Site icon Vistara News

Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

Kargil Vijay Diwas 2024

ಭಾರತೀಯ ಸೈನಿಕರ (Indian army) ಶೌರ್ಯವನ್ನು ಗೌರವಿಸುವ ದಿನವಾದ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಅನ್ನು ಪಾಕಿಸ್ತಾನದೊಂದಿಗಿನ (india- pakistan war) 1999ರ ಸಂಘರ್ಷದಲ್ಲಿ ಭಾರತದ ವಿಜಯದ ಸ್ಮರಣಾರ್ಥವಾಗಿ ಜುಲೈ 26ರಂದು ಆಚರಿಸಲಾಗುತ್ತದೆ. ಈ ಯುದ್ಧದಲ್ಲಿ ಭಾರತೀಯ ಸೇನೆಯ 527 ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು.

ಸುಮಾರು ಮೂರು ತಿಂಗಳ ಕಾಲ ನಡೆದ ಯುದ್ಧದಲ್ಲಿ 1999ರ ಜುಲೈ 26ರಂದು ಭಾರತೀಯ ಸೇನೆಯು ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆಯು ಆಕ್ರಮಿಸಿಕೊಂಡಿದ್ದ ನೆಲೆಗಳಿಂದ ಹಿಮ್ಮೆಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದು ಭಾರತದ ವಿಜಯವನ್ನು ಸೂಚಿಸುತ್ತದೆ. ಅಂದಿನಿಂದ ಪ್ರತಿ ವರ್ಷ ಕಾರ್ಗಿಲ್ ಯುದ್ಧ ದಿವಸ್ ಅನ್ನು ಆಚರಿಸಲಾಗುತ್ತದೆ. ಯುದ್ಧದ ಸಮಯದಲ್ಲಿ ಸೈನಿಕರು ಮಾಡಿದ ಅತ್ಯುನ್ನತ ತ್ಯಾಗವನ್ನು ಈ ದಿನ ಸ್ಮರಿಸಲಾಗುತ್ತದೆ.

ಭಾರತೀಯ ಸೇನೆಯು ಈ ಯುದ್ಧದಲ್ಲಿ ಅನೇಕ ವೀರ ಯೋಧರನ್ನು ಕಳೆದುಕೊಂಡಿತ್ತು. ಅವರಲ್ಲಿ ಕೆಲವರ ಹೋರಾಟದ ಕಥೆಗಳು ನಮಗೆ ಸ್ಫೂರ್ತಿ ನೀಡುವಂತಿದೆ ಮಾತ್ರವಲ್ಲ ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತದೆ. ಅವರಲ್ಲಿ ಈ ಯೋಧರೂ ಸೇರಿದ್ದಾರೆ.

Kargil Vijay Diwas 2024


ಮೇಜರ್ ರಾಜೇಶ್ ಸಿಂಗ್ ಅಧಿಕಾರಿ

1970ರ ಡಿಸೆಂಬರ್ ನಲ್ಲಿ ಉತ್ತರಾಖಂಡದ ನೈನಿತಾಲ್ ನಲ್ಲಿ ಕೆ ಎಸ್ ಅಧಿಕಾರಿ ಮತ್ತು ಮಾಲ್ತಿ ಅಧಿಕಾರಿ ದಂಪತಿಯ ಮಗನಾಗಿ ಜನಿಸಿದ ರಾಜೇಶ್ ಸಿಂಗ್ ಭಾರತದ ಮಿಲಿಟರಿ ಅಕಾಡೆಮಿಯಾದ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದರು. 1993ರ ಡಿಸೆಂಬರ್ 11ರಂದು ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಭಾರತೀಯ ಸೇನೆಗೆ ಅವರನ್ನು ನಿಯೋಜಿಸಲಾಯಿತು. ಭಾರತೀಯ ಸೇನೆಯ ಪದಾತಿ ದಳದಲ್ಲಿ ಇದ್ದ ಅವರನ್ನು ಕಾರ್ಗಿಲ್ ಯುದ್ಧದ ಸಮಯದಲ್ಲಿ 18 ಗ್ರೆನೇಡಿಯರ್ಸ್‌ನಲ್ಲಿ ನಿಯೋಜಿಸಲಾಗಿತ್ತು.


1999ರ ಮೇ 30ರಂದು ಟೊಲೊಲಿಂಗ್ ಅನ್ನು ವಶಪಡಿಸಿಕೊಳ್ಳಲು ತೆರಳಿದರು. ಶತ್ರುಗಳು ಬಲವಾದ ನೆಲೆ ಹೊಂದಿದ್ದ ಫಾರ್ವರ್ಡ್ ಸ್ಪರ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಆರಂಭಿಕ ನೆಲೆಯನ್ನು ಭದ್ರಪಡಿಸುವ ಕಾರ್ಯವನ್ನು ವಹಿಸಿಕೊಂಡ ಅವರ ಸೈನ್ಯವು ಸುಮಾರು 15,000 ಅಡಿ ಎತ್ತರದಲ್ಲಿದ್ದ ಶತ್ರುಗಳನ್ನು ತಮ್ಮ ಸ್ಥಾನದಿಂದ ಹಿಮ್ಮೆಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಹಿಮದಿಂದ ಆವೃತವಾದ ಕಠಿಣ ಪರ್ವತ ಭೂಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ಇಬ್ಬರು ಶತ್ರು ಸಿಬ್ಬಂದಿಯನ್ನು ಕೊಂದರು.

