ನವದೆಹಲಿ: ಹಗರಣದಲ್ಲಿ ಸಿಲುಕಿ ಜೈಲುಪಾಲಾಗಿರುವ ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದರ್ ಜೈನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆತಿಶಿ ಹಾಗೂ ಸೌರಭ್ ಭಾರದ್ವಾಜ್ ಅವರನ್ನು ಸಂಪುಟಕ್ಕೆ (Delhi Cabinet) ಸೇರಿಸಿಕೊಳ್ಳಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀರ್ಮಾನಿಸಿದ್ದಾರೆ. ಇದಕ್ಕಾಗಿ, ಇಬ್ಬರ ಹೆಸರುಗಳನ್ನು ಲೆಫ್ಟಿನೆಂಟ್ ಜನರಲ್ ವಿ.ಕೆ. ಸಕ್ಸೇನಾ ಅವರಿಗೆ ಶಿಫಾರಸು ಮಾಡಿದ್ದಾರೆ.
ಮನೀಷ್ ಸಿಸೋಡಿಯಾ ಅವರು ಗೃಹ, ಹಣಕಾಸು, ಪಿಡಬ್ಲ್ಯೂಡಿ ಸೇರಿ ಒಟ್ಟು 18 ಖಾತೆಗಳನ್ನು ಹೊಂದಿದ್ದರು. ಇವುಗಳಲ್ಲಿ ಎಂಟು ಖಾತೆಗಳನ್ನು ಹೆಚ್ಚುವರಿಯಾಗಿ ಕೈಲಾಶ್ ಗೆಹ್ಲೋಟ್ ಹಾಗೂ ಉಳಿದ 10 ಖಾತೆಗಳನ್ನು ರಾಜ್ ಕುಮಾರ್ ಆನಂದ್ ಅವರಿಗೆ ನೀಡಲಾಗಿದೆ. ಆತಿಶಿ ಹಾಗೂ ಸೌರಭ್ ಭಾರದ್ವಾಜ್ ಅವರಿಗೆ ಇವುಗಳಲ್ಲಿಯೇ ಕೆಲವು ಖಾತೆಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದರ್ ಜೈನ್ ಹಾಗೂ ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಬಂಧನಕ್ಕೀಡಾಗಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಅರವಿಂದ್ ಕೇಜ್ರಿವಾಲ್ ಅವರು ಅಂಗೀಕರಿಸಿದ್ದು, ಲೆಫ್ಟಿನೆಂಟ್ ಗವರ್ನರ್ ಅವರು ಇವರ ರಾಜೀನಾಮೆ ಪತ್ರಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: Manish Sisodia Resigns: ಬಂಧನದ ಬೆನ್ನಲ್ಲೇ ಡಿಸಿಎಂ ಸ್ಥಾನಕ್ಕೆ ಮನೀಷ್ ಸಿಸೋಡಿಯಾ ರಾಜೀನಾಮೆ