Site icon Vistara News

Kangana Ranaut: ʼಜೇಮ್ಸ್‌ ಬಾಂಡ್‌ʼ ದೋವಲ್‌ ಜತೆ ಸೆಲ್ಫಿ ಕ್ಲಿಕ್ಕಿಸಿದ ಕಂಗನಾ!

kangana

kangana

ನವ ದೆಹಲಿ: ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ವಿಮಾನದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಅವರನ್ನು ಭೇಟಿಯಾಗಿದ್ದಾರೆ. ದೋವಲ್‌ ಜತೆಗಿನ ಸೆಲ್ಫಿಯನ್ನು ನಟಿ ತಮ್ಮ ಎಕ್ಸ್‌ ಖಾತೆ ಮೂಲಕ ಹಂಚಿಕೊಂಡಿದ್ದು ವೈರಲ್‌ ಆಗಿದೆ. ಅಜಿತ್‌ ದೋವಲ್‌ ನಗುಮೊಗದಲ್ಲಿರುವ ಅಪರೂಪದಲ್ಲಿ ಅಪರೂಪದ ಚಿತ್ರ ಇದು. ದಸರಾ ಪ್ರಯುಕ್ತ ನವ ದೆಹಲಿಯ ಕೆಂಪು ಕೋಟೆಯ ಮೈದಾನದಲ್ಲಿ ಮಂಗಳವಾರ ಸಂಜೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಂಗನಾ ತರೆಳುತ್ತಿದ್ದಾಗ ದೋವಲ್‌ ಅವರನ್ನು ಭೇಟಿಯಾಗಿದ್ದಾರೆ. ಭಾರತದ ʼಜೇಮ್ಸ್‌ ಬಾಂಡ್‌ʼ ಎಂದೇ ದೋವಲ್‌ ಅವರನ್ನು ಕರೆಯಲಾಗುತ್ತದೆ. ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುವ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಕಂಗನಾ ಪಾತ್ರರಾಗಲಿದ್ದಾರೆ.

ಕಂಗನಾ ಪೋಸ್ಟ್‌ನಲ್ಲೇನಿದೆ?

ದೋವಲ್‌ ಜತೆಗಿನ ಫೋಟೊ ಶೇರ್‌ ಮಾಡಿಕೊಂಡಿರುವ ಕಂಗನಾ, “ಎಂತಹ ಅದೃಷ್ಟ. ನಾನು ಬೆಳಗ್ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಾರ್ವಕಾಲಿಕ ಶ್ರೇಷ್ಠ ಅಜಿತ್ ದೋವಲ್ ಇದ್ದರು. ಅವರ ಪಕ್ಕದಲ್ಲಿ ಕುಳಿತುಕೊಳ್ಳುವ ಅದೃಷ್ಟ ನನ್ನದಾಯಿತು. ʼತೇಜಸ್ʼ (ನಮ್ಮ ಸೈನಿಕರಿಗೆ ಸಮರ್ಪಿತವಾದ ಚಿತ್ರ) ಸಿನಿಮಾದ ಪ್ರಚಾರದ ಸಮಯದಲ್ಲಿ ನಾನು ದೋವಲ್ ಅವರನ್ನು ಭೇಟಿಯಾಗಿದ್ದೆ. ಅವರು ಪ್ರತಿಯೊಬ್ಬ ಸೈನಿಕನ ಸ್ಫೂರ್ತಿ. ಜೈ ಹಿಂದ್ʼʼ ಎಂದು ಬರೆದುಕೊಂಡಿದ್ದಾರೆ.