ಹೋರಾಟದ ಸಮಯದಲ್ಲಿ ತೀವ್ರವಾಗಿ ಗಾಯಗೊಂಡರೂ ಅವರು ತಮ್ಮ ಉಪ ಘಟಕಗಳಿಗೆ ನಿರ್ದೇಶನ ನೀಡುವುದನ್ನು ಮುಂದುವರೆಸಿದರು. ಟೊಲೊಲಿಂಗ್‌ನಲ್ಲಿ ಎರಡನೇ ನೆಲೆಯನ್ನು ವಶಪಡಿಸಿಕೊಂಡ ಅನಂತರ ಪಾಯಿಂಟ್ 4590 ಅನ್ನು ವಶಪಡಿಸಿಕೊಂಡರು. ಆದರೆ ರಾಜೇಶ್ ಸಿಂಗ್ ಶತ್ರುಗಳ ದಾಳಿಯಿಂದ ಮೃತಪಟ್ಟರು. ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024


ರೈಫಲ್‌ಮ್ಯಾನ್ ಸಂಜಯ್ ಕುಮಾರ್

1976ರ ಮಾರ್ಚ್ ನಲ್ಲಿ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಕಲೋಲ್ ಬಕೈನ್ ನಲ್ಲಿ ದುರ್ಗಾ ರಾಮ್ ಮತ್ತು ಭಾಗ್ ದೇವಿ ದಂಪತಿಯ ಮಗನಾಗಿ ಜನಿಸಿದ ಸಂಜಯ್ ಕುಮಾರ್ ಅವರನ್ನು 1999ರ ಜುಲೈ 4ರಂದು ಮುಷ್ಕೊಹ್ ಕಣಿವೆಯಲ್ಲಿ ಪಾಯಿಂಟ್ 4875ರ ಫ್ಲಾಟ್ ಟಾಪ್ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿಯೋಜಿಸಲಾಯಿತು.

ಈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಶತ್ರುಗಳ ದಾಳಿಗೆ ತೀವ್ರ ಪ್ರತಿರೋಧವನ್ನು ತೋರಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ನಿಷ್ಕಪಟ ಧೈರ್ಯವನ್ನು ತೋರಿಸಿದ ಸಂಜಯ್ ಕುಮಾರ್ ತಮ್ಮ ಸುರಕ್ಷತೆಯನ್ನು ಸಂಪೂರ್ಣವಾಗಿ ಮರೆತು ಹೋರಾಡಿದರು. ಶತ್ರು ಪಡೆಯ ಮೂವರನ್ನು ಕೊಂದು ಹಾಕಿದರು.


ಗಂಭೀರವಾಗಿ ಗಾಯಗೊಂಡರೂ ಅವರು ಯುದ್ಧ ಭೂಮಿಯಿಂದ ಹಿಂದೆ ಸರಿಯಲಿಲ್ಲ. ಯುದ್ಧವನ್ನು ಮುನ್ನಡೆಸಿ ಶತ್ರುಗಳು ಆಶ್ಚರ್ಯಚಕಿತರಾಗುವಂತೆ ಮಾಡಿದರು. ತಮ್ಮ ಒಡನಾಡಿಗಳಿಗೆ ಯುದ್ಧದಲ್ಲಿ ಮುನ್ನಡೆಯಲು ಪ್ರೇರೇಪಿಸಿದರು. ಯುದ್ಧ ಮುಗಿದ ಬಳಿಕ ಅವರಿಗೆ ಭಾರತದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024


ಮೇಜರ್ ವಿವೇಕ್ ಗುಪ್ತಾ

ಉತ್ತರಾಖಂಡ್‌ನ ಡೆಹರಾಡೂನ್‌ನಲ್ಲಿ 1970ರ ಜನವರಿ 2ರಂದು ಲೆಫ್ಟಿನೆಂಟ್ ಕರ್ನಲ್ ಬಿಆರ್ ಎಸ್ ಗುಪ್ತಾ ಅವರ ಮಗನಾಗಿ ಜನಿಸಿದ ವಿವೇಕ್ ಗುಪ್ತಾ ಪದವಿಯ ಅನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರಿದರು. 1992ರ ಜೂನ್ 13ರಂದು, ಕೆಚ್ಚೆದೆಯ ಯೋಧರಿಗೆ ಹೆಸರುವಾಸಿಯಾದ ಪದಾತಿದಳದ ರೆಜಿಮೆಂಟ್ ರಜಪೂತಾನ ರೈಫಲ್ಸ್ ರೆಜಿಮೆಂಟ್‌ಗೆ ಅವರನ್ನು ನಿಯೋಜಿಸಲಾಯಿತು.

