Site icon Vistara News

Monkeypox: ಕೇರಳದಲ್ಲಿ ಪತ್ತೆಯಾಯ್ತು ಮತ್ತೊಂದು ಮಂಕಿಪಾಕ್ಸ್‌ ಪ್ರಕರಣ; ದೇಶದಲ್ಲಿದು 2ನೇ ಕೇಸ್‌

monkeypox case

ತಿರುವನಂತಪುರ: ಕೇರಳದಲ್ಲಿ ಇನ್ನೊಂದು ಮಂಕಿ ಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಕಣ್ಣೂರು ಜಿಲ್ಲೆಯ 31 ವರ್ಷದ ವ್ಯಕ್ತಿಯಲ್ಲೀಗ ವೈರಸ್‌ ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಇವರು ದುಬೈನಿಂದ ಬಂದು ಜುಲೈ 13ರಂದು ಮಂಗಳೂರು ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಆಗಿದ್ದರು. ಆಗಲೇ ಮಂಕಿಪಾಕ್ಸ್‌ ಲಕ್ಷಣಗಳು ಕಾಣಿಸಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ ಕಳಿಸಲಾಗಿತ್ತು. ತಪಾಸಣೆಯ ವರದಿ ಬಂದಿದ್ದು, ಮಂಕಿಪಾಕ್ಸ್‌ ಇರುವುದು ದೃಢಪಟ್ಟಿದೆ. ಸದ್ಯ ಕಣ್ಣೂರಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಟ್ಟ ಮೊದಲು ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್‌ ರೋಗ ಭಾರತಕ್ಕೆ ಕಾಲಿಟ್ಟಿದ್ದು ಜುಲೈ 15ರಂದು. ಅದೂ ಕೂಡ ಕೇರಳದಲ್ಲೇ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಅವರ ರಕ್ತದ ಮಾದರಿಯನ್ನು ಪುಣೆಯ ವೈರಾಲಜಿ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಮಂಕಿಪಾಕ್ಸ್‌ ಇರುವುದು ದೃಢಪಟ್ಟಿತ್ತು. ಅಂದು ಮೊದಲ ಕೇಸ್‌ ದಾಖಲಾದಾಗಲೇ ಪ್ರತಿಕ್ರಿಯೆ ನೀಡಿದ್ದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌, ಮಂಕಿಪಾಕ್ಸ್‌ ವ್ಯಾಪಕವಾಗಿ ಹರಡದಂತೆ ಎಲ್ಲ ರೀತಿಯ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Monkeypox: ದೇಶದ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆ? ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಕಂಡಿದೆ ಲಕ್ಷಣ

ಇದೀಗ ಕೇರಳದಲ್ಲಿಯೇ ಇಬ್ಬರಿಗೆ ಮಂಕಿಪಾಕ್ಸ್‌ ದೃಢಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಹೊರದೇಶಗಳಿಂದ ಬಂದವರಲ್ಲೇ ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಏರ್‌ಪೋರ್ಟ್‌ಗಳಲ್ಲಿ ಇನ್ನಷ್ಟು ನಿಗಾವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಏರ್‌ಪೋರ್ಟ್‌ ಆಡಳಿತದೊಂದಿಗೆ ಮಾತುಕತೆಯನ್ನೂ ನಡೆಸಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದವರಲ್ಲಿ ಯಾರಲ್ಲೇ ಆದರೂ ಮಂಕಿಪಾಕ್ಸ್‌ನ ಲಕ್ಷಣ ಸ್ವಲ್ಪವೇ ಕಂಡುಬಂದರೂ ಅವರನ್ನು ಐಸೋಲೇಟ್‌ ಮಾಡಲು ಮತ್ತು ತಕ್ಷಣವೇ ಆಂಬುಲೆನ್ಸ್‌ ಮೂಲಕ ನೇರವಾಗಿ ಆಸ್ಪತ್ರೆಗೆ ಕಳಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದೂ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಮಂಕಿಪಾಕ್ಸ್‌ ಲಕ್ಷಣಗಳೇನು?
1. ಜ್ವರ, ಆಯಾಸ, ತಲೆ ನೋವು, ಮಾಂಸ ಖಂಡಗಳಲ್ಲಿ ನೋವು, ಚಳಿ, ಬೆನ್ನು ನೋವು, ಗಂಟಲು ನೋವು, ಒಣ ಕೆಮ್ಮು, ಉಸಿರಾಟದ ತೊಂದರೆ.
2.ಮೈಮೇಲೆ ಸಣ್ಣ ಗುಳ್ಳೆಗಳು ಏಳುತ್ತವೆ. ಬಳಿಕ ಅದು ದೊಡ್ಡದಾಗಿ ಕೀವು ತುಂಬುತ್ತದೆ.
3.ಬಾಯಿಯ ಒಳಗೆ, ಕಣ್ಣಿನ ಒಳಭಾಗ, ಗುದದ್ವಾರಗಳಲ್ಲಿ ಈ ಗುಳ್ಳೆ, ದದ್ದು ಉಂಟಾಗುತ್ತದೆ.

ಇದನ್ನೂ ಓದಿ: Explainer: ಕೇರಳದಿಂದ Monkeypox ನಮ್ಮಲ್ಲಿಗೂ ಬರಬಹುದಾ? ಬಂದರೆ ಏನು ಮಾಡೋದು? ಬರದಂತೆ ತಡೆ ಹೇಗೆ?

Exit mobile version