Site icon Vistara News

Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್

Kargil Vijay Diwas 2024

ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಬಿಸಿಲು, ಮಳೆ, ಗಾಳಿ ಎನ್ನದೆ ಕಾವಲು ಕಾಯುತ್ತಿರುವ ನಮ್ಮ ಸೈನಿಕರು (Indian army). ತಮ್ಮ ಮನೆ, ಪರಿವಾರವನ್ನು ಬಿಟ್ಟು ದೇಶವೇ ತಮ್ಮ ಮನೆ ಎನ್ನುವಂತೆ ಕಾವಲು ಕಾಯುವ ಇವರು ಯುದ್ಧ (india-pakistan war) ಸನ್ನಿವೇಶದಲ್ಲಿ ಯಾವುದನ್ನೂ ಲೆಕ್ಕಿಸದೆ ಪ್ರಾಣ ತ್ಯಾಗಕ್ಕೂ ಮುಂದಾಗುತ್ತಾರೆ. ಅಂತಹ ಒಂದು ಘಟನೆ ಕಾರ್ಗಿಲ್ ಯುದ್ಧ (Kargil Vijay Diwas 2024). ಇದು ನಡೆದು 25 ವರ್ಷಗಳಾದರೂ ಅದರಲ್ಲಿ ಹೋರಾಡಿದ ಸೈನಿಕರ ತ್ಯಾಗದ ಕಥೆಗಳು ಅಜರಾಮರವಾಗಿದೆ.

ಪಾಕಿಸ್ತಾನದ ನುಸುಳಿಕೋರರನ್ನು ಹಿಮ್ಮೆಟ್ಟಿಸಲು ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿದ್ದರು ಭಾರತದ ಸೈನಿಕರು. ಪ್ರಕೃತಿಯೂ ಹಲವು ಸವಾಲುಗಳನ್ನು ಒಡ್ಡಿತ್ತು. ಆದರೂ ನಮ್ಮ ಸೈನಿಕರು ಗಡಿಯಲ್ಲಿ ಶತ್ರು ಪಡೆಯ ಮೇಲೆರಗಿದರು. ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ಮೇ ತಿಂಗಳಲ್ಲಿ ಆರಂಭವಾದ ಜುಲೈ ಅಂತ್ಯದವರೆಗೂ ನಡೆದಿತ್ತು. ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಜುಲೈ 26 ಅನ್ನು ʼಕಾರ್ಗಿಲ್‌ ವಿಜಯ್‌ ದಿವಸ್‌ʼ ಎಂದು ಆಚರಿಸಲಾಗುತ್ತದೆ. ಮಡಿದ ಯೋಧರ ಸಾಹಸಗಾಥೆಯನ್ನು, ಬದುಕಿನ ಕೊನೆಯ ಘಳಿಗೆಯಲ್ಲಿ ಅವರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ನೆನಪಿಸಲಾಗುತ್ತದೆ. ಅವರ ಈ ಹೋರಾಟದ ಕಥೆ ಕೇವಲ ನಮಗೆ ಸ್ಫೂರ್ತಿ ನೀಡುವುದು ಮಾತ್ರವಲ್ಲ ಎಲ್ಲರ ಕಣ್ಣಂಚು ಒದ್ದೆಯಾಗುವಂತೆ ಮಾಡುವುದು. ಅಂತಹ ನಾಲ್ವರು ವೀರರ ಕುರಿತು ಮಾಹಿತಿ ಇಲ್ಲಿದೆ.

Kargil Vijay Diwas 2024


ಕ್ಯಾಪ್ಟನ್ ಎನ್ ಕೆಂಗುರುಸೆ

ಭಾರತದ ನಾಗಾಲ್ಯಾಂಡ್‌ನ ಕೊಹಿಮಾ ಜಿಲ್ಲೆಯಲ್ಲಿ ಜುಲೈ 1974ರಲ್ಲಿ ನೈಸೆಲಿ ಕೆಂಗುರುಸೆ ಮತ್ತು ಡಿನುವೊ ಕೆಂಗುರುಸೆ ದಂಪತಿಗೆ ಮಗನಾಗಿ ಜನಿಸಿದ ಕೆಂಗುರುಸೆ 1994 ರಿಂದ 1997ರವರೆಗೆ ಕೊಹಿಮಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಬಳಿಕ ಅವರು ಭಾರತೀಯ ಸೇನೆಯನ್ನು ಸೇರಿದರು.
1999ರ ಜೂನ್ 28ರಂದು ರಾತ್ರಿ ಆಪರೇಷನ್ ವಿಜಯ್ ಸಮಯದಲ್ಲಿ ಡ್ರಾಸ್ ಸೆಕ್ಟರ್‌ನಲ್ಲಿ ಏರಿಯಾ ಬ್ಲ್ಯಾಕ್ ರಾಕ್ ಮೇಲೆ ದಾಳಿ ನಡೆಸಲು ಘಾತಕ್‌ ಪ್ಲಟೂನ್ ಕಮಾಂಡರ್ ಆಗಿ ತಂಡವನ್ನು ಶೌರ್ಯದಿಂದ ಮುನ್ನಡೆಸಿದರು.