ಕಂಗನಾ ಅಭಿಮಾನಿಗಳು ಈ ಫೋಟೊಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಬಹು ದೊಡ್ಡ ಅದೃಷ್ಟʼʼ ಎಂದು ಒಬ್ಬರು ಹೇಳಿದ್ದಾರೆ. ʼʼಸೆಲೆಬ್ರಿಟಿ ಅಭಿಮಾನಿಯನ್ನು ಭೇಟಿಯಾದ ಕ್ಷಣʼʼ ಎಂದಿದ್ದಾರೆ ಮತ್ತೊಬ್ಬರು. ʼʼನೀವು ತುಂಬಾ ಅದೃಷ್ಟಶಾಲಿʼʼ ಎಂದು ಕಮೆಂಟ್‌ ಮಾಡಿದ್ದಾರೆ ಇನ್ನೊಬ್ಬರು. ʼʼಅಜಿತ್‌ ದೋವಲ್‌ ಅವರಂತಹ ಶ್ರೇಷ್ಠ ವ್ಯಕ್ತಿಯನ್ನು ಭೇಟಿಯಾದದ್ದು ನಿಮ್ಮ ಭಾಗ್ಯ. ಅವರದ್ದು ಮಾದರಿ ವ್ಯಕ್ತಿತ್ವʼʼ ಎಂದು ಇನ್ನೊಬ್ಬರು ಅಭಿಮಾನಿ ಹೇಳಿದ್ದಾರೆ. ಹಲವರು ಫೋಟೊದಲ್ಲಿನ ದೋವಲ್‌ ನಗುವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಅಜಿತ್ ದೋವಲ್ ನಗುವುದನ್ನು ನೋಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ!” ಎಂದು ಸೋಜಿಗ ವ್ಯಕ್ತಪಡಿಸಿದ್ದಾರೆ ನೆಟ್ಟಿಗರೊಬ್ಬರು. ಒಟ್ಟಿನಲ್ಲಿ ಒಂದೇ ಫ್ರೇಮ್‌ನಲ್ಲಿ ದಿಗ್ಗಜರಿಬ್ಬರನ್ನು ನೋಡಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಇದನ್ನೂ ಓದಿ: Kangana Ranaut: ಈ ವರ್ಷ ಬಿಡುಗಡೆಯಾಗುತ್ತಿಲ್ಲ ಕಂಗನಾ ʻಎಮರ್ಜೆನ್ಸಿʼ ಸಿನಿಮಾ; ಕಾರಣ ಕೊಟ್ಟ ನಟಿ!

ಕಂಗನಾ ಮುಂದಿನ ಚಿತ್ರಗಳು

ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ಕಂಗನಾ ಅಭಿನಯದ ʼಚಂದ್ರಮುಖಿ 2ʼ ಚಿತ್ರ ಅಷ್ಟೇನೂ ಸದ್ದು ಮಾಡಿಲ್ಲ. ಪಿ.ವಾಸು ನಿರ್ದೇಶನದ ಈ ಚಿತ್ರದಲ್ಲಿ ರಾಘವ ಲಾರೆನ್ಸ್‌ ನಾಯಕನಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಸದ್ಯ ಕಂಗನಾ ಗಮನವೆಲ್ಲ ಮುಂದಿನ ಬಾಲಿವುಡ್‌ ಚಿತ್ರ ʼತೇಜಸ್‌ʼ ಮೇಲಿದೆ. ಈಗಾಗಲೇ ಕುತೂಹಲ ಕೆರಳಿಸಿರುವ ಈ ಚಿತ್ರ ಏರ್‌ ಫೋರ್ಸ್‌ನ ದಿಟ್ಟ ಪೈಲಟ್‌ ತೇಜಸ್‌ ಗಿಲ್‌ ಅವರ ಕಥೆಯನ್ನೊಳಗೊಂಡಿದೆ. ಹಲವಾರು ಸವಾಲುಗಳನ್ನು ಎದುರಿಸುತ್ತ ನಮ್ಮ ರಾಷ್ಟ್ರವನ್ನು ರಕ್ಷಿಸಲು ಭಾರತೀಯ ವಾಯುಪಡೆಯ ಪೈಲಟ್‌ಗಳು ಹೇಗೆ ದಣಿವರಿಯದೆ ಕೆಲಸ ಮಾಡುತ್ತಾರೆ ಎಂಬುದನ್ನು ಈ ಚಿತ್ರ ತಿಳಿಸಲಿದೆ. ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿರುವ ಈ ಚಿತ್ರ ಅಕ್ಟೋಬರ್‌ 27ರಂದು ತೆರೆಗೆ ಬರಲಿದೆ. ಇದಾದ ಬಳಿಕ ಕಂಗನಾ ನಿರ್ಮಿಸಿ, ನಿರ್ದೇಶಿಸಿ, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿರುವ ʼಎಮರ್ಜೆನ್ಸಿʼ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Exit mobile version