ಉದಯಪುರ: ರಾಜಸ್ಥಾನದಲ್ಲಿ ಮುಸ್ಲಿಮರಿಂದ ಹತ್ಯೆಗೀಡಾದ ಕನ್ಹಯ್ಯಲಾಲ್ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಿತು. ಕುಟುಂಬದವರ ಗೋಳಾಟ ಮುಗಿಲುಮುಟ್ಟಿತ್ತು. ಜೂ.28ರಂದು ಕನ್ಹಯ್ಯಲಾಲ್ ಶಿರಚ್ಛೇದ ಆದ ಬಳಿಕ ಉದಯಪುರ ಸೇರಿ ಹಲವು ಭಾಗಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಹೀಗೆ ನಿಷೇಧಾಜ್ಞೆ ಜಾರಿಯಾಗಿದ್ದರೂ ಕೂಡ ಕನ್ಹಯ್ಯ ಅಂತಿಮ ಸಂಸ್ಕಾರಕ್ಕೆ ಅನೇಕರು ಆಗಮಿಸಿದ್ದರು. ಉದಯಪುರ ಸೆಕ್ಟರ್ 14ರಲ್ಲಿರುವ ಅವರ ಮನೆಯಿಂದ ಅಶೋಕನಗರದಲ್ಲಿರುವ ರುದ್ರಭೂಮಿಯವರೆಗೆ ಶವಯಾತ್ರೆ ನಡೆಯಿತು. ಈ ವೇಳೆ ಪೊಲೀಸ್ ಬಿಗಿಭದ್ರತೆ ವಹಿಸಲಾಗಿತ್ತು. ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು.
ನಿರಂತರ ಬೆದರಿಕೆ !
ಕನ್ಹಯ್ಯಲಾಲ್‌ಗೆ ಪತ್ನಿ ಮತ್ತು ಇಬ್ಬರು ಗಂಡುಮಕ್ಕಳಿದ್ದಾರೆ. ಅದರಲ್ಲಿ ಒಬ್ಬ ಮಗನಿಗೆ 18ವರ್ಷ, ಇನ್ನೊಬ್ಬನಿಗೆ 21ವರ್ಷ ವಯಸ್ಸು. ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸುವ ಮಾದರಿಯ ಪೋಸ್ಟ್‌ನ್ನು ಸೋಷಿಯಲ್ ಮೀಡಿಯಾದಲ್ಲಿ ಕನ್ಹಯ್ಯ ಹಾಕಿಕೊಂಡಿದ್ದರು. ಅದಾದ ಮೇಲೆ ಸ್ಥಳೀಯ ಕೆಲವು ಮುಸ್ಲಿಮರು ಇವರ ವಿರುದ್ಧ ದೂರು ನೀಡಿದ್ದರು. ಅಷ್ಟೇ ಅಲ್ಲ ಪೊಲೀಸರು ಕನ್ಹಯ್ಯರನ್ನು ಬಂಧಿಸಿ ಕರೆದುಕೊಂಡು ಹೋಗಿ ವಿಚಾರಣೆಗೂ ಒಳಪಡಿಸಿದ್ದಾರೆ. ಅಷ್ಟಾದ ಮೇಲೆ ನಡೆದ ಘಟನೆಯನ್ನೆಲ್ಲ ಕನ್ಹಯ್ಯ ಪತ್ನಿ ಜಶೋದಾ ವಿವರಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ ಅವರು, “ನನ್ನ ಪತಿಯನ್ನು ಪೊಲೀಸರು ಬಂಧಿಸಿದ್ದು ಸತ್ಯ. ಆದರೆ ಬಳಿಕ ದೂರುದಾರರು ಮತ್ತು ನಮ್ಮ ನಡುವೆ ಮಾತುಕತೆ ನಡೆಯಿತು. ಇವೆಲ್ಲವೂ ಪೊಲೀಸರ ಎದುರೇ ಆಯಿತು. ಬಳಿಕ ರಾಜಿ ಮಾಡಿಕೊಂಡು, ಇನ್ನೆಂದೂ ಇಂಥ ಪೋಸ್ಟ್‌ಗಳನ್ನು ಹಾಕುವುದಿಲ್ಲ, ಕೋಮು ಪ್ರಚೋದಕ ಕೆಲಸ ಮಾಡುವುದಿಲ್ಲ ಎಂದು ಕನ್ಹಯ್ಯಲಾಲ್ ಮುಚ್ಚಳಿಕೆ ಬರೆದುಕೊಟ್ಟರು. ಬಳಿಕ ಪೊಲೀಸರು ಅವರನ್ನು ಬಿಟ್ಟರು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ʼಇನ್ನು ನಿನ್ನ ಸರದಿʼ; ಉದಯಪುರ ಹತ್ಯೆ ಬೆನ್ನಲ್ಲೇ ಬಿಜೆಪಿ ಉಚ್ಚಾಟಿತ ನವೀನ್ ಜಿಂದಾಲ್‌ಗೆ ಬೆದರಿಕೆ
“ಆದರೆ ಪೊಲೀಸರು ನನ್ನ ಪತಿಯನ್ನು ಬಿಟ್ಟರೂ ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು, ಮೆಸೇಜ್‌ಗಳು ಬರುತ್ತಿದ್ದವು. ಕನ್ಹಯ್ಯ ತುಂಬ ಭಯಪಟ್ಟಿದ್ದರು. ಅದೆಷ್ಟು ಹೆದರಿದ್ದರು ಎಂದರೆ, ತುಂಬ ದಿನಗಳಿಂದ ಅವರು ಅಂಗಡಿಗೂ ಹೋಗುತ್ತಿರಲಿಲ್ಲ. ಹಾಗೊಮ್ಮೆ ಹೋದರೂ ಎರಡು-ಮೂರು ತಾಸುಗಳಿಗೆಲ್ಲ ವಾಪಸ್ ಮನೆಗೇ ಬಂದುಬಿಡುತ್ತಿದ್ದರು. ಜೂ.28ರಂದು ಶಾಪ್‌ಗೆ ಹೋಗಿದ್ದಷ್ಟೇ, ಕೆಲವೇ ಹೊತ್ತಲ್ಲಿ ಅವರ ಹತ್ಯೆಯಾಯಿತು” ಎಂದು ಜಶೋದಾ ಕಣ್ಣೀರು ಹಾಕಿದ್ದಾರೆ.
