Site icon Vistara News

ರಾಷ್ಟ್ರಪತಿ ಚುನಾವಣೆ: ಮನಸು ಬದಲಿಸಿದ ತೆಲಂಗಾಣ ಸಿಎಂ ಕೆಸಿಆರ್‌, ಬೆಂಬಲ ಯಾವ ಅಭ್ಯರ್ಥಿಗೆ?

KCR

ಹೈದರಾಬಾದ್‌: ರಾಜಕಾರಣದಲ್ಲಿ ಹೀಗೇ..ಎಂದು ಒಂದು ನಿರ್ಧಾರಕ್ಕೆ ಬಂದುಬಿಡಲು ಸಾಧ್ಯವಾಗುವುದಿಲ್ಲ. ಒಂದು ಕ್ಷಣದಲ್ಲಿ ʼಬೆಂಬಲ-ಅಸಹಕಾರʼ ಗಳೆಲ್ಲ ಒಂದು ಕ್ಷಣದಲ್ಲಿ ಬದಲಾಗುತ್ತವೆ. ಅದಕ್ಕೀಗ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಉದಾಹರಣೆ. ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಾವು ಪ್ರತಿಪಕ್ಷಗಳ ಜತೆ ಸೇರುವುದಿಲ್ಲ. ಕಾಂಗ್ರೆಸ್‌ ಇರುವ ಗುಂಪಿನಿಂದ ನಾವು ಹೊರಗೆ ಇರುತ್ತೇವೆ ಎಂದು ಹೇಳಿದ್ದ ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ, ಸಿಎಂ ಕೆ. ಚಂದ್ರಶೇಖರ್‌ ರಾವ್‌ ಇದೀಗ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್‌ ಸಿನ್ಹಾರಿಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಅವರ ಪುತ್ರ ಕೆ.ಟಿ. ರಾಮರಾವ್‌ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ʼರಾಷ್ಟ್ರಪತಿ ಚುನಾವಣೆಯಲ್ಲಿ ನಮ್ಮ ಟಿಆರ್‌ಎಸ್‌ ಪಕ್ಷ ಯಶವಂತ್‌ ಸಿನ್ಹಾ ಅವರಿಗೆ ಬೆಂಬಲ ನೀಡಲಿದೆ. ಇಂದು ಅವರ ನಾಮಪತ್ರ ಸಲ್ಲಿಕೆ ಹೊತ್ತಲ್ಲಿ ನಾನೂ ಉಪಸ್ಥಿತ ಇರಲಿದ್ದೇನೆ ಎಂದು ತಿಳಿಸಿದ್ದಾರೆ.

ಜುಲೈ 18ಕ್ಕೆ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ವಿರುದ್ಧ ತಾವೂ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಿಲು ಪ್ರತಿಪಕ್ಷಗಳು ನಿರ್ಧರಿಸಿದ್ದವು. ಇದರ ಮುಂದಾಳತ್ವ ವಹಿಸಿದ್ದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ. ಆದರೆ ಈ ಗುಂಪಿನಿಂದ ಟಿಆರ್‌ಎಸ್‌ ಮತ್ತು ಆಪ್‌ ಪಕ್ಷಗಳು ಹೊರಬಿದ್ದಿದ್ದವು. ಕಾಂಗ್ರೆಸ್‌ ಇದ್ದಲ್ಲಿ ನಾವಿಲ್ಲ ಎಂದು ಕೆಸಿಆರ್‌ ಹೇಳಿಕೊಂಡಿತ್ತು. ಇದೀಗ ಪ್ರತಿಪಕ್ಷಗಳು ಜಂಟಿಯಾಗಿ ಟಿಎಂಸಿ ಹಿರಿಯ ನಾಯಕ ಯಶವಂತ್‌ ಸಿನ್ಹಾರನ್ನು ಆಯ್ಕೆ ಮಾಡಿವೆ. ಇನ್ನೊಂದೆಡೆ ಎನ್‌ಡಿಎ ಒಕ್ಕೂಟ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು. ಅವರು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಮಾಯಾವತಿ ಬೆಂಬಲ ಘೋಷಣೆ

Exit mobile version