ರುದ್ರಪ್ರಯಾಗ್: 12 ಜ್ಯೋತಿರ್ಲಿಂಗ ದೇವಸ್ಥಾನಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನಕ್ಕೆ ಪ್ರಸಕ್ತ ವರ್ಷದ ಯಾತ್ರೆ (Kedarnath Yatra) ಏಪ್ರಿಲ್ 25ರಿಂದ ಪ್ರಾರಂಭವಾಗಲಿದೆ. ಪುರಾಣ ಪ್ರಸಿದ್ಧ ಈ ದೇಗುಲಕ್ಕೆ ಪ್ರತಿವರ್ಷವೂ ಅಪಾರ ಸಂಖ್ಯೆಯಲ್ಲಿ ಯಾತ್ರಿಕರು ತೆರಳುತ್ತಾರೆ. ಈ ಸಲ ಕೇಂದ್ರಸರ್ಕಾರ ಕೇದಾರನಾಥ ಯಾತ್ರೆಗಾಗಿ ಒಂದಷ್ಟು ನಿಯಮಗಳನ್ನು ಜಾರಿಗೊಳಿಸಿದೆ. ಪ್ರಸಕ್ತ ಸಲ ಕೇದಾರನಾಥ ದೇಗುಲಕ್ಕೆ ಒಂದು ದಿನದಲ್ಲಿ ಗರಿಷ್ಠ 13 ಸಾವಿರ ಯಾತ್ರಿಕರು ಮಾತ್ರ ಭೇಟಿ ನೀಡಬಹುದು ಎಂದು ಹೇಳಿದೆ. ಹಾಗೇ, ಟೋಕನ್ ವ್ಯವಸ್ಥೆಯನ್ನೂ ಜಾರಿಗೊಳಿಸಿದೆ. ಇದನ್ನೆಲ್ಲ ಯಾತ್ರಿಕರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದು ರುದ್ರಪ್ರಯಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ (DM)ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.
ಏಪ್ರಿಲ್ 25ರಿಂದ ಶುರುವಾಗಲಿರುವ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ ಬಳಿಕ ಡಿಎಂ ದೀಕ್ಷಿತ್ ಮತ್ತು ರುದ್ರಪ್ರಯಾಗ್ ಎಸ್ಪಿ ವಿಶಾಖ ಅಶೋಕ ಭದನೆ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಕೇಂದ್ರದ ನೂತನ ನಿಯಮಗಳನ್ನು ವಿವರಿಸಿದರು. ‘ಯಾತ್ರಿಕರು ದೇವಸ್ಥಾನಕ್ಕೆ ಆಗಮಿಸುವ ಮಾರ್ಗದಲ್ಲಿ 22 ವೈದ್ಯರನ್ನು ನಿಯೋಜಿಸಲಾಗುತ್ತದೆ. ಇವರಲ್ಲಿ ಮೂವರು ಮೂಳೆರೋಗ ಶಸ್ತ್ರಚಿಕಿತ್ಸಕರು ಇರುತ್ತಾರೆ. ಹಾಗೇ, 22 ಜನ ಫಾರ್ಮಾಸಿಸ್ಟ್ಗಳು ಇರುತ್ತಾರೆ. ಒಟ್ಟು 12 ಚಿಕಿತ್ಸಾ ಕೇಂದ್ರಗಳು ಇರಲಿದ್ದು, ಈ ಮೂಲಕ ಭಕ್ತರಿಗೆ ಅತ್ಯುತ್ತಮ ವೈದ್ಯಕೀಯ ಸೌಕರ್ಯ ಒದಗಿಸಲಾಗುವುದು. ಆರು ಆಂಬ್ಯುಲೆನ್ಸ್ಗಳು ಸದಾ ಸನ್ನದ್ಧವಾಗಿರುತ್ತವೆ. ಸರ್ಕಾರದಿಂದ ಒಂದು ಏರ್ ಆಂಬ್ಯುಲೆನ್ಸ್ನ್ನೂ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ದೀಕ್ಷಿತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Kedarnath Temple: ಚಿನ್ನದ ದೇಗುಲವಾದ ಕೇದಾರನಾಥ; ಯಾತ್ರೆ ಸಮಯದಲ್ಲಿಯೇ ಚಿನ್ನದ ಕಳಸ ಪ್ರತಿಷ್ಠಾಪನೆ
ಸುಲಭ್ ಇಂಟರ್ನ್ಯಾಶನಲ್ ಎನ್ಜಿಒದಿಂದ ಶಾಶ್ವತ ಶೌಚಗೃಹಗಳನ್ನು ನಿರ್ಮಿಸಲಾಗುತ್ತಿದೆ. ಹಾಗೇ, ಇಡೀ ಯಾತ್ರೆಯ ಮಾರ್ಗವನ್ನು ಸ್ವಚ್ಛವಾಗಿಡುವ ಜವಾಬ್ದಾರಿಯನ್ನು ಕೂಡ ಇದೇ ಎನ್ಜಿಒ ವಹಿಸಿಕೊಂಡಿದೆ. ಯಾತ್ರಿಕರಿಗೆ ಶುದ್ಧ ಕುಡಿಯುವ ನೀರು ನೀಡಲು ಸೋನ್ಪ್ರಯಾಗ್ನಿಂದ ಕೇದಾರನಾಥ್ವರೆಗೆ 9 ನೀರು ಶುದ್ಧೀಕರಣ ಯಂತ್ರಗಳನ್ನು ಜಲಸಂಸ್ಥಾನವರು ಅಳವಡಿಸಲಿದೆ. ಹಾಗೇ, ಗುಪ್ತಕಾಶಿಯಿಂದ ಬಡಿ ಲಿಂಚೋಲಿಯವರೆಗೆ ಇರುವ ಗರ್ವಾಲ್ ಮಂಡಲ್ ವಿಕಾಸ್ ನಿಗಮ್ನ ಅತಿಥಿಗೃಹಗಳಲ್ಲಿ 2500 ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಕೇದಾರನಾಥದ ನ್ಯೂ ಘೋಡಾ ಪಡವ್ ಮತ್ತು ಹಿಮ್ಲೋಕ್ ಕಾಲೋನಿಯಲ್ಲಿ ತಲಾ 80 ಬೆಡ್ಗಳಿರುವ ಎರಡು ಟೆಂಟ್ಗಳನ್ನು ನಿರ್ಮಾಣ ಮಾಡಲಾಗುವುದು ಎಂದೂ ಮಾಹಿತಿ ನೀಡಿದರು.