ಎತ್ತರದ ಬಂಡೆಯ ಮೇಲಿದ್ದ ಶತ್ರು ಸ್ಥಾನವನ್ನು ತಲುಪಲು ಕಮಾಂಡೋ ತಂಡವು ದಾಳಿಯ ಕುರಿತು ಯೋಜನೆ ರೂಪಿಸುತ್ತಿದ್ದಾಗಲೇ ಅವರ ಮೇಲೆ ದಾಳಿ ನಡೆದಿತ್ತು. ತೀವ್ರ ಗಾಯಗೊಂಡ ಕೆಂಗುರುಸೆ ಸ್ಥಳದಿಂದ ಹಿಮ್ಮೆಟ್ಟಲು ನಿರಾಕರಿಸಿದರು. ತಮ್ಮ ಬೂಟುಗಳನ್ನು ತೆಗೆದಿರಿಸಿ ಬಂಡೆಯನ್ನು ತೆವಳುತ್ತ ಏರಿ ಸಾಯುವ ಮೊದಲು ಶತ್ರು ಪಡೆಯ ಮೂವರನ್ನು ಕೊಂದು ಹಾಕಿದರು.

ಇದು ಬೆಟಾಲಿಯನ್ ವಿಜಯಕ್ಕೆ ಕಾರಣವಾಯಿತು. ಏಕಾಂಗಿಯಾಗಿ ಹೋರಾಡಿ ಶತ್ರುಗಳ ಸ್ಥಾನವನ್ನು ವಶಕ್ಕೆ ಪಡೆದುಕೊಂಡ ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024


ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫರ್ಡ್ ನಾಂಗ್ರಮ್

ಭಾರತದ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಕೀಶಿಂಗ್ ಪೀಟರ್ ಮತ್ತು ಸೈಲಿ ನೊಂಗ್ರಮ್ ಅವರ ಮಗನಾಗಿ ಜನಿಸಿದ ಕಿಶಿಂಗ್ ಬಟಾಲಿಕ್ ಸೆಕ್ಟರ್‌ನಲ್ಲಿ ಪಾಯಿಂಟ್ 4812 ಅನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಆಗ್ನೇಯ ದಿಕ್ಕಿನಿಂದ ಆಕ್ರಮಣ ಮಾಡುವ ಜವಾಬ್ದಾರಿ ಹೊತ್ತುಕೊಂಡರು.

ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫರ್ಡ್ ನೊಂಗ್ರಮ್ ಅವರಿದ್ದ ಪ್ರದೇಶದ ಮೇಲೆ ಶತ್ರುಗಳು ನಿರಂತರವಾಗಿ ಸ್ವಯಂಚಾಲಿತ ಮೆಷಿನ್‌ ಗನ್‌ನಿಂದ ಸುಮಾರು ಎರಡು ಗಂಟೆಗಳ ಕಾಲ ದಾಳಿ ನಡೆಸಿದರು. ಆದರೂ ತಮ್ಮ ಸುರಕ್ಷತೆಯನ್ನು ಲೆಕ್ಕಿಸದೆ ಅವರು ಶತ್ರು ಪಡೆಯತ್ತ ಗ್ರೆನೇಡ್‌ಗಳನ್ನು ಎಸೆದು ಆರು ಶತ್ರುಗಳನ್ನು ಕೊಂದರು.


ಶತ್ರುಗಳ ಮೆಷಿನ್ ಗನ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುವಾಗ ಗಾಯಗೊಂಡರೂ ಅವರು ಪಟ್ಟು ಬಿಡಲಿಲ್ಲ. ಇದರಿಂದ ಶತ್ರುಗಳು ದಿಗ್ಭ್ರಮೆಗೊಂಡರು. ಸಾಯುವವರೆಗೂ ವೀರಾವೇಶದಿಂದ ಹೋರಾಡಿದರು. ಇದರಿಂದ ಪಾಯಿಂಟ್ 4812 ಅನ್ನು ವಶ ಪಡೆಯುವುದು ಭಾರತೀಯ ಸೈನಿಕರಿಗೆ ಸಾಧ್ಯವಾಯಿತು. ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು.

