ಶ್ರೀನಗರ: ನೂಪುರ್ ಶರ್ಮಾ (Nupur Sharma) ಪ್ರವಾದಿ ವಿರುದ್ಧ ನೀಡಿದ ಹೇಳಿಕೆಯಿಂದ ಉಂಟಾಗಿರುವ ಹಿಂಸಾಚಾರ ಒಂದೆಡೆಯಾದರೆ, ಆಕೆಗೆ ಬರುತ್ತಿರುವ ಸಾಲುಸಾಲು ಜೀವ ಬೆದರಿಕೆ ಕರೆಗಳು ಇನ್ನೊಂದೆಡೆ. ಇತ್ತ ಪ್ರತಿಭಟನೆಯನ್ನೂ ನಿಯಂತ್ರಿಸಬೇಕು ಅತ್ತ ನೂಪುರ್ ಶರ್ಮಾ ಪ್ರಾಣಕ್ಕೂ ರಕ್ಷಣೆ ನೀಡಬೇಕು ಎಂಬ ಸ್ಥಿತಿ ಪೊಲೀಸರದ್ದು. ಎಷ್ಟೆಲ್ಲ ಎಚ್ಚರಿಕೆಗಳು, ಬಿಗಿ ಕ್ರಮಗಳ ಮಧ್ಯೆಯೂ ನೂಪುರ್ ಶರ್ಮಾರ ಶಿರಚ್ಛೇದನ, ಹತ್ಯೆಗೆ ಬಹಿರಂಗವಾಗಿ ಕರೆ ನೀಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅಂಥವರಲ್ಲಿ ಒಬ್ಬನಾದ ಕಾಶ್ಮೀರ ಮೂಲದ ಯೂಟ್ಯೂಬರ್ ಫೈಸಲ್ ವಾನಿ ಎಂಬಾತನನ್ನು ಪೊಲೀಸರೀಗ ಬಂಧಿಸಿದ್ದಾರೆ.
Deep Pain Fitness ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಫೈಸಲ್ ಕಳೆದ ವಾರ ಒಂದು ವಿಡಿಯೋ ಮಾಡಿ ವೈರಲ್ ಮಾಡಿದ್ದ. ಅದರಲ್ಲಿ, ಶರ್ಟ್ ಧರಿಸದೆ, ಕೈಯಲ್ಲೊಂದು ಕತ್ತಿ ಹಿಡಿದಿದ್ದ ಆತ ನೂಪುರ್ ಶರ್ಮಾ ಫೋಟೋ ಹಿಡಿದು ಅದರಲ್ಲಿ ಆಕೆಯ ತಲೆ ಕತ್ತರಿಸುತ್ತಿದ್ದ. ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಮಾಡಿದವರಿಗೆ ಇದೇ ಶಿಕ್ಷೆ ಎಂದು ಆತ ಹೇಳುತ್ತಿದ್ದ. Deep Pain Fitness ಚಾನೆಲ್‌ನಲ್ಲಿಯೇ ಈ ವಿಡಿಯೋ ಪೋಸ್ಟ್ ಆಗಿತ್ತು. ಆದರೀಗ ಆ ಗ್ರಾಫಿಕ್ಸ್ ವಿಡಿಯೋ ಡಿಲೀಟ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಫೈಸಲ್ ವಾನಿಯನ್ನು ಬಂಧಿಸಿದ್ದಾರೆ.
ಕ್ಷಮೆ ಕೇಳಿದ ಯೂಟ್ಯೂಬರ್ !
ವಿಡಿಯೋ ಡಿಲೀಟ್ ಮಾಡಿದ್ದ ಫೈಸಲ್ ತನ್ನ ತಪ್ಪಿಗೆ ಕ್ಷಮೆಯನ್ನೂ ಕೇಳಿದ್ದಾನೆ. ʼಹೌದು ನಾನು ವಿಡಿಯೋ ಮಾಡಿದ್ದೆ. ಆದರೆ ಅದನ್ನೀಗ ಡಿಲೀಟ್ ಮಾಡಿದ್ದೇನೆ. ನನ್ನ ಮನಸಲ್ಲಿ ಯಾವುದೇ ಕೆಟ್ಟ ಉದ್ದೇಶ ಇಲ್ಲ. ನೂಪುರ್ ಶರ್ಮಾ ಹತ್ಯೆ ಮಾಡಬೇಕು ಎಂಬ ಬಯಕೆಯೂ ಇಲ್ಲ. ಆದರೆ ನನ್ನ ವಿಡಿಯೋದಿಂದ ಯಾರಿಗಾದರೂ ನೋವಾಗಿದ್ದರೆ, ಕ್ಷಮೆ ಕೋರುತ್ತೇನೆʼ ಎಂದು ಹೇಳಿದ್ದಾನೆ.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸಂಕಷ್ಟ; ರಕ್ಷಿಸಿ ಎಂದು ದೆಹಲಿ ಪೊಲೀಸ್ ಮೊರೆ ಹೋದ ಬಿಜೆಪಿ ಮಾಜಿ ವಕ್ತಾರೆ
ಬಿಜೆಪಿ ಪರ ಟಿವಿ ಡಿಬೇಟ್‌ವೊಂದರಲ್ಲಿ ಪಾಲ್ಗೊಂಡಿದ್ದ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನ ಮಾಡಿದ್ದರು. ಆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಭುಗಿಲೆದ್ದಿದೆ. 14ಕ್ಕೂ ಹೆಚ್ಚು ದೇಶಗಳ ಮುಸ್ಲಿಮರು ಭಾರತದ ವಿರುದ್ಧ ತಿರುಗಿಬಿದ್ದಿದ್ದಾರೆ. ದೇಶದೊಳಗಿನ ಮುಸ್ಲಿಮರು, ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಆಕೆಯನ್ನು ಅಮಾನತು ಮಾಡಿರುವ ಬಿಜೆಪಿ ಅಂತರ ಕಾಯ್ದುಕೊಂಡಿದೆ.
ಇದನ್ನೂ ಓದಿ: ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ; ಪೊಲೀಸರತ್ತ ಆಕ್ರೋಶದಿಂದ ಕಲ್ಲು ಎಸೆದ ಮಕ್ಕಳು !