ಕಾಸರಗೋಡು: ಇತ್ತೀಚೆಗಷ್ಟೇ ಕೇರಳದ 33 ವರ್ಷ ವಯಸ್ಸಿನ ನರ್ಸ್ವೊಬ್ಬರು ಫುಡ್ಪಾಯ್ಸನ್ನಿಂದ ಮೃತಪಟ್ಟಿದ್ದು ವರದಿಯಾಗಿತ್ತು. ಈ ನರ್ಸ್ ‘ಹೋಟೆಲ್ ಪಾರ್ಕ್’ ಎಂಬ ಹೆಸರಿನ ರೆಸ್ಟೋರೆಂಟ್ನಿಂದ ಅಲ್ ಫಹಾಮ್ (ಅರೇಬಿಯನ್ ಚಿಕನ್) ಆರ್ಡರ್ ಮಾಡಿ ತರಿಸಿ ತಿಂದು ಕೆಲವೇ ಹೊತ್ತಲ್ಲಿ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದರು. ನರ್ಸ್ ಸಾವಿನ ಬೆನ್ನಲ್ಲೇ ಕೇರಳ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಕೊಟ್ಟಾಯಂ, ಎರ್ನಾಕುಲಂ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳ ಒಟ್ಟು 40 ಹೋಟೆಲ್ಗಳ ಬಾಗಿಲು ಮುಚ್ಚಿಸಿ, 62 ಹೋಟೆಲ್/ರೆಸ್ಟೋರೆಂಟ್ಗಳಿಗೆ ದಂಡ ವಿಧಿಸಿದ್ದರು.
ಹಾಗೇ, ರಾಜ್ಯಾದ್ಯಂತ ಎಲ್ಲ ಹೋಟೆಲ್/ರೆಸ್ಟೋರೆಂಟ್ಗಳನ್ನೂ ಪರಿಶೀಲನೆ ಮಾಡಬೇಕು. ಆಹಾರ ಸುರಕ್ಷತಾ ನಿಯಮಗಳ ಪಾಲನೆ ಮಾಡುತ್ತಿಲ್ಲದ ಹೋಟೆಲ್/ರೆಸ್ಟೋರೆಂಟ್ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಆರೋಗ್ಯ ಸಚಿವ ವೀಣಾ ಜಾರ್ಜ್ ಈಗಾಗಲೇ ಆದೇಶ ಕೂಡ ನೀಡಿದ್ದಾರೆ. ಈ ಮಧ್ಯೆ ಇನ್ನೊಂದು ಶಂಕಿತ ಫುಡ್ ಪಾಯ್ಸನ್ (ವಿಷಾಹಾರ ಸೇವನೆ) ಘಟನೆ ಕೇರಳದ ಕಾಸರಗೋಡಿನಿಂದ ವರದಿಯಾಗಿದೆ.
ಪೆರುಂಬಳದ ಅಂಜು ಶ್ರೀಪಾರ್ವತಿ ಮತ್ತು ಆಕೆಯ ಸ್ನೇಹಿತೆಯರೆಲ್ಲ ಸೇರಿ ಸ್ಥಳೀಯ ಹೋಟೆಲ್ವೊಂದರಿಂದ ಚಿಕನ್ ಬಿರ್ಯಾನಿ (ಕುಝಿಮಂತಿ) ಆನ್ಲೈನ್ನಲ್ಲಿ ತರಿಸಿ ತಿಂದಿದ್ದರು. ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಅವರು ಈ ಬಿರ್ಯಾನಿ ಪಾರ್ಟಿ ಮಾಡಿದ್ದರು. ಆದರೆ ಬಿರ್ಯಾನಿ ತಿನ್ನುತ್ತಿದ್ದಂತೆ ಎಲ್ಲರೂ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರಲ್ಲಿ ಅಂಜು ಸ್ಥಿತಿ ಗಂಭೀರವಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾಳೆ. ಅಂಜು ಮೃತಪಟ್ಟ ಬೆನ್ನಲ್ಲೇ, ಆಕೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆಯನ್ನೂ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗಂಭೀರವಾಗಿ ಪರಿಗಣಿಸಿದ್ದಾರೆ. ಯುವತಿ ಯಾವ ಹೋಟೆಲ್ನಿಂದ ಆಹಾರ ಆರ್ಡರ್ ಮಾಡಿದ್ದಳೋ ಆ ಹೋಟೆಲ್ನ ಲೈಸೆನ್ಸ್ ರದ್ದುಗೊಳಿಸಲಾಗುವುದು. ಈ ಘಟನೆಯನ್ನು ಆಳವಾಗಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ನರ್ಸ್ ಸಾವಿನ ಬೆನ್ನಲ್ಲೇ 40 ಹೋಟೆಲ್ಗಳ ಬಾಗಿಲು ಕ್ಲೋಸ್; 62 ಹೋಟೆಲ್ಗಳಿಗೆ ದಂಡ