Site icon Vistara News

Amritpal Singh: ಖಲಿಸ್ತಾನಿ ನಾಯಕ ಅಮೃತ್​ಪಾಲ್ ಸಿಂಗ್ ಪತ್ನಿ ಬಂಧನ; ಲಂಡನ್​ಗೆ ಹೊರಟಿದ್ದವಳು ಖಾಕಿ ಖೆಡ್ಡಾಕ್ಕೆ

Khalistani separatist Amritpal Singh wife Kirandeep Kaur Arrested In Punjab

#image_title

ಅಮೃತ್​ಸರ್​: ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿರುವ ಖಲಿಸ್ತಾನಿ ನಾಯಕ, ವಾರಿಸ್​ ಪಂಜಾಬ್ ದೆ ಸಂಘಟನೆ ಮುಖ್ಯಸ್ಥ ಅಮೃತ್​ಪಾಲ್ ಸಿಂಗ್ (Amritpal Singh)​​ನ ಪತ್ನಿ ಕಿರೆಣ್​ದೀಪ್​ ಕೌರ್​ಳನ್ನು ಪಂಜಾಬ್ ಪೊಲೀಸರು ಇಂದು ಅಮೃತ್​ಸರ್​​ನ ಶ್ರೀ ಗುರುರಾಮ್​ ದಾಸ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆಕೆ ಲಂಡನ್​ಗೆ ಹೋಗಲು ವಿಮಾನವೇರುವ ಸಿದ್ಧತೆಯೊಂದಿಗೆ ಅಲ್ಲಿಗೆ ಬಂದಿದ್ದಳು. ಈ ವೇಳೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾಳೆ. ಮಾರ್ಚ್​ 18ರಂದು ಅಮೃತ್​ಪಾಲ್ ಸಿಂಗ್​​ನನ್ನು ಪಂಜಾಬ್​​ನ ನಾಕೋಡರ್​ ಬಳಿ ಬಂಧಿಸಲು ಪೊಲೀಸರು ಬಲೆಬೀಸಿದ್ದರು. ಆದರೆ ಅಂದು ಕ್ಷಣದಲ್ಲಿ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇದುವರೆಗೂ ಅವನ ಜಾಡು ಸಿಕ್ಕಿಲ್ಲ. ಅಂದಿನಿಂದ ಇಂದಿನವರೆಗೆ ಪಂಜಾಬ್ ಪೊಲೀಸರು ಅಮೃತ್​ಪಾಲ್ ಸಿಂಗ್​ನ ಹಲವು ಸಹಚರರು, ವಾರಿಸ್​ ಪಂಜಾಬ್ ದೆ ಸಂಘಟನೆಯ ಅನೇಕ ಸದಸ್ಯರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಅಮೃತ್​ಪಾಲ್ ಸಿಂಗ್ ನಾಪತ್ತೆಯಾದ ಬಳಿಕ ಪಂಜಾಬ್​ ಪೊಲೀಸರು ಆತನ ಪತ್ನಿ ಕಿರೆಣ್​ದೀಪ್​​ ಕೌರ್​​ಳನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದರು. ಆಕೆ ಮೇಲೆ ಪೊಲೀಸ್​ ಕಣ್ಗಾವಲು ಇತ್ತು. ವಾರಿಸ್​ ಪಂಜಾಬ್​ ದೆ ಸಂಘಟನೆಗಾಗಿ ವಿದೇಶಿ ದೇಣಿಗೆ ಸಂಗ್ರಹ ಮಾಡಿದ ಆರೋಪ ಕೂಡ ಕಿರೆಣ್​ದೀಪ್​ ವಿರುದ್ಧ ಕೇಳಿಬಂದಿದೆ. ಈ ಕಿರೆಣ್​ದೀಪ್ ಪಂಜಾಬ್​​ನಲ್ಲೇ ಹುಟ್ಟಿದ್ದರೂ, ಬೆಳೆದಿದ್ದೆಲ್ಲ ಲಂಡನ್​​ನಲ್ಲಿ. ಆಕೆಗೆ ಅಲ್ಲಿನ ನಾಗರಿಕತ್ವವೇ ಇದೆ. ಇದೇ ವರ್ಷ ಫೆಬ್ರವರಿಯಲ್ಲಿ ಅಮೃತ್​ಪಾಲ್​ ಸಿಂಗ್​​ನನ್ನು ಮದುವೆಯಾಗಿ, ಮತ್ತೆ ಭಾರತಕ್ಕೆ ಬಂದಿದ್ದಳು. ಇನ್ನು ಅಮೃತ್​ಪಾಲ್ ಸಿಂಗ್ ಕೂಡ ಲಂಡನ್​​ಗೆ ಹೋಗುವ ಪ್ಲ್ಯಾನ್​ನಲ್ಲಿ ಇದ್ದ. ಈಗಾಗಲೇ ಯುಕೆ ಪೌರತ್ವಕ್ಕಾಗಿ ಅವನು ಅರ್ಜಿ ಕೂಡ ಸಲ್ಲಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Amritpal Singh: ಪೊಲೀಸರಿಗೆ ನಾನು ಶರಣಾಗಲ್ಲ; ಯುಟ್ಯೂಬ್‌ ಲೈವ್‌ನಲ್ಲಿ ಅಮೃತ್ ಪಾಲ್ ಸಿಂಗ್ ಹೇಳಿಕೆ

ಲಂಡನ್​ನಲ್ಲಿ ಸಕ್ರಿಯವಾಗಿರುವ ಖಲಿಸ್ತಾನಿ ಉಗ್ರರ ಗುಂಪು ಬಬ್ಬರ್​ ಖಲ್ಸಾ ಇಂಟರ್​ನ್ಯಾಶನಲ್​​ನೊಂದಿಗೆ ಕಿರೆಣ್​ದೀಪ್​ ಸಂಪರ್ಕ ಇದೆ ಎಂಬ ಗುಮಾನಿಯೂ ಇದೆಯಾದರೂ ಈ ಬಗ್ಗೆ ಪಂಜಾಬ್ ಪೊಲೀಸರ ಬಳಿ ಯಾವುದೇ ನಿಖರ ಪುರಾವೆಗಳಿಲ್ಲ. ಸದ್ಯಕ್ಕಂತೂ ನಾಪತ್ತೆಯಾದ ಅಮೃತ್​ಪಾಲ್​ ಸಿಂಗ್​ ಬಗ್ಗೆ ವಿಚಾರಣೆಗೆ ಒಳಪಡಿಸಲೆಂದೇ ಆಕೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅಮೃತ್​ಪಾಲ್​ ಸಿಂಗ್​ ಪಂಜಾಬ್​​ನಿಂದ ನಾಪತ್ತೆಯಾದವನು ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಅವನು ನೇಪಾಳಕ್ಕೆ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತಾದರೂ, ಅಲ್ಲಿಯೂ ಇಲ್ಲ ಎಂದು ನೇಪಾಳ ಸರ್ಕಾರ ಇತ್ತೀಚೆಗಷ್ಟೇ ತಿಳಿಸಿದೆ.

Exit mobile version