ಮುಂಬಯಿ: ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15 (KBC 15) ಕಾರ್ಯಕ್ರಮದ ನೂತನ ಎಪಿಸೋಡ್‌ನಲ್ಲಿ ಸ್ಪರ್ಧಿಯೊಬ್ಬರು ₹7 ಕೋಟಿ ಗೆಲ್ಲುವ ಅವಕಾಶದಿಂದ ಕೂದಲೆಳೆಯಂತರದಲ್ಲಿ ವಂಚಿತರಾದರು. ಅವರು ನಂತರ ಊಹಿಸಿದ ಉತ್ತರ ಸರಿಯಾಗಿಯೇ ಇತ್ತು!
ಹೌದು, ಕೌನ್ ಬನೇಗಾ ಕರೋಡ್‌ಪತಿಯಲ್ಲಿ ನಟ ಅಮಿತಾಭ್ ಬಚ್ಚನ್ (Amitabh Bachchan) ಎಸೆದ ₹7 ಕೋಟಿಯ ಪ್ರಶ್ನೆಗೆ ಉತ್ತರಿಸಲು ಸ್ಪರ್ಧಿ ಜಸ್ನಿಲ್ ಕುಮಾರ್ ಹಿಂಜರಿದರು. ತಮ್ಮ ಊಹೆಯ ಉತ್ತರದ ಬಗ್ಗೆ ಅವರು ಖಚಿತತೆ ಹೊಂದಿರಲಿಲ್ಲ. ಹೀಗಾಗಿ ಗೇಮ್ ಶೋದಿಂದ ಹಿಂದೆಗೆಯಲು ನಿರ್ಧರಿಸಿದರು. ಇದಕ್ಕೂ ಮುನ್ನ ₹1 ಕೋಟಿಯ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ ಸ್ಪರ್ಧಿ ಜಸ್ನಿಲ್ ಕುಮಾರ್ ಕಾರು ಗೆದ್ದರು. ಆದರೆ, ₹7 ಕೋಟಿಯ 15ನೇ ಪ್ರಶ್ನೆಗೆ ಉತ್ತರಿಸಲಿಲ್ಲ.
ಆ ಪ್ರಶ್ನೆ ಯಾವುದು?
ʼʼಭಾರತೀಯ ಮೂಲದ ಸ್ಪರ್ಧಿ ಲೀನಾ ಗಾಡೆ ಅವರು ಈ ಕೆಳಗಿನ ಯಾವ ರೇಸ್‌ನಲ್ಲಿ ಗೆದ್ದ ಮೊದಲ ಮಹಿಳಾ ರೇಸ್ ಇಂಜಿನಿಯರ್?
ಇದಕ್ಕೆ ಆಯ್ಕೆಗಳಲ್ಲಿದ್ದ ಉತ್ತರಗಳೆಂದರೆ: ಎ) ಇಂಡಿಯಾನಾಪೊಲಿಸ್ 500, ಬಿ) 24 ಅವರ್ಸ್ ಆಫ್ ಲೆ ಮ್ಯಾನ್ಸ್, ಸಿ) 12 ಅವರ್ಸ್ ಆಫ್ ಸೆಬ್ರಿಂಗ್, ಡಿ) ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್.
ಜಸ್ನಿಲ್ ಹೇಳಿದ್ದೇನು?
ತಮಗೆ ಸರಿಯಾದ ಉತ್ತರ ತಿಳಿದಿಲ್ಲ ಎಂದು ಜಸ್ನಿಲ್ ಹೇಳಿದರು. ನಂತರ ಆಟ ಕ್ವಿಟ್ ಮಾಡಿದರು. ಆಟ ತೊರೆದ ನಂತರ ಕೊನೆಯಲ್ಲಿ ಇನ್ನೊಮ್ಮೆ ಉತ್ತರವನ್ನು ಊಹಿಸಲು ಹೇಳಿದಾಗ ಜಸ್ನಿಲ್ ʼಬಿʼ ಆಯ್ಕೆಯನ್ನು ಆಯ್ದುಕೊಂಡರು. ಅದೇ ಸರಿಯಾದ ಉತ್ತರವಾಗಿತ್ತು! “ಖೇಲ್ ಜಾತೇ ತೋ 7 ಕೋಟಿ ಜೀತ್ ಜಾತೇ ಆಜ್ʼʼ (ನೀವು ಆಡಿದ್ದರೆ ಇಂದು 7 ಕೋಟಿ ಗೆಲ್ಲುತ್ತಿದ್ದಿರಿ) ಎಂದು ಅಮಿತಾಭ್ ಉದ್ಗರಿಸಿದರು!
