ನವ ದೆಹಲಿ: ಖಲಿಸ್ತಾನಿ ಯುವ ನಾಯಕ, ವಾರಿಸ್ ಪಂಜಾಬ್ ದೆ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ (Amritpal Singh) ಬಂಧನವಾಗಿದ್ದಾನಾ? ಅಥವಾ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನಾ? ನಿನ್ನೆಯಿಂದಲೂ ಈ ವಿಷಯದಲ್ಲಿ ಗೊಂದಲ ಏರ್ಪಟ್ಟಿದೆ. ಮಾ.18ರ ಮಧ್ಯಾಹ್ನದ ಹೊತ್ತಿಗೆ ಅಮೃತ್ಪಾಲ್ ಸಿಂಗ್, ಪಂಜಾಬ್ನ ನಕೋಡರ್ ಬಳಿ ಅರೆಸ್ಟ್ ಆಗಿದ್ದಾನೆ ಎಂಬ ಸುದ್ದಿಬಂತು. ಆದರೆ ಕೆಲವೇ ಹೊತ್ತಲ್ಲಿ, ಆತನ ಬಂಧನವಾಗಿಲ್ಲ. ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅವನ ಸಹಚರರನ್ನು ಮಾತ್ರ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರೇ ಪ್ರಕಟಣೆ ಹೊರಡಿಸಿದ್ದರು. ಆದರೆ ಈಗ ಮತ್ತೊಂದು ವರದಿ ಬಂದಿದೆ. ಅಮೃತ್ಪಾಲ್ ಸಿಂಗ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವನು ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ನೀಡಿದ ಹೇಳಿಕೆಯೇ ಸುಳ್ಳೆಂದು ಅಮೃತ್ಪಾಲ್ ಸಿಂಗ್ನ ಸಹಚರನೊಬ್ಬ ಹೇಳಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಪ್ರತ್ಯೇಕತಾವಾದಿ, ಖಲಿಸ್ತಾನಿ ಚಳವಳಿಗಾಗಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಅಮೃತ್ಪಾಲ್ ಸಿಂಗ್ ಬಂಧನ ಪಂಜಾಬ್ನಲ್ಲಿ ಸೂಕ್ಷ್ಮ ವಿಷಯವೇ ಆಗಿದೆ. ಹೀಗಾಗಿ ನಿನ್ನೆಯಿಂದಲೂ ಕೆಲವು ಸ್ಥಳಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಜಲಂಧರ್ ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಈ ಬಗ್ಗೆ ಎಎನ್ಐ ಮಾಧ್ಯಮದ ಜತೆ ಮಾತನಾಡಿ, ‘ಅಮೃತ್ಸಿಂಗ್ ಪಾಲ್ನನ್ನು ದೇಶಭ್ರಷ್ಟ ಎಂದು ಘೋಷಿಸಲಾಗಿದೆ. ಅವನ ವಾಹನವನ್ನು ಜಲಂಧರ್ನ ನಾಕೋಡರ್ ಬಳಿ ತಡೆಯಲಾಯಿತು. ಆದರೆ ಆತ ಪರಾರಿಯಾದ. ಸಹಚರರನ್ನು ಬಂಧಿಸಲಾಗಿದೆ’ ಎಂದಿದ್ದರು. ಆದರೆ ಈಗ ಸಹಚರನೊಬ್ಬ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅಮೃತ್ ಪಾಲ್ ಸಿಂಗ್ ಅರೆಸ್ಟ್ ಆಗಿದೆ. ಆತನನ್ನು ಪಂಜಾಬ್ಗೆ ಕರೆದೊಯ್ಯಬಹುದು ಅಥವಾ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ಗೆ ಹಸ್ತಾಂತರ ಮಾಡಬಹುದು’ ಎಂದು ಹೇಳಿದ್ದಾನೆ.
ಇದನ್ನೂ ಓದಿ: Amritpal Singh : ಪೊಲೀಸರನ್ನೇ ಯಾಮಾರಿಸುತ್ತಿರುವ ಪ್ರತ್ಯೇಕವಾದಿ ಅಮೃತ್ಪಾಲ್ ಸಿಂಗ್; ಸೆರೆಗೆ ಕಾರ್ಯಾಚರಣೆ
ಲಾರೆನ್ಸ್ ಬಿಷ್ಣೋಯಿ ಈಗಾಗಲೇ ಜೈಲಿನಲ್ಲಿ ಇರುವ ನಟೋರಿಯಸ್ ಗ್ಯಾಂಗ್ಸ್ಟರ್. ಈತನ ಗ್ಯಾಂಗ್ಗೂ-ಖಲಿಸ್ತಾನಿ ಗ್ಯಾಂಗ್ಗೂ ದ್ವೇಷ. ತನ್ನನ್ನು ತಾನು ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುವ ಲಾರೆನ್ಸ್ ಬಿಷ್ಣೋಯಿ, ಖಲಿಸ್ತಾನಿಗಳ ವಿರುದ್ಧ ಕಿಡಿಕಾರುತ್ತಾರೆ. ಈಗ ಬಂಧಿತನಾಗಿರುವ ಅಮೃತ್ಪಾಲ್ ಸಿಂಗ್ನನ್ನು ಪೊಲೀಸರೇ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ಗೆ ಹಸ್ತಾಂತರ ಮಾಡಿ, ತನ್ಮೂಲಕ ಕೊಲ್ಲಿಸುತ್ತಾರೆ. ಹೀಗಾಗಿಯೇ ಅವನು ಅರೆಸ್ಟ್ ಆಗಿಲ್ಲ ಎನ್ನುತ್ತಿದ್ದಾರೆ ಎಂಬುದು ಸಹಚರನ ವಾದ.
ಇನ್ನು ಪೊಲೀಸರು ಈ ಅಮೃತ್ ಪಾಲ್ ಸಿಂಗ್ನ ಸಂಘಟನೆ ವಾರಿಸ್ ಪಂಜಾಬ್ ದೆಯ ಸುಮಾರು 78 ಜನರನ್ನು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಂಜಾಬ್ನ ಹಲವು ಭಾಗಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅದರಲ್ಲೂ ಅಮೃತ್ಪಾಲ್ ಸಿಂಗ್ ಹುಟ್ಟೂರು ಜಲ್ಲುಪುರ್ ಖೇರಾದಲ್ಲಿ ಮತ್ತಷ್ಟು ಭದ್ರತೆ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಹಲವೆಡೆ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.