Site icon Vistara News

ಉಗ್ರರ ದಾಳಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತ ಬಲಿ; ಮನೆ ಬಾಗಿಲಿಗೇ ಬಂದು ಗುಂಡಿಟ್ಟ ಭಯೋತ್ಪಾದಕರು

Jammu Kashmir Terrorists

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಶೋಪಿಯಾನ್​​ನ ಚೌದ್ರಿ ಗುಂಡ್​ನ ನಿವಾಸಿಯಾಗಿರುವ ಪೋರಣ್​ ಕ್ರಿಶನ್​ ಭಟ್​ ಉಗ್ರರ ದಾಳಿಯಿಂದ ಹತ್ಯೆಗೀಡಾಗಿದ್ದು, ಇವರು ತಾರಕ್​ನಾಥ್​ ಭಟ್​ ಎಂಬುವರ ಪುತ್ರ. ಉಗ್ರರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪೋರಣ್​​ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗಲೇ ಪರಿಸ್ಥಿತಿ ತುಂಬ ಗಂಭೀರವಾಗಿದೆ, ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಅಂತೆಯೇ, ಪೋರಣ್​ ಸಾವನ್ನಪ್ಪಿದ್ದಾರೆ.

ದಾಳಿಕೋರರು ಯಾರೆಂದು ಇನ್ನೂ ಗೊತ್ತಾಗಿಲ್ಲ. ಪೋರಣ್​ ತನ್ನ ಮನೆಯ ಗೇಟ್​ ಬಳಿ ನಿಂತಿದ್ದಾಗಲೇ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲೇ ಸಮೀಪದಲ್ಲಿ ಪೊಲೀಸ್ ಸಿಬ್ಬಂದಿ ಕಾವಲು ಕೂಡ ಇತ್ತು. ಹಾಗಿದ್ದಾಗ್ಯೂ ಪೋರಣ್​ ಮೇಲೆ ದಾಳಿಯಾಗಿದೆ. ಘಟನೆ ನಡೆದ ಸ್ಥಳವನ್ನು ಸಂಪೂರ್ಣ ಬಂದೋಬಸ್ತ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಸಂಪೂರ್ಣವಾಗಿ ಸುತ್ತುವರಿದಿದ್ದಾರೆ. ಪ್ರಕರಣದ ತನಿಖೆ ಪ್ರಾರಂಭವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಪ್ರಮಾಣ ಹೆಚ್ಚಿದೆ. ಬೇರೆಡೆಯಿಂದ ಇಲ್ಲಿಗೆ ಬಂದು ಕೆಲಸ ಮಾಡುತ್ತಿರುವ ಕಾರ್ಮಿಕರ, ಕಾಶ್ಮೀರಿ ಪಂಡಿತರನ್ನು, ಶಿಕ್ಷಕರನ್ನು ಟಾರ್ಗೆಟ್ ಮಾಡಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಆಗಸ್ಟ್​ 16ರಂದು ಇದೇ ಶೋಪಿಯಾನ್​​ನಲ್ಲಿ ಸುನೀಲ್​ ಕುಮಾರ್​ ಎಂಬ ಕಾಶ್ಮೀರಿ ಪಂಡಿತನನ್ನು ಉಗ್ರರು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ ಅವರ ಸಹೋದರ ಪಿಂಟು ಗಂಭೀರವಾಗಿ ಗಾಯಗೊಂಡಿದ್ದರು. ಅಂದು ಶೋಪಿಯಾನ್​​ದ ಚೋಟಿಪೋರಾದಲ್ಲಿರುವ ಸೇಬು ತೋಟದಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕುಲಗಾಂವ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಹಿಂದು ಶಿಕ್ಷಕಿ ಬಲಿ

Exit mobile version