Site icon Vistara News

ಮತದಾನದ ಹಕ್ಕು ಕೊಟ್ಟಮೇಲೆ, ಮದುವೆಗೆ ಕಾಯಿಸುವುದು ಸರಿಯಲ್ಲ; ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನು 21ಕ್ಕೆ ಏರಿಸಲು ಕೇರಳ ವಿರೋಧ

Kerala government has opposed the move to raise the Women marriageable Age to 21 year

#image_title

ತಿರುವನಂತಪುರಂ: ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿಯನ್ನು (Women Marriageable Age) 18ರಿಂದ 21ಕ್ಕೆ ಏರಿಸುವ ಪ್ರಸ್ತಾವನೆಗೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ‘ಯುವತಿಯರು 18ವರ್ಷಕ್ಕೇ ಮತದಾನ ಮಾಡುವ ಹಕ್ಕು ಪಡೆಯುತ್ತಾರೆ. ಅಂದಮೇಲೆ, ಮದುವೆಗಾಗಿ 21ವರ್ಷದವರೆಗೆ ಕಾಯಿಸುವುದು ಸರಿಯಲ್ಲ’ ಎಂದು ಕೇರಳ ಸರ್ಕಾರ ಹೇಳಿದೆ.

ಹೆಣ್ಣುಮಕ್ಕಳು 18 ವರ್ಷಕ್ಕೆ ಕಾಲಿಟ್ಟ ನಂತರ ಅವರು ಮದುವೆಗೆ ಅರ್ಹತೆ ಪಡೆಯುತ್ತಾರೆ. ಅದಕ್ಕಿಂತಲೂ ಮೊದಲು ಅವರ ವಿವಾಹ ಮಾಡುವುದು ಕಾನೂನು ಬಾಹಿರ. ಬಾಲ್ಯ ವಿವಾಹ ಎನ್ನಿಸಿಕೊಳ್ಳುತ್ತದೆ ಎಂಬುದು ಸದ್ಯ ಇರುವ ಕಾನೂನು. ಆದರೆ ಆ ವಯಸ್ಸಿನ ಮಿತಿಯನ್ನು 21ಕ್ಕೇ ಏರಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ಇದೆ. ಈ ಬಗ್ಗೆ ರಾಜ್ಯಗಳ ಅಭಿಪ್ರಾಯ ಕೇಳಿ, ರಾಷ್ಟ್ರೀಯ ಮಹಿಳಾ ಆಯೋಗ ಎಲ್ಲ ರಾಜ್ಯಗಳಿಗೂ ಪತ್ರ ಬರೆದಿತ್ತು. ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಕೇರಳ ಸರ್ಕಾರ 18 ವರ್ಷವೇ ಇರಲಿ ಎಂದಿದೆ. ಅಷ್ಟೇ ಅಲ್ಲ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (Pocso)2012ರಲ್ಲಿ ಕೂಡ ಗಂಡು-ಹೆಣ್ಣಿನ ನಡುವೆ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸಲು 18 ವರ್ಷವಾದರೂ ಆಗಿರಬೇಕು ಎಂದು ಹೇಳಲಾಗಿದೆ. ಹೀಗಾಗಿ ಮದುವೆಯ ವಯಸ್ಸನ್ನು ಮತ್ತೆ ಬದಲಿಸುವುದು ಬೇಡ’ ಎಂದು ತಿಳಿಸಿದೆ.

ಇದನ್ನೂ ಓದಿ: Suicide Case: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ

ಇಷ್ಟುದಿನ ಮದುವೆ ವಯಸ್ಸು ಹೆಣ್ಣುಮಕ್ಕಳಿಗೆ 18, ಗಂಡುಮಕ್ಕಳಿಗೆ 21 ಇತ್ತು. ಅದರಲ್ಲೂ ಸಮಾನತೆ ತರಲಾಗುವುದು. ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿಯನ್ನು 21ಕ್ಕೆ ಏರಿಸಲಾಗುವುದು ಎಂದು 2020ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದಾದ ಮೇಲೆ 2021ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರು ಸಂಸತ್ತಿನಲ್ಲಿ ಈ ಮಸೂದೆ ಮಂಡಿಸಿದ್ದಾರೆ. ಸದ್ಯ ಈ ಮಸೂದೆ ಸ್ಥಾಯಿ ಸಮಿತಿಯಲ್ಲಿದೆ. ಕಾಂಗ್ರೆಸ್​, ಸಿಪಿಐ (ಎಂ), ಸಮಾಜವಾದಿ ಪಕ್ಷ, ಮುಸ್ಲಿಂ ಲೀಗ್​​ಗಳು ಈ ಬಿಲ್​​ನ್ನು ಬಲವಾಗಿ ವಿರೋಧಿಸುತ್ತಿವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಆಗುವುದು ಬಾಕಿ ಇದೆ.

2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಕೇಂದ್ರ ಸರ್ಕಾರ ಪ್ರಯತ್ನ ಶುರು ಮಾಡಿದೆ. ಯುವತಿಯರ ಮದುವೆ ವಯಸ್ಸಿನ ಮಿತಿಯನ್ನು ಏರಿಕೆ ಮಾಡುವ ಸಂಬಂಧ ಅಧ್ಯಯನ ನಡೆಸಲು ಸಮತಾ ಪಾರ್ಟಿ ನಾಯಕಿಯಾದ ಜಯಾ ಜೇಟ್ಲಿ ನೇತೃತ್ವದ, 10 ಸದಸ್ಯರ ತಂಡವನ್ನು ರಚನೆ ಮಾಡಿತ್ತು. ಆ ಸಮಿತಿಯೂ ಕೂಡ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಸಲು ಶಿಫಾರಸ್ಸು ಮಾಡಿದೆ. ಮಸೂದೆ ಮಂಡನೆಗೂ ಮುನ್ನ ರಾಷ್ಟ್ರೀಯ ಮಹಿಳಾ ಆಯೋಗ ಎಲ್ಲ ರಾಜ್ಯಗಳ ಅಭಿಪ್ರಾಯ ಕೇಳುತ್ತಿದೆ.

Exit mobile version