ತಿರುವನಂತಪುರಂ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿದ್ದ ಕೇರಳದ 74 ವರ್ಷದ ಲೇಖಕ, ಬರಹಗಾರ ಸಿವಿಕ್ ಚಂದ್ರನ್ಗೆ ಅಲ್ಲಿನ ಕೋಝಿಕ್ಕೊಡ್ ನ್ಯಾಯಾಲಯವೊಂದು ನಿರೀಕ್ಷಣಾ ಜಾಮೀನು ನೀಡಿದೆ. ಹೀಗೆ ಜಾಮೀನು ನೀಡುವಾಗ ಕೋರ್ಟ್ ಉಲ್ಲೇಖ ಮಾಡಿದ ಅಂಶವೀಗ ಚರ್ಚೆಗೆ ಗ್ರಾಸವಾಗಿದೆ. ‘ದೂರುದಾರ ಮಹಿಳೆ ಲೈಂಗಿಕ ಪ್ರಚೋದನಕಾರಿಯಾಗಿ ಉಡುಪು ಧರಿಸಿ, ಬಳಿಕ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಯಿತು ಎಂದು ಹೇಳಿದರೆ ಅದನ್ನು ಒಂದೇ ಸಲಕ್ಕೆ (ಮೇಲ್ನೋಟಕ್ಕೇ) ಪರಿಗಣನೆಗೆ ತೆಗೆದುಕೊಳ್ಳಲಾಗದು’ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದ್ದು, ‘ಪ್ರಸ್ತುತ ಪ್ರಕರಣ ಭಾರತೀಯ ದಂಡಸಂಹಿತೆಯ ಸೆಕ್ಷನ್ 354 ಎ (ಲೈಂಗಿಕ ದೌರ್ಜನ್ಯ)ನಡಿ ಬರುವುದಿಲ್ಲ’ ಎಂದೂ ಸ್ಪಷ್ಟ ತೀರ್ಪು ಕೊಟ್ಟು, ಚಂದ್ರನ್ಗೆ ಜಾಮೀನು ಮಂಜೂರು ಮಾಡಿದೆ.
‘ಆರೋಪಿ ತನಗೆ ಲೈಂಗಿಕ ಕಿರುಕುಳ ನೀಡಿದ. ನನ್ನನ್ನು ಬಲವಂತವಾಗಿ ಆತನ ತೊಡೆಯ ಮೇಲೆ ಕೂರಿಸಿಕೊಂಡ ಎಂದು ದೂರುದಾರರು ಹೇಳಿದ್ದಾರೆ. ಆದರೆ 74 ವರ್ಷದ ಸಿವಿಕ್ ಚಂದ್ರನ್ ಅಂಗವಿಕಲರು. ಅದು ಹೇಗೆ ಆಕೆಯನ್ನು ಎಳೆದು, ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾರೆ?’ ಎಂದೂ ಕೇರಳದ ನ್ಯಾಯಾಲಯ ಪ್ರಶ್ನಿಸಿದೆ. ‘ಲೈಂಗಿಕ ದೌರ್ಜನ್ಯದ ವ್ಯಾಖ್ಯಾನ ಮತ್ತು ಅದಕ್ಕೆ ನೀಡಲಾಗುವ ಶಿಕ್ಷೆಯ ಬಗ್ಗೆ ಸೆಕ್ಷನ್ 354 ಎ ವಿವರಿಸುತ್ತದೆ. ಅದರ ಅನ್ವಯ, ಯಾರೇ ಆಗಲಿ ಮತ್ತೊಬ್ಬರಿಗೆ ಇಷ್ಟವಿಲ್ಲದೆ ಇದ್ದರೂ ಲೈಂಗಿಕ ಬಯಕೆ ವ್ಯಕ್ತಪಡಿಸಿರಬೇಕು. ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿರಬೇಕು ಅಥವಾ ಅಶ್ಲೀಲ ಮಾತುಗಳನ್ನಾಡಿ, ಲೈಂಗಿಕ ಕ್ರಿಯೆಗೆ ಆಗ್ರಹಿಸಬೇಕು. ಮಹಿಳೆಯ ಗೌರವ-ಘನತೆಗೆ ಧಕ್ಕೆ ಆಗಿದ್ದಕ್ಕೆ ಸ್ಪಷ್ಟವಾದ ಸಾಕ್ಷಿಯಿರಬೇಕು ಅಂಥ ಕೇಸ್ಗಳು ಈ ಸೆಕ್ಷನ್ನಡಿ ಬರುತ್ತವೆ. ಆದರೆ ಇಲ್ಲಿ ದೂರುದಾರರೇ ಲೈಂಗಿಕ ಪ್ರಚೋದನಕರಾರಿ ಉಡುಪು ಧರಿಸಿದ್ದರಿಂದ ಲೈಂಗಿಕ ದೌರ್ಜ್ಯವೆಂದು ಏಕಾಏಕಿ ಪರಿಭಾವಿಸಲು ಸಾಧ್ಯವೇ ಇಲ್ಲ’ ಎಂದು ಕೋರ್ಟ್ ಹೇಳಿದೆ.
