Site icon Vistara News

ಗುರುನಾನಕ್​ ಜಯಂತಿ ಆಚರಣೆಯಲ್ಲಿ ಕಾಂಗ್ರೆಸ್​ ನಾಯಕ ಕಮಲನಾಥ್​​ಗೆ ಸನ್ಮಾನ; ಸಿಡಿದೆದ್ದ ಸಿಖ್​ ಸ್ತೋತ್ರ ಗಾಯಕ!

Kamal Nath honoured atGuru Nanak Jayanti Sikh hymn singer Angered

ಇಂಧೋರ್​: ನವೆಂಬರ್​ 8ರಂದು ಇಂಧೋರ್​​ನಲ್ಲಿ ಹಮ್ಮಿಕೊಂಡಿದ್ದ ಗುರುನಾನಕ್​ ಜಯಂತಿ ಕಾರ್ಯಕ್ರಮದಲ್ಲಿ ಅಲ್ಲಿನ ಕಾಂಗ್ರೆಸ್ ನಾಯಕ ಕಮಲನಾಥ್​ ಪಾಲ್ಗೊಂಡಿದ್ದರು. ಈ ಸಮಾರಂದಲ್ಲಿ ಅವರನ್ನು ಗೌರವಿಸಿ-ಸನ್ಮಾನಿಸಲಾಗಿತ್ತು. ಆದರೆ ಗುರುನಾನಕ್​ ಜಯಂತಿಗೆ ಕಮಲನಾಥ್​ ಅವರನ್ನು ಆಹ್ವಾನಿಸಿ, ಸನ್ಮಾನಿಸಿದ್ದು ಹಲವು ಪ್ರಮುಖ ಸಿಖ್​ ನಾಯಕರ ಕೋಪಕ್ಕೆ ಕಾರಣವಾಗಿದೆ. ಅದರಲ್ಲೂ ಸಿಖ್ ಮುಖ್ಯ ಸ್ತೋತ್ರ ಗಾಯಕ ಮನ್​ಪ್ರೀತ್​ ಸಿಂಗ್​ ಕಾನ್ಪುರಿ ಅವರು ಕಾರ್ಯಕ್ರಮ ಆಯೋಜಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1984 ಸಿಖ್​ ವಿರೋಧಿ ಗಲಭೆ ಆರೋಪ ಹೊತ್ತವರಲ್ಲಿ ಕಮಲನಾಥ ಕೂಡ ಒಬ್ಬರು. ಅಂಥವರನ್ನು ಈಗ ಗುರುನಾನಕ್​ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಇಂಧೋರ್​ನ ಎಂಬಿ ಕಲ್ಸಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನ್​ಪ್ರೀತ್​ ಸಿಂಗ್​ ಕಾನ್ಪುರಿ ಕೂಡ ಪಾಲ್ಗೊಂಡಿದ್ದರು. ಕಮಲನಾಥ್​ ಉಪಸ್ಥಿತಿ ನೋಡಿ ಅವರು ಕಿರಿಕಿರಿಗೆ ಒಳಗಾಗಿದ್ದಾರೆ. ಅದರಲ್ಲೂ 45 ನಿಮಿಷಗಳ ಕಾಲ ಅವರನ್ನು ಸನ್ಮಾನಿಸಿದ್ದು ಕಾನ್ಪುರಿಗೆ ತೀವ್ರ ಸಿಟ್ಟು ತರಿಸಿದೆ. ಅವರು ಅತ್ತ ಹೋಗುತ್ತಿದ್ದಂತೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಂಜಾಬಿ ಭಾಷೆಯಲ್ಲಿ ಅವರು ಮಾತನಾಡಿರುವ ವಿಡಿಯೊ ವೈರಲ್ ಆಗಿದೆ. ‘ಕಾರ್ಯಕ್ರಮ ಆಯೋಜಿಸುವವರು ಸೂಕ್ಷ್ಮವಾಗಿ ಆಲೋಚಿಸಬೇಕು. ಅವರ ಆತ್ಮಸಾಕ್ಷಿ ಜೀವಂತವಾಗಿದ್ದಿದ್ದರೆ ಇಂದಿನ ಕಾರ್ಯಕ್ರಮಕ್ಕೆ ಕಮಲನಾಥ್ ಅವರನ್ನು ಆಮಂತ್ರಿಸುತ್ತಿರಲಿಲ್ಲ’ ಎಂದು ಕಾನ್ಪುರಿ ಹೇಳಿದ್ದಾರೆ. ‘ಇನ್ನು ಜನ್ಮದಲ್ಲಿ ಎಂದಿಗೂ ನಾನು ಇಂಧೋರ್​ಗೆ ಕಾಲಿಡುವುದಿಲ್ಲ’ ಎಂದೂ ಶಪಥ ಮಾಡಿದ್ದಾರೆ.

