ಡೆಹ್ರಾಡೂನ್: ಇದುವರೆಗೆ ಬೆಳ್ಳಿ ಪದರವನ್ನು ಹೊದ್ದಿದ್ದ ಕೇದಾರನಾಥ ದೇಗುಲದ (Kedarnath Temple) ಗರ್ಭಗುಡಿ ಈ ಬಾರಿ ಚಿನ್ನದಿಂದ ಕಂಗೊಳಿಸಲಾರಂಭಿಸಿದೆ. ಹಾಗೆಯೇ ಈ ಬಾರಿಯ ಯಾತ್ರೆಯ ಸಮಯದಲ್ಲಿಯೇ ದೇಗುಲಕ್ಕೆ ಚಿನ್ನದ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ದೇಗುಲದ ಮಂಡಳಿ ಮಾಹಿತಿ ನೀಡಿದೆ.
ಇದನ್ನೂ ಓದಿ: Narendra Modi | ಕೇದಾರನಾಥ ಭೇಟಿ ವೇಳೆ 13,000 ಅಡಿ ಎತ್ತರದಲ್ಲಿ ಸಣ್ಣ ಟೆಂಟ್‌ನಲ್ಲೇ ರಾತ್ರಿ ಕಳೆದ ಮೋದಿ
ಈ ಕುರಿತಾಗಿ ಮಾತನಾಡಿರುವ ಕೇದಾರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯೇಂದ್ರ, “ಕಳೆದ ವರ್ಷ ಕೇದಾರನಾಥ ದೇವಾಲಯದ ಯಾತ್ರೆಯ ಪೋರ್ಟಲ್ ಅನ್ನು ಮೇ 6ರಂದು ಆರಂಭಿಸಿ, ಅಕ್ಟೋಬರ್ 27ರಂದು ಅಂತ್ಯ ಮಾಡಲಾಯಿತು. ಪೋರ್ಟಲ್‌ಗಳನ್ನು ಮುಚ್ಚುವ ಕೆಲವು ದಿನಗಳ ಮೊದಲು ದೇವಾಲಯದ ಗೋಡೆಗಳಿಗೆ ಪ್ಲಾಸ್ಟರ್ ಮಾಡಿಸಲಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಸರ್ಕಾರದ ಅನುಮತಿಯ ನಂತರ ಗರ್ಭಗುಡಿಗೆ ಬೆಳ್ಳಿಯ ಬದಲಿಗೆ ಚಿನ್ನದ ಲೇಪನ ಹಾಕಿಸಲಾಗಿದೆ. ವಿಶೇಷ ದೀಪಗಳನ್ನು ಅಳವಡಿಸಲಾಗಿದ್ದು, ಚಿನ್ನದ ಲೇಪಿತ ಗರ್ಭಗುಡಿಯ ಇನ್ನಷ್ಟು ಹೊಳೆಯುವಂತೆ ಮಾಡಲಾಗಿದೆ” ಎಂದಿದ್ದಾರೆ.
ದೇಗುಲಕ್ಕೆ ಚಿನ್ನದಿಂದ ಅಲಂಕಾರ ಮಾಡಿಸುವುದಕ್ಕೆ ಮುಂಬೈ ಮೂಲದ ವಜ್ರದ ವ್ಯಾಪಾರಿಯೊಬ್ಬರು ದೇಣಿಗೆ ನೀಡಿರುವುದಾಗಿಯೂ ಅಜಯೇಂದ್ರ ಅವರು ಮಾಹಿತಿ ಕೊಟ್ಟಿದ್ದಾರೆ. ಹಾಗೆಯೇ ಗರ್ಭಗುಡಿಗೆ ಹಾಕಲಾಗಿರುವ ಬೆಳ್ಳಿಯ ಕಳಸ ಕೂಡ ಹಳೆಯದಾಗಿರುವುದರಿಂದ ಈ ಬಾರಿಯ ಚಾರ್ಧಾಮ್ ಯಾತ್ರೆ ಸಮಯದಲ್ಲಿ ಕಳಸವನ್ನು ಬದಲಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: PM Modi | ಉತ್ತರಾಖಂಡ್ನಲ್ಲಿ ಪ್ರಧಾನಿ ಮೋದಿ; ಕೇದಾರನಾಥದಲ್ಲಿ ಪೂಜೆ, ವಿವಿಧ ಯೋಜನೆಗಳ ಉದ್ಘಾಟನೆ
ಅಜಯೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ಈ ಬಾರಿಯ ಚಾರ್ಧಾಮ್ ಯಾತ್ರೆಯಲ್ಲಿ ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ನೋಂದಾಯಿಸಿಕೊಂಡ ಭಕ್ತರ ಸಂಖ್ಯೆ 1.25 ಲಕ್ಷ ದಾಟಿದೆ. ಈ ಪೈಕಿ 62,993 ಪ್ರಯಾಣಿಕರು ಕೇದಾರನಾಥಕ್ಕೆ ಮತ್ತು 51,557 ಮಂದಿ ಬದರಿನಾಥಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಫೆಬ್ರವರಿ 21ರಂದು ನೋಂದಣಿ ಆರಂಭವಾಗಿದೆ.