ಇಂದೋರ್: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶಕ್ಕೆ ಕಾಲಿಟ್ಟು ಎಂಟನೇ ದಿನ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹಲವು ಪ್ರಮುಖ ನಾಯಕರು, ಸ್ಥಳೀಯ ಕಾರ್ಯಕರ್ತರು, ಜನಸಾಮಾನ್ಯರು ಈ ಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕುತ್ತಿದ್ದಾರೆ. ಇಂದೋರ್ನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾನುವಾರ ಸಣ್ಣಮಟ್ಟದ ಅವಘಡ ಸಂಭವಿಸಿದ್ದು ವರದಿಯಾಗಿದೆ.
ಭಾನುವಾರ (ನ.27)ದಂದು ಭಾರತ್ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ ಉಂಟಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಬಿದ್ದು, ಅವರ ಕೈ ಮತ್ತು ಮೊಣಕಾಲಿಗೆ ಗಾಯವಾಗಿದೆ. ನಂತರ ಅವರಿಗೆ ಯಾತ್ರೆಯ ಆರೋಗ್ಯ ಶಿಬಿರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಾಯಕ್ಕೆ ಔಷಧ ಹಾಕಿದ ಬಳಿಕ, ಕೆಲ ಹೊತ್ತಲ್ಲೇ ಮತ್ತೆ ಅವರು ಪಾದಯಾತ್ರೆಗೆ ಸೇರಿಕೊಂಡಿದ್ದಾಗಿ ವರದಿಯಾಗಿದೆ.
ಸೆಪ್ಟೆಂಬರ್ 7ರಿಂದ ಪ್ರಾರಂಭವಾದ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಯಾವೆಲ್ಲ ರಾಜ್ಯಗಳಿಗೆ ಸಂಚಾರ ಮಾಡಿದೆಯೋ ಅಲ್ಲೆಲ್ಲ ಅನೇಕರು ಪಾದಯಾತ್ರೆಗೆ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಅವಘಡ ಆಗದಂತೆ ನಿಯಂತ್ರಿಸಲು ಭದ್ರತಾ ಸಿಬ್ಬಂದಿಯೂ ಈ ಯಾತ್ರೆಯಲ್ಲಿ ನಡೆಯುತ್ತಿದ್ದಾರೆ. ಇಷ್ಟು ದಿನದಲ್ಲಿ ನೂಕುನುಗ್ಗಲು ಆಗಿ, ಯಾರೊಬ್ಬರು ಗಾಯಗೊಂಡ ಘಟನೆ ನಡೆದಿರಲಿಲ್ಲ. ಆದರೆ ಭಾನುವಾರ ಇಂದೋರ್ನಲ್ಲಿ ಹಲವರು ರಾಹುಲ್ ಗಾಂಧಿಯನ್ನು ಮಾತನಾಡಿಸಲು ಒಮ್ಮೆಲೇ ನುಗ್ಗಿಬಂದರು. ಈ ವೇಳೆ ಉಂಟಾದ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಹಾಗಾಗಿ ಕಾಲ್ತುಳಿತ ಆಗಿ, ವೇಣುಗೋಪಾಲ್ ಬಿದ್ದಿದ್ದಾರೆ. ಇನ್ನೂ ಹಲವರು ಕೆಳಗೆ ಬಿದ್ದು, ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ವರದಿಯಾಗಿದೆ.