ನವ ದೆಹಲಿ: ಕಾಳಿ ಮಾತೆಯ ಕೈಯಲ್ಲಿ ಸಿಗರೇಟ್ ಹಿಡಿಸುವ ಮೂಲಕ ನಟಿ, ನಿರ್ಮಾಪಕಿ ಲೀನಾ ಮಣಿಮೇಕಲೈ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಅದರ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಮಾತನಾಡಿದ್ದಾರೆ. ಅವರ ಮಾತುಗಳೂ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಇದೆ. ಇಂಡಿಯಾ ಟುಡೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ʼಯಾವುದೇ ದೇವರನ್ನು, ದೇವತೆಯನ್ನು ಅವರವರ ಭಾವಕ್ಕೆ ತಕ್ಕಂತೆ ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ಇದೆ. ಕಾಳಿ ಮಾತೆ ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವಿ ಎಂದು ನಾನು ನಂಬುತ್ತೇನೆ. ನಮ್ಮ ದೇಶಗಳಲ್ಲಿ ಕೆಲವು ಭಾಗಗಳಲ್ಲಿ ಕಾಳಿಗೆ ವಿಸ್ಕಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಮತ್ತೊಂದಿಷ್ಟು ಮಂದಿ ಅದನ್ನು ದೈವ ನಿಂದನೆ ಎಂದು ಭಾವಿಸುತ್ತಾರೆʼ ಎಂದು ಹೇಳಿದ್ದಾರೆ.
ನೀವು ಸಿಕ್ಕಿಂಗೆ ಹೋಗಿ ನೋಡಿ, ಅಲ್ಲಿ ಕಾಳಿ ಮಾತೆಗೆ ವಿಸ್ಕಿ ನೈವೇದ್ಯವನ್ನಾಗಿ ಅರ್ಪಿಸಿ ನಂತರ ಅದನ್ನು ಪ್ರಸಾದವೆಂದು ಜನ ಸೇವಿಸುತ್ತಾರೆ. ಹಾಗೇ, ಉತ್ತರ ಪ್ರದೇಶಕ್ಕೆ ಬಂದು ಇದನ್ನು ಹೇಳಿದರೆ, ಅಲ್ಲಿನ ಜನ ಸಿಡಿಮಿಡಿಗೊಳ್ಳುತ್ತಾರೆ. ಕಾಳಿ ಮಾತೆಗೇ ಮದ್ಯವೇ? ಇದು ದೇವಿಗೆ ಅವಮಾನ ಮಾಡಿದಂತೆ ಎಂದು ಅವರು ಹೇಳುತ್ತಾರೆ ಎಂದು ಮಹುವಾ ವಿಶ್ಲೇಷಿಸಿದ್ದಾರೆ.
ತೃಣಮೂಲ ಕಾಂಗ್ರೆಸ್‌ನಿಂದಲೇ ವಿರೋಧ
ಸಂಸದೆ ಮಹುವಾ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಪಕ್ಷವೇ ಖಂಡಿಸಿದೆ. ಟ್ವೀಟ್ ಮಾಡಿರುವ ಟಿಎಂಸಿ, ಮಹುವಾ ಮೋಯಿತ್ರಾ ಕಾಳಿ ಮಾತೆ ಬಗ್ಗೆ ನೀಡಿದ ಹೇಳಿಕೆ ಆಕೆಯ ವೈಯಕ್ತಿಕ. ಇದರಲ್ಲಿ ಪಕ್ಷದ ಪಾತ್ರವೇನೂ ಇಲ್ಲ. ಅಲ್ಲದೆ ಇಂಥ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಹೇಳಿದೆ.
ಲೀನಾ ಮಣಿಮೇಕಲೈ ತಮ್ಮ ಮುಂದಿನ ಡಾಕ್ಯುಮೆಂಟರಿಯ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಂತೆ ವಿವಾದ ಎದ್ದಿದೆ. ಈ ಪೋಸ್ಟರ್‌ನಲ್ಲಿ ಕಾಳಿ ಮಾತೆ ಒಂದು ಕೈಯಲ್ಲಿ ತ್ರಿಶೂಲ ಹಿಡಿದಿದ್ದರೆ, ಇನ್ನೊಂದು ಕೈಯಲ್ಲಿ ಸಿಗರೇಟ್ ಸೇದುತ್ತಿರುವುದನ್ನು ನೋಡಬಹುದು. ಇನ್ನೂ ಒಂದು ವಿಚಿತ್ರ ಸಂಗತಿಯೆಂದರೆ, ಕಾಳಿ ಮಾತೆಯ ಮತ್ತೊಂದು ಕೈಯಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯದ ಬಾವುಟ ಇರುವುದು. ಈ ಪೋಸ್ಟರ್ ನೋಡುತ್ತಿದ್ದಂತೆ ಅನೇಕರು ತಿರುಗಿಬಿದ್ದಿದ್ದಾರೆ. ಸದ್ಯ ನಿರ್ಮಾಪಕಿ ವಿರುದ್ಧ ಬೆಂಗಳೂರು-ಲಖನೌಗಳಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಕಾಳಿದೇವಿಯ ಕೈಗೆ ಸಿಗರೇಟು ಕೊಟ್ಟ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಬೆಂಗಳೂರು, ಲಖನೌನಲ್ಲಿ FIR