ನವ ದೆಹಲಿ: 2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ದಲಿತ ಮಹಿಳೆ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ತೆರಳುತ್ತಿದ್ದಾಗ ಬಂಧಿತನಾಗಿದ್ದ ಉತ್ತರ ಪ್ರದೇಶ ಪೊಲೀಸರಿಂದ ಕೇರಳದ ಪತ್ರಕರ್ತ ಸಿದ್ಧಿಕ್ ಕಪ್ಪನ್ (Siddique Kappan) ಇದೀಗ ಬಿಡುಗಡೆಯಾಗಿದ್ದಾರೆ. ಅಂದು ಸಿದ್ಧಿಕ್ ಕಪ್ಪನ್ ಪಿಎಫ್ಐ (ನಿಷೇಧಿತ) ಸಂಘಟನೆಯೊಂದಿಗೆ ಸಂಪರ್ಕಹೊಂದಿದ್ದು, ಅನ್ಯಥಾ ಧಾರ್ಮಿಕ ಕಲಹ ಮತ್ತು ಉಗ್ರ ಚಟುವಟಿಕೆಯನ್ನು ನಡೆಸಲು ಹತ್ರಾಸ್ಗೆ ಹೋಗುತ್ತಿದ್ದಾರೆ ಎಂದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.
2020ರ ಅಕ್ಟೋಬರ್ನಲ್ಲಿ ಹತ್ರಾಸ್ನಲ್ಲಿ ದಲಿತ ಮಹಿಳೆಯೊಬ್ಬಳ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯಾಗಿತ್ತು. ಆ ಕೇಸ್ ವರದಿ ಮಾಡಲು ಕಪ್ಪನ್ ಮತ್ತು ಮೂವರು ಹತ್ರಾಸ್ಗೆ ಹೊರಟಿದ್ದರು. ಅವರೆಲ್ಲರನ್ನೂ ಉತ್ತರಪ್ರದೇಶ ಪೊಲೀಸರು ಮಥುರಾ ಟೋಲ್ಪ್ಲಾಜಾದ ಬಳಿ ಬಂಧಿಸಿ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಎಫ್ಐಆರ್ ದಾಖಲಿಸಿದ್ದರು. ಸಿದ್ಧಿಕ್ ಕಪ್ಪನ್ ಬಂಧನದ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿದ್ದವು. ಇನ್ನು 2022ರ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ನಿಂದ ಸಿದ್ಧಿಕ್ಗೆ ಜಾಮೀನು ಸಿಕ್ಕಿತ್ತು. ಆದರೆ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA)ಯಡಿ ದಾಖಲಾಗಿದ್ದ ಪ್ರಕರಣವೊಂದು ಅಲಹಬಾದ್ ಹೈಕೋರ್ಟ್ನಲ್ಲಿ ಬಾಕಿ ಇತ್ತು. ಈಗ ಆ ಕೇಸ್ನಲ್ಲೂ ಜಾಮೀನು ಸಿಕ್ಕಿದೆ. ಸಿದ್ಧಿಕ್ ಕಪ್ಪನ್ ಜಾಮೀನಿಗೆ ಈಗ ಲಖನೌ ಸೆಷನ್ಸ್ ಕೋರ್ಟ್ ಸಹಿ ಮಾಡಿದ್ದು, ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ಧಿಕ್, ‘ನಾನು 28 ತಿಂಗಳುಗಳ ಬಳಿಕ ಜೈಲಿನಿಂದ ಹೊರಬಂದಿದ್ದೇನೆ. ನನ್ನ ಕಷ್ಟದ ಸಮಯದಲ್ಲಿ ನನ್ನ ಜತೆಗಿದ್ದ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಅದೇನೇ ಇರಲಿ, ನಾನೀಗ ಹೊರಬಂದಿದ್ದೇನೆ ಖುಷಿಯಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Siddique Kappan | ಯುಪಿನಲ್ಲಿ ಬಂಧಿತನಾಗಿದ್ದ ಪತ್ರಕರ್ತ ಕಪ್ಪನ್‌ಗೆ 2 ವರ್ಷದ ಬಳಿಕ ಸುಪ್ರೀಂ ಜಾಮೀನು