ನವದೆಹಲಿ: ಸರ್ಕಾರಗಳು ಪ್ರಚಾರಕ್ಕಾಗಿ, ಜಾಹೀರಾತುಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಹಲವಾರು ಸುದ್ದಿಗಳನ್ನು ನಾವು ನೋಡಿದ್ದೇವೆ. ಆದರೆ ನವದೆಹಲಿಯ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ (Kejriwal Government) ತಮ್ಮ ವಿವಾದಿತ ಅಬಕಾರಿ ನೀತಿಯ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡುವುದಕ್ಕೆ ವಕೀಲರಿಗೇ 25 ಕೋಟಿಗೂ ಹೆಚ್ಚು ರೂಪಾಯಿ ಖರ್ಚು ಮಾಡಿದೆ.
ಇದನ್ನೂ ಓದಿ: Vipassana Meditation | ವಿಪಶ್ಯನ ಧ್ಯಾನದ ಮೊರೆಹೋದ ಕೇಜ್ರಿವಾಲ್, ಇನ್ನು ಅವರು ಮಾತಾಡೋದು ಮುಂದಿನ ವರ್ಷವೇ!
ಆಮ್ ಆದ್ಮಿ ಪಕ್ಷದ ಸರ್ಕಾರ ಕಳೆದ 18 ತಿಂಗಳುಗಳಲ್ಲಿ ಒಟ್ಟು 28.10 ಕೋಟಿ ರೂಪಾಯಿಯನ್ನು ವಕೀಲರಿಗೆಂದು ಖರ್ಚು ಮಾಡಿದೆ. ಅದರಲ್ಲಿ ಅಬಕಾರಿ ನೀತಿ ಪ್ರಕರಣದ ವಕೀಲರಿಗೇ 25.25 ಕೋಟಿ ರೂ. ಕೊಡಲಾಗಿದೆ. ಅದರಲ್ಲಿ ಡಾ. ಅಭಿಷೇಕ್ ಮನು ಸಿಂಘ್ವಿ ಅವರಿಗೆ 18.97 ಕೋಟಿ ರೂ. ಹಾಗೂ ರಾಹುಲ್ ಮೆಹ್ರಾ ಅವರಿಗೆ 5.30 ಕೋಟಿ ರೂ. ಕೊಡಲಾಗಿದೆ. ಸಿಂಘ್ವಿ ಅವರು 2021-22ನೇ ಸಾಲಿನಲ್ಲಿ 14.85 ಕೋಟಿ ರೂ. ಹಾಗೂ 2022-23ರಲ್ಲಿ 4.1 ಕೋಟಿ ರೂ. ಪಡೆದಿದ್ದಾರೆ. ಜೈಲು ಸೇರಿದ್ದ ಸಚಿವ ಸತ್ಯೇಂದ್ರ ಜೈನ್ ಅವರ ಪ್ರಕರಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ವಕೀಲ ರಾಹುಲ್ ಅವರು 2021-22ರಲ್ಲಿ 3.9 ಕೋಟಿ ರೂ. ಹಾಗೂ 2022-23ರಲ್ಲಿ 1.3 ಕೋಟಿ ರೂ. ಸ್ವೀಕರಿಸಿದ್ದಾರೆ ಎಂದು ರಾಜ್ಯ ಭವನದ ವರದಿಯಲ್ಲಿ ತಿಳಿಸಲಾಗಿದೆ.
2021-22ರಲ್ಲಿ ಈ ಅಬಕಾರಿ ನೀತಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ಮೊದಲು ಕೇಜ್ರಿವಾಲ್ ಅವರ ಸರ್ಕಾರ 6.7 ಕೋಟಿ ರೂ. ಖರ್ಚು ಮಾಡಿತ್ತು. ಆದರೆ ಅದಾದ ನಂತರ ಸರ್ಕಾರದ ಖರ್ಚು ಗಣನೀಯವಾಗಿ ಏರಿಕೆ ಕಂಡಿತು ಎಂದು ವರದಿ ಹೇಳಿದೆ.