1997ರಲ್ಲಿ ಮೇಜರ್ ವಿವೇಕ್ ಅವರು ಸೇನಾ ಅಧಿಕಾರಿ ಕ್ಯಾಪ್ಟನ್ ರಾಜಶ್ರೀ ಬಿಷ್ಟ್ ಅವರನ್ನು ವಿವಾಹವಾದರು. 1999ರಲ್ಲಿ ಅವರು ಕಾರ್ಗಿಲ್ ಯುದ್ಧದಲ್ಲಿ ಅವರು ಪ್ರಮುಖ ಚಾರ್ಲಿ ಕಂಪನಿಯ ಕಮಾಂಡ್ ಆಗಿದ್ದರು. 2 ರಜಪೂತಾನ ರೈಫಲ್ಸ್ ಡ್ರಾಸ್ ಸೆಕ್ಟರ್‌ನಲ್ಲಿ ಟೋಲೋಲಿಂಗ್ ಟಾಪ್ ಮೇಲೆ ಬೆಟಾಲಿಯನ್ ದಾಳಿಯನ್ನು ಇವರ ನೇತೃತ್ವದಲ್ಲಿ ಪ್ರಾರಂಭಿಸಿತು.

ಮೇಜರ್ ವಿವೇಕ್ ಗುಪ್ತಾ ಅವರ ನಾಯಕತ್ವದಲ್ಲಿ ಶತ್ರು ಪಡೆಯ ಭಾರೀ ಫಿರಂಗಿ ಮತ್ತು ಸ್ವಯಂಚಾಲಿತ ಗುಂಡಿನ ದಾಳಿಯ ನಡುವೆಯೂ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ಸು ಸಾಧಿಸಲಾಯಿತು. ಚಾರ್ಲಿ ಕಂಪನಿಯ ಪ್ರಮುಖ ವಿಭಾಗದ ಮೂವರು ಸಿಬ್ಬಂದಿಗೆ ಬಲವಾದ ಗುಂಡೇಟು ಬಿದ್ದ ಪರಿಣಾಮ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಬಯಲು ಪ್ರದೇಶದಲ್ಲಿ ಹೀಗೆಯೇ ಮುಂದುವರಿದರೆ ಹೆಚ್ಚು ನಷ್ಟವಾಗುತ್ತದೆ ಎಂದು ತಿಳಿದ ತಕ್ಷಣವೇ ವಿವೇಕ್ ಗುಪ್ತಾ ರಾಕೆಟ್ ಲಾಂಚರ್ ಅನ್ನು ಶತ್ರುಸ್ಥಾನದತ್ತ ಹಾರಿಸಿದರು. ಆಘಾತಕ್ಕೊಳಗಾದ ಶತ್ರುಗಳು ಚೇತರಿಸಿಕೊಳ್ಳುವ ಮೊದಲು ಅವರು ಶತ್ರು ನೆಲೆಯ ಮೇಲೆ ಪ್ರಭುತ್ವ ಸ್ಥಾಪಿಸಿದರು. ಈ ವೇಳೆ ಎರಡು ಗುಂಡು ದೇಹವನ್ನು ತೂರಿ ಗಾಯಗೊಂಡರೂ ಮೂವರು ಶತ್ರು ಸೈನಿಕರನ್ನು ಕೊಲ್ಲುವಲ್ಲಿ ಯಶಸ್ವಿಯಾದರು.


ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ತತ್ತರಿಸಿದ ಪಾಕಿಗಳು; ಈ ನಾಲ್ವರು ಯೋಧರ ಸಾಹಸ ರೋಚಕ!

ಇವರಿಂದ ಸ್ಫೂರ್ತಿ ಪಡೆದ ಕಂಪೆನಿಯ ಉಳಿದವರು ಶತ್ರುಗಳ ನೆಲೆಯ ಮೇಲೆ ದಾಳಿ ನಿರಂತರ ನಡೆಸಿ ವಶಪಡಿಸಿಕೊಂಡರು. ಯುದ್ಧದ ಸಮಯದಲ್ಲಿ ಶೌರ್ಯದಿಂದ ಹೋರಾಡಿದ್ದ ಕ್ಯಾ. ವಿವೇಕ್ ಗುಪ್ತಾ ಬಲಿಯಾದರು. ಅವರ ಸ್ಫೂರ್ತಿದಾಯಕ ನಾಯಕತ್ವ ಮತ್ತು ಶೌರ್ಯವು ಅಂತಿಮವಾಗಿ ಟೋಲೋಲಿಂಗ್ ಟಾಪ್ ಅನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆಗೆ ಸಾಧ್ಯವಾಯಿತು. ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು.

Exit mobile version