Site icon Vistara News

Kargil Vijay Diwas : ಕಾರ್ಗಿಲ್‌ ವೀರರಿಗೆ ಬಾಲಿವುಡ್‌ ತಾರೆಯರು, ಗಣ್ಯರ ಭಾವುಕ ಸಂದೇಶ

Kargil Vijay Diwas

ಮುಂಬೈ: ಇಂದು ಕಾರ್ಗಿಲ್‌ ವಿಜಯ ದಿನ(Kargil Vijay Diwas). 1999ರಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ದೇಶವನ್ನು ಕಾಪಾಡಲು ಪಾಕಿಸ್ತಾನಿ ಯೋಧರೊಂದಿಗೆ ಹೊಡೆದಾಡಿ ಪ್ರಾಣವನ್ನೇ ತ್ಯಾಗ ಮಾಡಿದ ಯೋಧರನ್ನು ನೆನಪಿಸಿಕೊಳ್ಳುವಂತಹ ದಿನ. ಈ ವಿಶೇಷ ದಿನದಂದು ಇಡೀ ದೇಶವೇ ಯೋಧರನ್ನು ಸ್ಮರಿಸಿಕೊಳ್ಳುತ್ತಿದೆ. ಅದೇ ರೀತಿಯಲ್ಲಿ ಬಾಲಿವುಡ್‌ನ ತಾರೆಗಳು ಹಾಗೂ ಹಲವಾರು ಗಣ್ಯರು ಕೂಡ ಯೋಧರ ಬಲಿದಾನವನ್ನು ಸ್ಮರಿಸಿ, ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ಬಾಲಿವುಡ್‌ನ ನಟ ಅಕ್ಷಯ್‌ ಕುಮಾರ್‌ ಅವರು ಕಾರ್ಗಿಲ್‌ ವಿಜಯ ದಿನವನ್ನು ಸ್ಮರಿಸುತ್ತಾ ಟ್ವೀಟ್‌ ಮಾಡಿದ್ದಾರೆ. “ಹೃದಯದಲ್ಲಿ ಕೃತಜ್ಞತೆ ಮತ್ತು ಬಾಯಿಯಲ್ಲಿ ಪ್ರಾರ್ಥನೆಯೊಂದಿಗೆ, ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ನಮ್ಮ ಕೆಚ್ಚೆದೆಯ ಹೃದಯಗಳನ್ನು ಸ್ಮರಿಸುತ್ತೇನೆ. ಇಂದು ನಿಮ್ಮಿಂದಾಗಿ ನಾವು ಬದುಕಿದ್ದೇವೆ” ಎಂದು ಬರೆದುಕೊಂಡಿದ್ದಾರೆ.


ಹಾಗೆಯೇ ನಟಿ ನಿಮ್ರತ್‌ ಕೌರ್‌ ಅವರು ಕೂಡ ಈ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ಕಾರ್ಗಿಲ್‌ ವಿಜಯ ದಿನದ ಅಂಗವಾಗಿ ನೋಯ್ಡಾದಲ್ಲಿ ಆಯೋಜಿಸಲಾಗಿದ್ದ ಸೈಕ್ಲಿಂಗ್‌ ಕಾರ್ಯಕ್ರಮದಲ್ಲಿ ಅವರ ತಾಯಿ ಭಾಗವಹಿಸಿದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. “ಕಾರ್ಗಿಲ್‌ ವಿಜಯ್‌ ದಿವಸ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಅಪ್ರತಿಮ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸುತ್ತೇನೆ. ನೋಯ್ಡಾದಲ್ಲಿ ನನ್ನ ತಾಯಿ ಕಾರ್ಗಿಲ್‌ ವಿಜಯ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ 20ಕಿ.ಮೀ. ಸೈಕ್ಲಿಂಗ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಕಾರ್ಗಿಲ್‌ ಯುದ್ಧದ ವೀರರ ಸೇವೆಯನ್ನು ನಾವು ಎಂದಿಗೂ ಮರೆಯಬಾರದು” ಎಂದು ಬರೆದುಕೊಂಡಿದ್ದಾರೆ.

ನಟ ಅಭಿಷೇಕ್‌ ಬಚ್ಚನ್‌ ಅವರೂ ಕೂಡ ಈ ದಿನವನ್ನು ಸ್ಮರಿಸಿಕೊಂಡಿದ್ದಾರೆ. ಕಾರ್ಗಿಲ್‌ ವಿಜಯ ದಿನದ ಕುರಿತಾಗಿರುವ ಪೋಸ್ಟರ್‌ ಅನ್ನು ಅವರು ತಮ್ಮ ಇನ್‌ಸ್ಟಾಗ್ರಾಂನ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.


ಹಾಗೆಯೇ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೂಡ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. “ನಮ್ಮ ರಾಷ್ಟ್ರದ ಕೆಚ್ಚೆದೆಯ ಹೃದಯಗಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರ ತ್ಯಾಗವನ್ನು ಎಂದಿಗೂ ಮರೆಯದಿರುವುದು. ಕಾರ್ಗಿಲ್‌ನಲ್ಲಿ ಭಾರತದ ಧ್ವಜ ಹಾರುತ್ತಲೇ ಇರುವಂತೆ ಮಾಡಿದ ಎಲ್ಲ ವ್ಯಕ್ತಿಗಳು ಮತ್ತು ಅವರ ಕುಟುಂಬದ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಕಲಾವಿದರಾಗಿರುವ ಸುದರ್ಶನ್‌ ಪಟ್ನಾಯಕ್‌ ಕೂಡ ಕಾರ್ಗಿಲ್‌ ವಿಜಯ ದಿನದ ನೆನಪನ್ನು ಮಾಡಿಕೊಂಡಿದ್ದಾರೆ. ಅವರು ಮರಳು ಕಲೆಯ ಮೂಲಕ ಕಾರ್ಗಿಲ್‌ ವಿಜಯ ದಿನದ ಶುಭಾಶಯ ತಿಳಿಸಿದ್ದಾರೆ ಹಾಗೆಯೇ ವೀರ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ತಿಳಿಸಿದ್ದಾರೆ.

Exit mobile version