್ದರು. ಆಕೆಯ ದೂರು ಮತ್ತು ಪತ್ರದಲ್ಲಿರುವ ವಿಷಯಗಳನ್ನು ಪರಿಗಣಿಸಿ ‘ಆತ್ಮಹತ್ಯೆಗೆ ಪ್ರಚೋದನೆ’ ಆರೋಪದಡಿ ಸೂರಜ್ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದರು. 2013ರ ಜುಲೈನಲ್ಲಿ ಸೂರಜ್ ಪಾಂಚೋಲಿಗೆ ಜಾಮೀನು ಸಿಕ್ಕಿತಾದರೂ, ಆತನ ಪಾಸ್ಪೋರ್ಟ್ ವಶಪಡಿಸಿಕೊಳ್ಳಲಯಿತು. ಅಕ್ಟೋಬರ್ನಲ್ಲಿ ಜಿಯಾ ಖಾನ್ ತಾಯಿ ರಬಿಯಾ ಮತ್ತೊಂದು ಪಟ್ಟು ಹಿಡಿದರು. ತಮ್ಮ ಮಗಳ ಕೇಸ್ನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.
ತಕ್ಷಣವೇ ಮುಂಬಯಿ ಪೊಲೀಸರು ಸಿಬಿಐ ತನಿಖೆಗೆ ಕೇಸ್ನ್ನು ವಹಿಸಲಿಲ್ಲ. 2014ರ ಜುಲೈನಲ್ಲಿ ಸಿಬಿಐ ಈ ಪ್ರಕರಣದ ತನಿಖೆ ಶುರು ಮಾಡಿತು. ಅದೇ ವರ್ಷ ಸೂರಜ್ ಪಾಂಚೋಲಿ ತಂದೆ ಆದಿತ್ಯ ಪಾಂಚೋಲಿ ಕಾನೂನು ಹೋರಾಟ ಪ್ರಾರಂಭಿಸಿ ರಬಿಯಾ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದರು. 2015ರಲ್ಲಿ ಸಿಬಿಐ ಸೂರಜ್ ಪಾಂಚೋಲಿ ಮನೆಯನ್ನು ರೇಡ್ ಮಾಡಿತ್ತು. ಅವರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಿತ್ತು. ಆದಾದ ಮೇಲೆ ರಬಿಯಾ ಈ ಕೇಸ್ ತನಿಖೆಗಾಗಿ ಎಸ್ಐಟಿ ರಚನೆ ಮಾಡಬೇಕು ಎಂಬ ಮನವಿಯನ್ನೂ ಕೋರ್ಟ್ಗೆ ನೀಡಿದ್ದರು. ಆದರೆ ಅಂಥ ಯಾವುದೇ ಮನವಿಯನ್ನೂ ಕೋರ್ಟ್ ಪುರಸ್ಕಾರ ಮಾಡಲಿಲ್ಲ. ಸಿಬಿಐ ತನಿಖೆ ಮತ್ತು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇತ್ತು. ಅಂತಿಮ ತೀರ್ಪಿನ ದಿನಾಂಕವನ್ನು ಕೋರ್ಟ್ ಇಂದು ನಿಗದಿಪಡಿಸಿದೆ. ಸೂರಜ್ ಪಾಂಚೋಲಿ ನಿರಪರಾಧಿಯಾಗಿದ್ದಾರೆ.