ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಸರಣಿಯನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುವುದಾಗಿ ಹೇಳಿ, ಹಲವು ಉದ್ಯಮಿಗಳಿಂದ, ಜನಸಾಮಾನ್ಯರಿಂದ ಹಣ ಪಡೆಯುತ್ತಿದ್ದ ಮುಂಬಯಿ ಪತ್ರಕರ್ತನೊಬ್ಬನ ವಿರುದ್ಧ ಅಲ್ಲಿನ ಕ್ರೈಂ ಬ್ರ್ಯಾಂಚ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ ಈತ ನಾಪತ್ತೆಯಾಗಿದ್ದಾನೆ.
ಅಲೋಕ್ ರಂಜನ್ ಕೃಪಾಶಂಕರ್ ಎಂಬಾತ ಆರೋಪಿ. ಈತ ತಾನು ಹೆಸರಾಂತ ಮಾಧ್ಯಮ ಸಂಸ್ಥೆಯೊಂದರ ಪ್ರಧಾನ ಸಂಪಾದಕ ಎಂದು ಹೇಳಿಕೊಳ್ಳುತ್ತಿದ್ದ. ಸೋಷಿಯಲ್ ಮೀಡಿಯಾಗಳಲ್ಲೂ ಹಾಗೇ ಬರೆದುಕೊಂಡಿದ್ದ. ಪ್ರಧಾನಿ ಮೋದಿ ಇದುವರೆಗೆ ನಡೆಸಿಕೊಟ್ಟ ಮನ್ ಕೀ ಬಾತ್ ಸರಣಿ ಪುಸ್ತಕ ರೂಪದಲ್ಲಿ ತರುತ್ತಿದ್ದೇನೆ. ಇದಕ್ಕೆ ಧನಸಹಾಯ ಬೇಕು ಎಂದೂ ಸೋಷಿಯಲ್ ಮೀಡಿಯಾಗಳಲ್ಲಿ ಜಾಹೀರಾತು ಹಾಕಿಕೊಂಡಿದ್ದ. ಯರಾದರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಲು ಕರೆ ಮಾಡಿದರೆ, ಅವರಲ್ಲಿ ನಂಬಿಕೆ ಹುಟ್ಟುವಂತೆ ಮಾತಾಡುತ್ತಿದ್ದ. ಈ ಪುಸ್ತಕವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆ ಮಾಡುತ್ತಾರೆ ಎಂದು ಹೇಳುತ್ತಿದ್ದ. ಜಾಹೀರಾತು ನೋಡಿ, ಅಲೋಕ್ ಮಾತುಗಳನ್ನು ಕೇಳಿ ಹಲವರು ಹಣ ಕೊಟ್ಟಿದ್ದಾರೆ.
ಹೀಗೆ ಹಣಕೊಟ್ಟವರಲ್ಲಿ ಒಬ್ಬರಾದ ಬಿಜೆಪಿ ಕಾರ್ಯಕರ್ತ ಕೇಶವ್ ಸಿಂಗ್ ಪೊಲೀಸರಿಗೆ ದೂರು ಕೊಟ್ಟಿದ್ದರು. 4001 ರೂಪಾಯಿಯನ್ನು ದೇಣಿಗೆ ರೂಪದಲ್ಲಿ ಕೊಟ್ಟಿದ್ದ ಕೇಶವ್ ಸಿಂಗ್ಗೆ, ಇನ್ನೂ ಹಲವರು ತನ್ನಂತೆ ಅಲೋಕ್ಗೆ ಹಣಕೊಟ್ಟಿದ್ದಾರೆ. ತುಂಬ ದಿನಗಳಿಂದಲೂ ಆತ ಇದೇ ಕೆಲಸ ಮಾಡುತ್ತಿದ್ದಾನೆ ಎಂಬುದು ಗೊತ್ತಾಗಿ, ಅನುಮಾನ ಬಂದು ಪೊಲೀಸರಿಗೆ ದೂರುಕೊಟ್ಟಿದ್ದಾರೆ. ಈ ಮಧ್ಯೆ ಅಲೋಕ್ ಸಂಪರ್ಕಕ್ಕೂ ಸಿಗುತ್ತಿಲ್ಲ ಮತ್ತು ಮನೆಯಲ್ಲೂ ಇಲ್ಲ ಎಂದು ಹೇಳಲಾಗಿದೆ. ಪೊಲೀಸರು ಅಲೋಕ್ಗಾಗಿ ಹುಡುಕಾಟ ನಡೆಸಿದ್ದಾರೆ. ‘ಅಲೋಕ್ ರಂಜನ್ ಕೃಪಾಶಂಕರ್ ತನ್ನನ್ನು ತಾನು ರಾಷ್ಟ್ರೀಯ ಹಿಂದಿ ನ್ಯೂಸ್ ಮ್ಯಾಗಜಿನ್ ಅಭ್ಯುದಯ ವಾತ್ಸಲ್ಯಂನ ಪ್ರಧಾನ ಸಂಪಾದಕ ಮತ್ತು ಕೃಪಾ ಪ್ರಕಾಶನ ಲಿಮಿಟೆಡ್ನ ಸಿಇಒ ಎಂದು ಹೇಳಿಕೊಂಡು, ಹಲವರ ಬಳಿ ಹಣಪಡೆದಿದ್ದು ದೃಢಪಟ್ಟಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಲೋಕ್ ಈ ಹಿಂದೆ ಶಕ್ತ ಭಾರತ್-ದಿ ಗ್ಲೋರಿಯಸ್ ಸ್ಟೋರಿ ಆಫ್ ಇಂಡಿಯಾ ಡೆವಲೆಪ್ಮೆಂಟ್ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾನೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಕ್ಷಿಣ ಮುಂಬಯಿಯ ಪ್ರಸಿದ್ಧ ಹೋಟೆಲ್ವೊಂದರಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಹಲವು ಉದ್ಯಮಿಗಳು, ಗಣ್ಯರು ಪಾಲ್ಗೊಂಡಿದ್ದೂ ನಮಗೆ ಮಾಹಿತಿ ಲಭ್ಯವಾಗಿದೆ. ಆದರೆ ಈ ಪುಸ್ತಕವನ್ನು ನಿಜವಾಗಿಯೂ ಪ್ರಕಟಿಸುತ್ತಿದ್ದಾರಾ? ಎಷ್ಟು ಜನರಿಂದ ಹಣ ಸಂಗ್ರಹ ಮಾಡಿದ್ದಾರೆ ಎಂಬಿತ್ಯಾದಿ ತನಿಖೆ ಶುರು ಮಾಡಿದ್ದೇವೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Mumbai Indians | ಎಮಿರೇಟ್ಸ್‌ಗೆ ಕೀರನ್ , ಕೇಪ್‌ಟೌನ್‌ಗೆ ರಶೀದ್ ಖಾನ್; ನಾಯಕರನ್ನು ಘೋಷಿಸಿದ ಮುಂಬಯಿ ಇಂಡಿಯನ್ಸ್