Kargil Vijay Diwas 2024


ನಾಯಕ್ ದಿಗೇಂದ್ರ ಕುಮಾರ್

ರಾಜಸ್ಥಾನದ ಜಲಾರ ಗ್ರಾಮದವರಾದ ಶಿವದನ್ ಸಿಂಗ್ ಮತ್ತು ರಾಜ್ ಗೋರ್ ದಂಪತಿಯ ಮಗನಾಗಿ ಜುಲೈ 1969 ರಲ್ಲಿ ಜನಿಸಿದ ದಿಗೇಂದ್ರ ಕುಮಾರ್, ಡ್ರಾಸ್ ಸೆಕ್ಟರ್‌ನಲ್ಲಿನ ಟೋಲೋಲಿಂಗ್ ದಾಳಿಯ ಸಮಯದಲ್ಲಿ ಅವರು ಲೈಟ್ ಮೆಷಿನ್ ಗನ್ ಗ್ರೂಪ್‌ನ ಕಮಾಂಡರ್ ಆಗಿದ್ದರು.

ಇವರ ಕಮಾಂಡೋ ತಂಡದಲ್ಲಿ ಮೇಜರ್ ವಿವೇಕ್ ಗುಪ್ತಾ, ಸುಬೇದಾರ್ ಭನ್ವರ್ ಲಾಲ್ ಭಾಕರ್, ಸುಬೇದಾರ್ ಸುರೇಂದ್ರ ಸಿಂಗ್ ರಾಥೋರ್, ಲ್ಯಾನ್ಸ್ ನಾಯಕ್ ಜಸ್ವಿರ್ ಸಿಂಗ್, ನಾಯಕ್ ಸುರೇಂದ್ರ, ನಾಯಕ್ ಚಮನ್ ಸಿಂಗ್ ತೆವಾಟಿಯಾ, ಲಾನ್ಸ್ ನಾಯಕ್ ಬಚ್ಚನ್ ಸಿಂಗ್, ಸಿಎಂಎಚ್ ಜಶ್ವಿರ್ ಸಿಂಗ್, ಮತ್ತು ಹವಾಲ್ದಾರ್ ಸುಲ್ತಾನ್ ಸಿಂಗ್ ನರ್ವಾರ್ ಇದ್ದರು. ಸುಭದ್ರವಾದ ಶತ್ರು ನೆಲೆಯನ್ನು ವಶಪಡಿಸಿಕೊಳ್ಳುವುದು ಅವರ ಮುಖ್ಯ ಗುರಿಯಾಗಿತ್ತು.

ಟೋಲೋಲಿಂಗ್ ಬೆಟ್ಟದ ಮೇಲೆ ಪಾಕಿಸ್ತಾನಿ ಸೇನೆ 11 ಬಂಕರ್‌ಗಳನ್ನು ನಿರ್ಮಿಸಿತ್ತು. ಕುಮಾರ್ ಮೊದಲ ಮತ್ತು ಕೊನೆಯ ಬಂಕರ್‌ಗಳನ್ನು ಗುರಿಯಾಗಿಸಿಕೊಂಡಿದ್ದರು. ಇತರ ಕಮಾಂಡೋಗಳು ಉಳಿದ 9 ಬಂಕರ್‌ಗಳನ್ನು ಗುರಿಯಾಗಿಸಿಕೊಂಡಿದ್ದರು.


1999ರ ಜೂನ್ 13ರಂದು ನಡೆದ ಆಕ್ರಮಣವು ಭಾರೀ ಸಾವುನೋವುಗಳಿಗೆ ಕಾರಣವಾಯಿತು. ಸುಬೇದಾರ್ ಭನ್ವರ್ ಲಾಲ್ ಭಾಕರ್, ಲ್ಯಾನ್ಸ್ ನಾಯಕ್ ಜಸ್ವಿರ್ ಸಿಂಗ್, ನಾಯಕ್ ಸುರೇಂದ್ರ ಮತ್ತು ನಾಯಕ್ ಚಮನ್ ಸಿಂಗ್ , ಮೇಜರ್ ವಿವೇಕ್ ಗುಪ್ತಾ ಸಾವನ್ನಪ್ಪಿದರು. ದಿಗೇಂದ್ರ ಅವರ ಎಡಗೈಗೆ ಗುಂಡು ತಗುಲಿದರೂ ಅವರು ಒಂದು ಕೈಯಿಂದ ಗುಂಡು ಹಾರಿಸುವುದನ್ನು ಮುಂದುವರಿಸಿದರು. 48 ಪಾಕಿಸ್ತಾನಿ ಸೈನಿಕರನ್ನು ಏಕಾಂಗಿಯಾಗಿ ಕೊಂದು ಹಾಕಿದರು.

