ಭಾರತದಾದ್ಯಂತ (india) ಜುಲೈ 26ರಂದು 25ನೇ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಅನ್ನು ಆಚರಿಸಲಾಗುತ್ತಿದೆ. ಭಾರತ- ಪಾಕ್ (india-pak) ಯುದ್ಧ ಮುಗಿದು 25 ವರ್ಷಗಳಾದರೂ ಅದರ ನೆನಪು ಇನ್ನು ಎಲ್ಲರ ಮನದಲ್ಲಿ ಹಸಿರಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಡೆದ ಪ್ರಮುಖ ಘಟನಾವಳಿಗಳ ವಿವರ ಇಲ್ಲಿದೆ.
1999ರ ಮೇ 3
ಪಾಕಿಸ್ತಾನದ ಸೈನಿಕರು ಮತ್ತು ಉಗ್ರಗಾಮಿಗಳು ಭಾರತದ ಗಡಿಯೊಳಗೆ ಬಂದಿರುವ ಬಗ್ಗೆ ಕಾರ್ಗಿಲ್‌ನಲ್ಲಿರುವ ಸ್ಥಳೀಯ ಕುರಿಗಾಹಿಗಳು ಭಾರತೀಯ ಸೇನೆಗೆ ಮಾಹಿತಿ ನೀಡಿದರು.
1999 ಮೇ 5
ಕುರಿಗಾಹಿಗಳು ನೀಡಿದ ಮಾಹಿತಿ ಆಧರಿಸಿ ಆ ಪ್ರದೇಶಕ್ಕೆ ತೆರಳಿದ ಗಸ್ತು ತಿರುಗುತ್ತಿದ್ದ ಭಾರತೀಯ ಸೇನೆಯ ಐವರು ಅಧಿಕಾರಿಗಳನ್ನು ಪಾಕಿಸ್ತಾನಿ ಸೈನಿಕರು ಮತ್ತು ಉಗ್ರರು ಚಿತ್ರಹಿಂಸೆ ಕೊಟ್ಟು ಕೊಂದು ಹಾಕಿದರು.
1999 ಮೇ 5
ಪಾಕಿಸ್ತಾನ ಸೇನೆ ಕಾರ್ಗಿಲ್‌ನಲ್ಲಿ ಭಾರತೀಯ ಸೇನೆಯ ಮದ್ದುಗುಂಡುಗಳನ್ನು ಧ್ವಂಸ ಮಾಡಿತು.
1999ರ ಮೇ 10ರಿಂದ ಮೇ 25
ಶತ್ರುಗಳು ಮತ್ತಷ್ಟು ಒಳನುಸುಳುತ್ತಿರುವುದನ್ನು ಪತ್ತೆ ಹಚ್ಚಲಾಯಿತು. ಇದು ಕಾರ್ಗಿಲ್‌ಗೆ ಹೆಚ್ಚುವರಿ ಪಡೆಗಳ ನಿಯೋಜನೆ ಮತ್ತು ಯುದ್ಧಕ್ಕೆ ಸನ್ನದ್ಧವಾಗಲು ಪ್ರೇರೇಪಿಸಿತು.
ಕಾರ್ಗಿಲ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಗೆ ಭಾರತೀಯ ಸೇನೆಯು ಕಾಶ್ಮೀರದಿಂದ ತನ್ನ ಸೈನ್ಯವನ್ನು ಸಜ್ಜುಗೊಳಿಸುವ ಮೂಲಕ ಪ್ರದೇಶವನ್ನು ಬಲಪಡಿಸಲು ಪ್ರಾರಂಭಿಸಿತು.
ಪಾಕಿಸ್ತಾನಿ ಪಡೆಗಳು ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಮರಳಿ ಪಡೆಯಲು ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಬೃಹತ್ ಕಾರ್ಯಾಚಣೆ ಪ್ರಾರಂಭಿಸಿತು.
1999 ಮೇ 26
ಭಾರತೀಯ ವಾಯುಪಡೆಯು (IAF) ‘ಆಪರೇಷನ್ ಸಫೇದ್ ಸಾಗರ್’ ಅನ್ನು ಪ್ರಾರಂಭಿಸಿತು. ಪಾಕಿಸ್ತಾನದ ನೆಲೆಗಳ ಮೇಲೆ ವೈಮಾನಿಕ ದಾಳಿಯನ್ನು ಶುರು ಮಾಡಿತು.