ಕೋಝಿಕ್ಕೋಡ್ ಜಿಲ್ಲೆಯ ಮೂಡಾಡಿ ಎಂಬಲ್ಲಿರುವ ನಂದಿ ಬೀಚ್ನಲ್ಲಿ 2020ರ ಫೆಬ್ರವರಿಯಲ್ಲಿ ತನ್ನ ಸಿವಿಕ್ ಚಂದ್ರನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ದೂರುದಾರ ಮಹಿಳೆ ಆರೋಪಿಸಿದ್ದರು. ಅವರೂ ಸ್ವತಃ ಬರಹಗಾರ್ತಿಯೇ ಆಗಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಸಿವಿಕ್ ಚಂದ್ರನ್, ಕೋರ್ಟ್ಗೆ ಈ ಮಹಿಳೆಯ ಒಂದಷ್ಟು ಫೋಟೋಗಳು, ಮತ್ತು ತಾನು ಆರೋಪಿಯಲ್ಲ ಎಂಬುದನ್ನು ಪುಷ್ಟೀಕರಿಸುವ ಕೆಲವು ದಾಖಲೆಗಳನ್ನು ಸಲ್ಲಿಸಿದ್ದರು. ಆ ಫೋಟೋದಲ್ಲಿ ಮಹಿಳೆ ಎಂಥ ಉಡುಪಿನಲ್ಲಿ ಇದ್ದರು ಸ್ಪಷ್ಟವಾಗಿಲ್ಲ. ಆದರೆ ಅದನ್ನೇ ಮುಖ್ಯವಾಗಿ ಪರಿಗಣಿಸಿದ ನ್ಯಾಯಾಲಯ ಸಿವಿಕ್ ಚಂದ್ರನ್ಗೆ ನಿರೀಕ್ಷಣಾ ಜಾಮೀನು ಕೊಟ್ಟಿದೆ.
ಅಂದಹಾಗೇ, ಸಿವಿಕ್ ಚಂದ್ರನ್ ವಿರುದ್ಧ ಇದೇ ವರ್ಷ ಮತ್ತೊಂದು ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿತ್ತು. ಕೋಯಿಲಾಂಡಿ ಎಂಬಲ್ಲಿ 2022ರ ಏಪ್ರಿಲ್ನಲ್ಲಿ ನಡೆದಿದ್ದ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ್ದಾಗಿ ಕೋಯಿಲಾಂಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಕೇಸ್ನಲ್ಲಿ ನ್ಯಾಯಾಲಯ ಅವರ ವಯಸ್ಸು ಮತ್ತು ಆರೋಗ್ಯವನ್ನು ಪರಿಗಣಿಸಿ ನಿರೀಕ್ಷಣಾ ಜಾಮೀನು ಕೊಟ್ಟಿತ್ತು.
ಇದನ್ನೂ ಓದಿ: ಕೇರಳದಲ್ಲಿ ಸಿಪಿಐ (ಎಂ) ಮುಖಂಡನ ಹತ್ಯೆ; ಸ್ವಾತಂತ್ರ್ಯ ದಿನಕ್ಕೆ ಸಿದ್ಧತೆ ಮಾಡುತ್ತಿದ್ದವನ ಮೇಲೆ ಅಟ್ಯಾಕ್