ತೀವ್ರವಾದ ಹೋರಾಟದ ಅನಂತರ ಭಾರತೀಯ ಸೇನೆ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. 1999ರ ಸ್ವಾತಂತ್ರ್ಯ ದಿನದಂದು ಅವರು ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾ ವೀರ ಚಕ್ರವನ್ನು ಪಡೆದರು.

Kargil Vijay Diwas 2024


ಕ್ಯಾಪ್ಟನ್ ಅಮೋಲ್ ಕಾಲಿಯಾ

1974ರ ಫೆಬ್ರವರಿ 26ರಂದು ಪಂಜಾಬ್‌ನ ರೋಪರ್ ಜಿಲ್ಲೆಯ ನಂಗಲ್ ಪಟ್ಟಣದಲ್ಲಿ ಸತ್ ಪಾಲ್ ಕಾಲಿಯಾ ಮತ್ತು ಉಷಾ ಕಾಲಿಯಾ ದಂಪತಿಯ ಮಗನಾಗಿ ಜನಿಸಿದ ಕ್ಯಾಪ್ಟನ್ ಅಮೋಲ್ ಕಾಲಿಯಾ ಅವರಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸನ್ನು ಹೊಂದಿದ್ದರು. ಹೀಗಾಗಿ ಎಂಜಿನಿಯರಿಂಗ್‌ನ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಅವರು ಸೇನಾ ತರಬೇತಿ ಶಾಲೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಲು ನಿರ್ಧರಿಸಿದರು.


1999ರ ಭಾರತ ಮತ್ತು ಪಾಕಿಸ್ತಾನದ ಯುದ್ಧದ ವೇಳೆ ಪಾಕಿಸ್ತಾನಿ ಸೈನಿಕರಿಂದ ಬಹಳ ಮುಖ್ಯವಾದ ಪರ್ವತದ ತುದಿಯನ್ನು ವಶಪಡಿಸಿಕೊಳ್ಳಲು ಕ್ಯಾಪ್ಟನ್ ಕಾಲಿಯಾ ಅವರ ತಂಡವನ್ನು ಕಳುಹಿಸಲಾಯಿತು. ಇದು ಅಪಾಯಕಾರಿ ಕಾರ್ಯಾಚರಣೆಯಾಗಿತ್ತು. ಆದರೆ ಕ್ಯಾಪ್ಟನ್ ಕಾಲಿಯಾ ಮತ್ತು ಅವರ 13 ಸಹ ಸೈನಿಕರು ಪರ್ವತ ಹೋರಾಟದಲ್ಲಿ ಪರಿಣತರಾಗಿದ್ದರು. ರಾತ್ರಿಯಲ್ಲೇ ಪರ್ವತದ ತುದಿಯನ್ನು ತಲುಪಿದ ಅವರು ಶತ್ರು ಸೈನಿಕರೊಂದಿಗೆ ಹೋರಾಡಲು ಪ್ರಾರಂಭಿಸಿದರು. ಯುದ್ಧದ ಸಮಯದಲ್ಲಿ ಕ್ಯಾಪ್ಟನ್ ಕಾಲಿಯಾ ಅವರ ತಂಡದಲ್ಲಿದ್ದ ಕೆಲವು ಸೈನಿಕರು ವೀರ ಮರಣವನ್ನು ಅಪ್ಪಿದರು.

ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್ ಯುದ್ಧದ ಹೃದಯಸ್ಪರ್ಶಿ ಕಥೆ ಹೇಳುವ ಈ 9 ಪುಸ್ತಕಗಳನ್ನು ಓದಲೇಬೇಕು!

ಕ್ಯಾಪ್ಟನ್ ಕಾಲಿಯಾ ತೀವ್ರವಾಗಿ ಗಾಯಗೊಂಡಿದ್ದರೂ ಧೈರ್ಯದಿಂದ ಹೋರಾಟ ಮುಂದುವರಿಸಿ ಮೂವರು ಶತ್ರು ಸೈನಿಕರನ್ನು ಕೊಂದರು. ತಮ್ಮ ಕೊನೆಯ ಉಸಿರಿನವರೆಗೂ ಶತ್ರುಗಳ ಮೇಲೆ ದಾಳಿ ನಡೆಸಿದ ಕ್ಯಾಪ್ಟನ್ ಕಾಲಿಯಾ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಪರ್ವತದ ತುದಿಯ ಪ್ರದೇಶವೂ ಭಾರತದ ಪಾಲಾಯಿತು. ಈ ವೀರ ಯೋಧರ ಸಾಹಸ ಮತ್ತು ಪರಾಕ್ರಮ ಅವಿಸ್ಮರಣೀಯ.

Exit mobile version