ಪೊಲೀಸರು ನಿರ್ಲಕ್ಷ್ಯ ವಹಿಸಿದರು
ಮೃತ ಕನ್ಹಯ್ಯಲಾಲ್ ಪುತ್ರರಾದ ಯಶ್ ಮತ್ತು ತರುಣ್ ಕೂಡ ರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿ ನೋವು ಹಂಚಿಕೊಂಡಿದ್ದಾರೆ. “ನಮ್ಮಪ್ಪ ಕನ್ಹಯ್ಯ ಲಾಲ್‌ಗೆ ಇತ್ತೀಚೆಗೆ ತುಂಬ ಬೆದರಿಕೆ ಕರೆಗಳು ಬರುತ್ತಿದ್ದವು. ನಾವು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೆವು. ಆದರೆ ದೂರಿಗೆ ಪೊಲೀಸರು ಸ್ಪಂದಿಸಲೇ ಇಲ್ಲ, ಅಪ್ಪ ಸೋಷಿಯಲ್ ಮೀಡಿಯಾದಲ್ಲಿ ಬೇಕಂತ ಪೋಸ್ಟ್ ಹಾಕಿರಲಿಲ್ಲ. ಏನೋ ಮಾಡಲು ಹೋಗಿ ಅದಾಗಿತ್ತು. ಪೊಲೀಸರು ಬಂಧಿಸಿ, ಬಳಿಕ ಜಾಮೀನೂ ಸಿಕ್ಕತ್ತು. ಪೊಲೀಸರ ಮಧ್ಯಸ್ಥಿಕೆಯಲ್ಲೇ ದೂರುದಾರರು ಮತ್ತು ನಾವು ಮನಸ್ತಾಪ ಸರಿಪಡಿಸಿಕೊಂಡಿದ್ದೆವು. ಆದರೆ ನಂತರ ಬೆದರಿಕೆ ಬರುತ್ತಿದೆ ಎಂದು ನಾವು ಕೊಟ್ಟ ದೂರನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ. ಸರಿಯಾದ ಸಮಯಕ್ಕೆ ಕ್ರಮ ತೆಗೆದುಕೊಂಡಿದ್ದರೆ, ರಕ್ಷಣೆ ನೀಡಿದ್ದರೆ ನಮ್ಮಪ್ಪ ಬದುಕುತ್ತಿದ್ದರು” ಎಂದು ಹೇಳಿದ್ದಾರೆ. ಹಾಗೇ, ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದೂ ಆಗ್ರಹಿಸಿದ್ದಾರೆ.
ತರುಣ್ ಮತ್ತು ಯಶ್ ಇನ್ನೂ ವಿದ್ಯಾರ್ಥಿಗಳು. ಯಶ್ ಬಿಎ ಪದವಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾರೆ ಮತ್ತು ತರುಣ್ ಫಾರ್ಮಾಸಿ ಮೊದಲ ವರ್ಷದ ವಿದ್ಯಾರ್ಥಿ. ಈ ಕುಟುಂಬದಲ್ಲಿ ದುಡಿಯುತ್ತಿದ್ದುದು ಕನ್ಹಯ್ಯಲಾಲ್ ಅವರೊಬ್ಬರೇ ಆಗಿದ್ದರು. ಈಗ ಅವರು ಮೃತಪಟ್ಟ ಬೆನ್ನಲ್ಲೇ ರಾಜಸ್ಥಾನ ಸರ್ಕಾರ, ಕುಟುಂಬಕ್ಕೆ 31ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಹಾಗೇ, ಇಬ್ಬರೂ ಗಂಡು ಮಕ್ಕಳಿಗೆ ಉದ್ಯೋಗ ನೀಡುವ ಭರವಸೆಯನ್ನೂ ಕೊಟ್ಟಿದೆ.
ಇದನ್ನೂ ಓದಿ: ರಾಜಸ್ಥಾನ ಹತ್ಯೆ; ಟೇಲರ್ ಕನ್ಹಯ್ಯಲಾಲ್‌ಗೆ ಮುಸ್ಲಿಂ ದುಷ್ಕರ್ಮಿಗಳು ಇರಿದಿದ್ದು 26 ಬಾರಿ