ಇನ್ನು ಕಾನ್ಪುರಿ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಆಯೋಜಕರು, ‘ನಾವು ಕಮಲನಾಥ್​ ಅವರಿಗೆ ಕೇಸರಿ ಸಿರೋಪಾ (ಸನ್ಮಾನಿಸುವಾಗ ಶಿರಕ್ಕೆ ಹಾಕುವ ಟೋಪಿ) ಹಾಕಲಿಲ್ಲ. ಕೇವಲ ಸ್ಮರಣಿಕೆಯನ್ನಷ್ಟೇ ಕೊಟ್ಟಿದ್ದೇವೆ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಕಾನ್ಪುರಿ ಅದನ್ನು ಒಪ್ಪಲೇ ಇಲ್ಲ. ‘ಈಗ ನಿಮ್ಮ ಉತ್ತರ ನನಗೆ ಬೇಡ. ಮಾಡುವ ಮೊದಲೇ ಯೋಚಿಸಬೇಕಿತ್ತು. ನೀವೇನು ಮಾಡಿದಿರಿ ಎಂಬುದರ ಕಲ್ಪನೆಯೂ ನಿಮಗೆ ಇದ್ದಂತಿಲ್ಲ, ನಾನ್ಯಾವತ್ತೂ ಇಂಧೋರ್​ಗೆ ಬರಲಾರೆ. ಈ ವಿಚಾರದಲ್ಲಿ ನನ್ನದೇನಾದರೂ ತಪ್ಪಿದ್ದರೆ, ಆ ದೇವರು ನನಗೆ ಶಿಕ್ಷೆ ಕೊಡಲಿ. ಗುರು ನಾನಕರು ಎಲ್ಲವನ್ನೂ ನೋಡುತ್ತಾರೆ’ ಎಂದು ಹೇಳಿದ್ದಾರೆ ಅಷ್ಟೇ ಅಲ್ಲ, ಆಯೋಜಕರು ಎಷ್ಟೇ ಮನವಿ ಮಾಡಿದರೂ, ಅವರ ಸಾಂಪ್ರಾದಾಯಿಕ ಜೈಕಾರ ಹಾಕಲೇ ಇಲ್ಲ. ಗುರುನಾನಕ ಸ್ತೋತ್ರವನ್ನಷ್ಟೇ ಹಾಡಿ ವೇದಿಕೆಯಿಂದ ಇಳಿದು ಹೋಗಿದ್ದಾರೆ.

ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಹತ್ಯೆ ಬಳಿಕ ನಡೆದ ಸಿಖ್​ ವಿರೋಧಿ ಗಲಭೆಯಲ್ಲಿ ಕಮಲನಾಥ್​ ಹೆಸರೂ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆದಿತ್ತು ಹೊರತು ಅವರನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ. ಹಾಗಿದ್ದಾಗ್ಯೂ ಅವರನ್ನು ಗುರು ನಾನಕ್​ ಜಯಂತಿ ಆಚರಣೆಗೆ ಆಹ್ವಾನಿಸಿದ್ದು ಹಲವು ಸಿಖ್​ ನಾಯಕರಿಗೆ ಅಸಮಾಧಾನ ತರಿಸಿದೆ.

ಇದನ್ನೂ ಓದಿ: ಹಿಂದು-ಹಿಂದುತ್ವ ವಿಷಯದಲ್ಲಿ ಸಮಸ್ಯೆ ಇದ್ದವರು ಪಾಕಿಸ್ತಾನಕ್ಕೆ ಹೋಗಿ; ಸತೀಶ್​ ಜಾರಕಿಹೊಳಿಗೆ ಮಧ್ಯಪ್ರದೇಶ ಸಂಸದನ ತಿರುಗೇಟು

Exit mobile version