ನವ ದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಬೆದರಿಕೆ ಹಾಕಿ, ಪ್ರಚೋದನಕಾರಿಯಾಗಿ ಮಾತನಾಡಿದ ಅಜ್ಮೇರ್ ದರ್ಗಾದ ಖಾದಿಮ್ ಸಲ್ಮಾನ್ ಚಿಸ್ತಿಯನ್ನು ಅಜ್ಮೇರ್ ಪೊಲೀಸರ ಬಂಧಿಸಿದ್ದಾರೆ. ಸಲ್ಮಾನ್ ನೂಪುರ್ ಶರ್ಮಾಗೆ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಮಂಗಳವಾರ ತಡರಾತ್ರಿ 12.45ರ ಹೊತ್ತಿಗೆ ಅವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಎಎಸ್‌ಪಿ ವಿಕಾಸ್ ಸಂಗ್ವಾನ್ ತಿಳಿಸಿದ್ದಾರೆ.
ದರ್ಗಾದ ಖಾದಿಮ್ (ಪರಿಚಾರಕ) ಸಲ್ಮಾನ್ ಚಿಸ್ತಿ ಒಬ್ಬ ಹಿಸ್ಟರಿ ಶೀಟರ್ ಆಗಿದ್ದು, ಸ್ಥಳೀಯ ಠಾಣೆಯಲ್ಲೇ ಆತನ ಹೆಸರು ಇದೆ. ಇದೀಗ ವಿಡಿಯೋವೊಂದನ್ನು ಮಾಡಿ ನೂಪುರ್ ಶರ್ಮಾರ ಕೊಲೆಗೆ ಬಹಿರಂಗವಾಗಿ ಕರೆಕೊಟ್ಟಿದ್ದಾನೆ. ಯಾರು ನೂಪುರ್ ಶರ್ಮಾರ ತಲೆ ಕತ್ತರಿಸುತ್ತಾರೋ ಅವರಿಗೆ ನನ್ನ ಮನೆಯನ್ನೇ ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದನ್ನು ವಿಡಿಯೋದಲ್ಲಿ ನೋಡಬಹುದು. ʼನನ್ನ ಹೆತ್ತ ತಾಯಿಯ ಮೇಲೆ ಪ್ರಮಾಣ ಮಾಡುತ್ತೇನೆ. ನಾನೇ ನೂಪುರ್ ಶರ್ಮಾಗೆ ಸಾರ್ವಜನಿಕವಾಗಿ ಗುಂಡು ಹಾರಿಸುತ್ತೇನೆ. ನನ್ನ ಮಕ್ಕಳ ಮೇಲೆ ಆಣೆ, ನಾನು ಆಕೆಗೆ ಶೂಟ್ ಮಾಡಲು ಸಿದ್ಧನಿದ್ದೇನೆ. ಹಾಗಿದ್ದಾಗ್ಯೂ ಯಾರಾದರೂ ಆಕೆಯ ತಲೆ ಕತ್ತರಿಸಿ ನಾನಿರುವಲ್ಲಿಗೆ ತಂದರೆ, ಅವರಿಗೆ ನನ್ನ ಮನೆಯನ್ನೇ ಬಿಟ್ಟುಕೊಡುತ್ತೇನೆʼ ಎಂದು ಸಲ್ಮಾನ್ ಹೇಳಿದ್ದಾನೆ.
ಉದಯಪುರದ ಕನ್ಹಯ್ಯಲಾಲ್ ಹತ್ಯೆ ಮಾಡುವುದಕ್ಕೆ ಮೊದಲು ರಿಯಾಜ್ ಮೊಹಮ್ಮದ್ ಮತ್ತು ಗೌಸ್ ಮೊಹಮ್ಮದ್ ಕೂಡ ಇದೇ ಮಾದರಿಯ ವಿಡಿಯೋ ಮಾಡಿದ್ದರು. ಇದೀಗ ದರ್ಗಾದ ಖಾದಿಮ್ ವಿರುದ್ಧ ಅಲ್ವಾರ್ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಲ್ಮಾನ್ ಚಿಸ್ತಿ ಕಂಠಪೂರ್ತಿ ಕುಡಿದು ಮಾತನಾಡಿದ್ದು ಈ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಖಂಡಿತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‌ಪಿ ವಿಕಾಸ್ ಸಂಗ್ವಾನ್ ಹೇಳಿದ್ದಾರೆ.
ಇದನ್ನೂ ಓದಿ: ಗಲಭೆಗೆ ನೂಪುರ್ ಶರ್ಮಾ ಒಬ್ಬರೇ ಅಲ್ಲ, ಆರ್‌ಎಸ್‌ಎಸ್, ಬಿಜೆಪಿಯೂ ಕಾರಣ : ರಾಹುಲ್ ಗಾಂಧಿ