1999ರ ಮೇ 27 – ಮೇ 28
ಮೂರು ಐಎಎಫ್ ವಿಮಾನಗಳಾದ ಮಿಗ್-21, ಮಿಗ್-27 ಮತ್ತು ಮಿ-17 ಅನ್ನು ಪಾಕಿಸ್ತಾನಿ ಪಡೆಗಳು ಹೊಡೆದುರುಳಿಸಿದವು.
1999ರ ಮೇ 31
ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದೊಂದಿಗೆ ಯುದ್ಧದ ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಿದರು.
1999ರ ಜೂನ್ 1
ಕಾಶ್ಮೀರ ಮತ್ತು ಲಡಾಖ್‌ನ ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಪಾಕಿಸ್ತಾನ ಶೆಲ್ ದಾಳಿ ಆರಂಭಿಸಿತು.
1999ರ ಜೂನ್ 5
ಭಾರತವು ಮೂವರು ಪಾಕಿಸ್ತಾನಿ ಸೈನಿಕರಿಂದ ವಶಪಡಿಸಿಕೊಂಡ ದಾಖಲೆಗಳನ್ನು ಬಿಡುಗಡೆ ಮಾಡಿತು. ಅದು ಸಂಘರ್ಷದಲ್ಲಿ ಪಾಕಿಸ್ತಾನದ ನೇರ ಪಾಲ್ಗೊಳ್ಳುವಿಕೆಯನ್ನು ಅಧಿಕೃತವಾಗಿ ವಿಶ್ವಕ್ಕೆ ಖಚಿತಪಡಿಸಿತು.
1999ರ ಜೂನ್ 9
ಭಾರತೀಯ ಸೇನೆಯು ಬಟಾಲಿಕ್ ಸೆಕ್ಟರ್‌ನಲ್ಲಿ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಎರಡು ಮಹತ್ವದ ನೆಲೆಗಳನ್ನು ವಶಪಡಿಸಿಕೊಂಡಿತು.
1999ರ ಜೂನ್ 10
ಪಾಕಿಸ್ತಾನವು ಜಾಟ್ ರೆಜಿಮೆಂಟ್‌ನ ಆರು ಭಾರತೀಯ ಸೈನಿಕರನ್ನು ಕೊಂದು ವಿರೂಪಗೊಳಿಸಿದ ದೇಹಗಳನ್ನು ಹಿಂದಿರುಗಿಸಿತು. ಈ ಬರ್ಬರ ಕೃತ್ಯ ಪಾಕಿಸ್ತಾನದ ವಿರುದ್ಧ ಭಾರತೀಯರ ಆಕ್ರೋಶ ಹೆಚ್ಚಿಸಿತು.
1999ರ ಜೂನ್ 11
ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನಿ ಸೈನಿಕರ ಒಳನುಸುಳುವಿಕೆಯನ್ನು ಸಾಬೀತುಪಡಿಸುವ ಪಾಕ್‌ನ ಅಂದಿನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ಸಿಜಿಎಸ್ ಲೆಫ್ಟಿನೆಂಟ್ ಜನರಲ್ ಅಜೀಜ್ ಖಾನ್ ನಡುವಿನ ಸಂಭಾಷಣೆಯ ಮತ್ತೊಂದು ಪುರಾವೆಯನ್ನು ಭಾರತ ಬಿಡುಗಡೆ ಮಾಡಿತು.
1999ರ ಜೂನ್ 13
ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾರ್ಗಿಲ್‌ಗೆ ಭೇಟಿ ನೀಡಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಅವರಿಗೆ ಸ್ಫೂರ್ತಿ ತುಂಬಿದರು.
ಭಾರತೀಯ ಸೇನೆಯು ಟೋಲೋಲಿಂಗ್ ಶಿಖರವನ್ನು ಪುನಃ ವಶಪಡಿಸಿಕೊಂಡಿತು. ಪಾಕಿಸ್ತಾನಿ ಪಡೆಗಳ ದಾಳಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿತು.
1999ರ ಜೂನ್ 15
ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರಿಗೆ ಕಾರ್ಗಿಲ್‌ನಿಂದ ಎಲ್ಲಾ ಪಾಕಿಸ್ತಾನಿ ಸೇನೆಯನ್ನು ತುರ್ತಾಗಿ ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು.