₹1 ಕೋಟಿ ಗೆದ್ದ ನಂತರ ಜಸ್ನಿಲ್ ಅವರು ಹೇಳಿದ್ದು ಹೀಗೆ: “ಕೆಬಿಸಿ ವೇದಿಕೆಯಲ್ಲಿ ಭಾಗವಹಿಸಬೇಕು ಎಂಬುದು ನನ್ನ ಉತ್ಕಟ ಕನಸಾಗಿತ್ತು. 2011ರಿಂದ ನಾನು ಇಲ್ಲಿಗೆ ಬರಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೆ. ನಾನು ಆಗಾಗ ಈ ಬಗ್ಗೆ ಯೋಚಿಸುತ್ತಾ ಅಳುತ್ತಿದ್ದೆ. ಉಸಿರಾಟಕ್ಕಿಂತಲೂ ಕೆಬಿಸಿ ಬಗ್ಗೆ ಹೆಚ್ಚು ಗಮನವಿಟ್ಟಿದ್ದೆ. ಕೆಬಿಸಿಯಲ್ಲಿ ಭಾಗವಹಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೆ. ಜನ ನನ್ನನ್ನು ಅಪಹಾಸ್ಯ ಮಾಡುತ್ತಿದ್ದರು. ಆದರೆ ಒಂದಲ್ಲ ಒಂದು ದಿನ ನಾನು ಅವರೆಲ್ಲರನ್ನೂ ನಾಲಿಗೆ ಕಚ್ಚಿಕೊಳ್ಳುವಂತೆ ಮಾಡುತ್ತೇನೆ, ಒಂದು ದಿನ ನನ್ನ ಇಡೀ ಜೀವನ ಬದಲಾಗುತ್ತದೆ ಎಂದು ಕನಸು ಕಂಡೆ.”
ಜಸ್ನಿಲ್ ತನ್ನ 5 ವರ್ಷದ ಮಗನ ಬಗ್ಗೆಯೂ ಹೇಳಿದರು. ʼʼಕೆಬಿಸಿಯ ಕರೆ ಬರದಿದ್ದಾಗ ನಾನು ನನ್ನ ಮಗನನ್ನು ಕೇಳುತ್ತಿದ್ದೆ. ಆ ಪುಟ್ಟ ಮಗು ಒಮ್ಮೆ ನನಗೆ ಹೇಳಿತು, ʼಜರೂರ್ ಆಯೇಗಾʼ (ಖಂಡಿತವಾಗಿಯೂ ಬರುತ್ತದೆ). ಆ ನಂಬಿಕೆ ನನ್ನನ್ನು ಪ್ರೇರೇಪಿಸಿತು. ʼಪಾಪಾ, ನೀವು ಬರುವಾಗ ಹೊಳೆಯುವ ಕಾರನ್ನು ತನ್ನಿʼ ಎಂದ. ಅವನ ನಂಬಿಕೆಯೇ ನನ್ನನ್ನು ಇಲ್ಲಿಗೆ ತಲುಪುವಂತೆ ಮಾಡಿದೆ.ʼʼ
ಇದನ್ನೂ ಓದಿ: Kaun Banega Crorepati 15: 7 ಕೋಟಿ ರೂ. ಪ್ರಶ್ನೆಗೆ ಉತ್ತರಿಸದ ಜಸ್‌ಕರಣ್ ಸಿಂಗ್; ನೀವು ಉತ್ತರಿಸಬಲ್ಲಿರಾ?