ನವ ದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ, ಬಿಆರ್ಎಸ್ (ಟಿಆರ್ಎಸ್ನ ರಾಷ್ಟ್ರೀಯ ಪಕ್ಷ) ಶಾಸಕಿ ಕೆ. ಕವಿತಾ ಅವರ ಕೈವಾಡ ಇದೆ ಎಂದು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಹೇಳಿದ್ದಾರೆ. ನವ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ನೂತನ ಅಬಕಾರಿ ನೀತಿ ಜಾರಿ ಮಾಡುವಾಗ ಕೆ. ಕವಿತಾ ಅವರು 100 ಕೋಟಿ ರೂಪಾಯಿಯನ್ನು ಆ ಪಕ್ಷಕ್ಕೆ ಕಮಿಷನ್ ಕೊಟ್ಟಿದ್ದಾರೆ ಎಂದು ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ದೆಹಲಿ ಲಿಕ್ಕರ್ ಹಗರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಕೇಸ್ನ್ನು ಇಡಿ ತನಿಖೆಗೆ ಕೈಗೆತ್ತಿಕೊಂಡಿದ್ದು, ಇನ್ನೊಂದೆಡೆ ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ಕೆ.ಕವಿತಾರನ್ನು ಸಿಬಿಐ ಮತ್ತು ಇಡಿ ತನಿಖಾದಳಗಳೆರಡೂ ವಿಚಾರಣೆಗೆ ಒಳಪಡಿಸಿವೆ. ಅದರ ಬೆನ್ನಲ್ಲೇ ಚಾರ್ಜ್ಶೀಟ್ ಸಲ್ಲಿಸಿರುವ ಇ.ಡಿ., ‘ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಿಕ್ಕರ್ ಉದ್ಯಮದಲ್ಲಿ ಹಿಡಿತ ಸಾಧಿಸಲು ‘ಸೌತ್ ಗ್ರೂಪ್’ ನಿಂದ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂಪಾಯಿ ಲಂಚ ಹೋಗಿದೆ. ಈ ಗ್ರೂಪ್ನಲ್ಲಿ ಕೆ. ಕವಿತಾ ಒಬ್ಬರು ಹೌದು. ಇನ್ನಿಬ್ಬರು ಅರಬಿಂದೋ ಔಷಧ ಕಂಪನಿಯ ಶರತ್ ಚಂದ್ರ ರೆಡ್ಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ. ಇವರೆಲ್ಲರೂ ಆಪ್ನ ಪ್ರತಿನಿಧಿ ವಿಜಯ್ ನಾಯರ್ಗೆ ಹಣ ಕೊಟ್ಟಿದ್ದಾರೆ’ ಎಂದು ಹೇಳಿದೆ. ಅಷ್ಟೇ ಅಲ್ಲ, ‘ಈ ಹಗರಣದ ಪ್ರಮುಖ ಆರೋಪಿಗಳಾದ ಆಪ್ನ ವಿಜಯ್ ನಾಯರ್, ಉದ್ಯಮಿ ಸಮೀರ್ ಮಹೇಂದ್ರ ಜತೆ ಈ ಕೆ. ಕವಿತಾ ಸಭೆ ನಡೆಸಿದ, ಫೋನ್ ಕರೆಯಲ್ಲಿ ಮಾತನಾಡಿದ್ದು ತನಿಖೆಯಲ್ಲಿ ಬಹಿರಂಗಗೊಂಡಿದೆ’ ಎಂದು ಇಡಿ ಹೇಳಿದೆ.
ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧವೂ ತನಿಖೆ ನಡೆಯುತ್ತಿದೆ. ಈ ನೀತಿ ಜಾರಿಗೆ ತರುವಾಗ ವ್ಯಾಪಾರಿಗಳಿಗೆ ಲೈಸೆನ್ಸ್ ಕೊಡುವ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಹಗರಣ ಆಗಿದೆ ಎಂಬ ಆರೋಪ ಇದಾಗಿದೆ. ಸಿಬಿಐ ತನಿಖೆ ಪ್ರಾರಂಭವಾಗುತ್ತಿದ್ದಂತೆ ಆಪ್ ಸರ್ಕಾರ ಈ ನೀತಿಯನ್ನು ಹಿಂಪಡೆದಿದೆ. ಇನ್ನು ಅಕ್ರಮಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೂರ್ನಾಲ್ಕು ಜನರನ್ನು ಇಡಿ ಬಂಧಿಸಿದ್ದು, ತನಿಖೆ ಚುರುಕಾಗಿ ನಡೆಯುತ್ತಿದೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣ; ತೆಲಂಗಾಣ ಮುಖ್ಯಮಂತ್ರಿ ಪುತ್ರಿ ಕೆ.ಕವಿತಾರಿಗೆ ಸಿಬಿಐ ಸಮನ್ಸ್