1999ರ ಜುಲೈ 4
ಅತ್ಯಂತ ನಿರ್ಣಾಯಕವಾದ ಟೈಗರ್ ಹಿಲ್ ಅನ್ನು ಭಾರತೀಯ ಸೇನೆ ಮರಳಿ ವಶಪಡಿಸಿಕೊಂಡಿತು. ಪಾಕಿಸ್ತಾನಿ ಪಡೆಗಳು ಬಟಾಲಿಕ್ ವಲಯದಿಂದ ಹೆದರಿ ಪಲಾಯನ ಮಾಡಿತು. ಭಾರತೀಯ ಸೈನಿಕರು ವೀರಾವೇಶದಿಂದ ಹೋರಾಡಿ ಪಾಕ್ ಸೈನಿಕರನ್ನು ಬಗ್ಗು ಬಡಿದರು.
1999ರ ಜುಲೈ 5
ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಭೇಟಿ ಮಾಡಿದ ಅನಂತರ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಕಾರ್ಗಿಲ್‌ನಿಂದ ಪಾಕಿಸ್ತಾನಿ ಪಡೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಿದರು. ಭಾರತೀಯ ಪಡೆಗಳು ತ್ವರಿತವಾಗಿ ದ್ರಾಸ್ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಂಡವು. ಸೇನೆಯನ್ನು ಹಿಂತೆಗೆದುಕೊಳ್ಳದೆ ಪಾಕಿಸ್ತಾನಕ್ಕೆ ಬೇರೆ ದಾರಿ ಇರಲಿಲ್ಲ. ಏಕೆಂದರೆ ಪಾಕ್ ಸೈನಿಕರು ಭಾರತೀಯ ಸೈನ್ಯದ ಎದುರು ಸೋತು ಸುಣ್ಣವಾಗಿದ್ದರು.
1999ರ ಜುಲೈ 12
ಪಾಕಿಸ್ತಾನಿ ಪಡೆಗಳು ಕಾರ್ಗಿಲ್‌ನಿಂದ ತಮ್ಮ ವಾಪಸಾತಿಯನ್ನು ಪೂರ್ಣಗೊಳಿಸಿದವು. ಈ ನಡುವೆ ನವಾಜ್ ಷರೀಫ್ ಭಾರತದೊಂದಿಗೆ ಮಾತುಕತೆಯನ್ನು ಪ್ರಸ್ತಾಪಿಸಿದರು.
1999ರ ಜುಲೈ 14
ಪ್ರಧಾನಿ ವಾಜಪೇಯಿ ಅವರು ‘ಆಪರೇಷನ್ ವಿಜಯ್’ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಪಾಕಿಸ್ತಾನದೊಂದಿಗೆ ತಕ್ಷಣ ಮಾತುಕತೆಗೆ ನಿರಾಕರಿಸಿದರು.
1999ರ ಜುಲೈ 26
ಕಾರ್ಗಿಲ್ ಯುದ್ಧ ಮುಗಿದಿದೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಭಾರತೀಯ ಪಡೆಗಳು ವಿಜಯಶಾಲಿಯಾಗಿ ಹೊರಹೊಮ್ಮಿತು. ಭಾರತೀಯ ಸೇನಾ ಪಡೆಯ ಸಾಮರ್ಥ್ಯ ಮತ್ತೊಮ್ಮೆ ಜಗತ್ತಿನೆದುರು ಸಾಬೀತಾಯಿತು.
ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ತತ್ತರಿಸಿದ ಪಾಕಿಗಳು; ಈ ನಾಲ್ವರು ಯೋಧರ ಸಾಹಸ ರೋಚಕ!
ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿನ ಹಿಂದೆ ಸೈನಿಕರ ಅಪಾರ ತ್ಯಾಗವಿತ್ತು. 500ಕ್ಕೂ ಹೆಚ್ಚು ಧೈರ್ಯಶಾಲಿ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಕಾರ್ಗಿಲ್ ವಿಜಯ್ ದಿವಸ್ ನಮ್ಮ ವೀರ ಸೈನಿಕರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳುವ ಮತ್ತು ವಂದಿಸುವ ದಿನವಾಗಿದೆ. ಈ ಯುದ್ಧದಲ್ಲಿ 527 ಭಾರತೀಯ ಸೈನಿಕರು ಹುತಾತ್ಮರಾದರು. 1363 ಮಂದಿ ಗಾಯಗೊಂಡರು. ಸೈನಿಕರು ಮತ್ತು ಉಗ್ರರು ಸೇರಿ ಪಾಕಿಸ್ತಾನದ ಸುಮಾರು 3000 ಮಂದಿಯ ಸಾವು ಸಂಭವಿಸಿತ್ತು ಎಂದು ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದರು.