ತಿರುವನಂತಪುರಂ: ಹುದ್ದೆ ತೊರೆಯಿರಿ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನೀಡಿದ್ದ ಶೋಕಾಸ್ ನೋಟಿಸ್ನಿಂದ ಸಂಕಷ್ಟಕ್ಕೀಡಾಗಿದ್ದ ಅಲ್ಲಿನ ಎಂಟು ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಕೇರಳ ಹೈಕೋರ್ಟ್ನ ವಿಶೇಷ ಪೀಠ ತಾತ್ಕಾಲಿಕವಾಗಿ ರಿಲೀಫ್ ನೀಡಿದೆ. ಕೇರಳದಲ್ಲಿ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರೇ ಕುಲಪತಿಗಳು ಆಗಿರುತ್ತಾರೆ. ಅದರಂತೆ ಈ ಎಂಟೂ ಯೂನಿವರ್ಸಿಟಿಗಳ ಕುಲಪತಿಗಳಾಗಿರುವ ಆರಿಫ್ ಮೊಹಮ್ಮದ್ ಖಾನ್, ಎಲ್ಲ ಉಪಕುಲಪತಿಗಳಿಗೂ ಹುದ್ದೆ ತೊರೆಯಲು ಆದೇಶ ನೀಡಿದ್ದರು.
ರಾಜ್ಯಪಾಲರ ಈ ಆದೇಶದ ವಿರುದ್ಧ ಕೇರಳ ಸರ್ಕಾರ/ ಉಪಕುಲಪತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ವಿಚಾರಣೆ ನಡೆಸಿದ ಹೈಕೋರ್ಟ್, ‘ಉಪಕುಲಪತಿಗಳನ್ನು ಹುದ್ದೆಯಿಂದ ತೆಗೆದುಹಾಕಲು ಸೂಕ್ತ ಪ್ರಕ್ರಿಯೆ ಇದೆ. ಆ ಪ್ರಕ್ರಿಯೆಗಳೆಲ್ಲ ನಡೆದು, ಕುಲಪತಿ/ರಾಜ್ಯಪಾಲರಿಂದ ಅಂತಿಮ ಆದೇಶ ಬರುವವರೆಗೂ ನೀವೆಲ್ಲ ನಿಮ್ಮ ಹುದ್ದೆಗಳಲ್ಲಿ ಮುಂದುವರಿಯಿರಿ’ ಎಂದು ಉಪಕುಲಪತಿಗಳಿಗೆ ಹೈಕೋರ್ಟ್ ಹೇಳಿದೆ.
ಕೇರಳ ವಿಶ್ವವಿದ್ಯಾಲಯಗಳ ಉಪಕುಲಪತಿ ನೇಮಕದಲ್ಲಿ ಅಲ್ಲಿನ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಅಕ್ರಮ ಎಸಗಿದೆ. ಅವರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿದೆ ಎಂದು ರಾಜ್ಯಪಾಲ (ವಿಶ್ವವಿದ್ಯಾಲಯಗಳ ಕುಲಪತಿ) ಆರಿಫ್ ಖಾನ್ ತೀವ್ರ ಅಸಮಾಧಾನವ್ಯಕ್ತಪಡಿಸಿದ್ದರು. ಅಕ್ಟೋಬರ್ 23ರಂದು ನೋಟಿಸ್ ನೀಡಿದ್ದ ಅವರು, ‘ಅಕ್ಟೋಬರ್ 25ರ ಬೆಳಗ್ಗೆ 11.30ರೊಳಗೆ ಹುದ್ದೆ ತೊರೆಯಬೇಕು’ ಎಂದು ಆದೇಶಿಸಿದ್ದರು. ರಾಜ್ಯಪಾಲರ ಆದೇಶ ಹೊರಬಿದ್ದ ತಕ್ಷಣವೇ ಉಪಕುಲಪತಿಗಳು ಹೈಕೋರ್ಟ್ಗೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ರಾಜ್ಯಪಾಲರ ಆದೇಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ. ಉಪಕುಲಪತಿಗಳ ನೇಮಕ ಅನೂರ್ಜಿತವೇ ಆಗಿದ್ದರೂ ಅದು ಹೇಗೆ ರಾಜ್ಯಪಾಲರು ಅವರನ್ನು ಹುದ್ದೆಯಿಂದ ಕೆಳಗಿಳಿಯಲು ಹೇಳುತ್ತಾರೆ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: Kerala Governor | ಕುಲಪತಿಗಳ ರಾಜೀನಾಮೆಗೆ ಕೇರಳ ರಾಜ್ಯಪಾಲ ಆದೇಶ, ಇಂದು ಸಂಜೆ ಹೈಕೋರ್ಟ್‌ನಲ್ಲಿ ವಿಚಾರಣೆ