ನವ ದೆಹಲಿ: ಖಲಿಸ್ತಾನಿ ಉಗ್ರರ ಸ್ಲೀಪರ್ ಸೆಲ್ಗಳು ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಇಂಡಿಯಾ ಟುಡೆ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಪಶ್ಚಿಮ ದೆಹಲಿಯ ಹಲವು ಪ್ರದೇಶಗಳಲ್ಲಿ ಇತ್ತೀಚೆಗೆ ಖಲಿಸ್ತಾನ ಪರ ಪೋಸ್ಟರ್ಗಳು, ಖಲಿಸ್ತಾನಿ ಉಗ್ರರ ಬರಹಗಳು ಕಾಣಿಸಿಕೊಳ್ಳುತ್ತಿವೆ. ಈ ವಿಷಯವನ್ನು ಪೊಲೀಸರು ಗಂಭೀರ ತನಿಖೆಗೆ ಕೈಗೆತ್ತಿಕೊಂಡಿವೆ.
ಇತ್ತೀಚೆಗೆ ಖಲಿಸ್ತಾನಿ ಉಗ್ರರ ಹಾವಳಿಯೂ ಜಾಸ್ತಿಯಾಗಿದೆ. ಪಂಜಾಬ್ನಲ್ಲಂತೂ ಭದ್ರತಾ ಪಡೆ ಕಚೇರಿಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದ್ದರು, ಪ್ರತಿ ದಾಳಿಯ ಹಿಂದೆಯೂ ಖಲಿಸ್ತಾನಿ ಉಗ್ರರ ಕೈವಾಡ ಇರುವುದು ದೃಢಪಡುತ್ತಿದೆ. ಇತ್ತೀಚೆಗಂತೂ ಪಶ್ಚಿಮ ದೆಹಲಿಯ ವಿಕಾಸಪುರಿ, ಜನಕಪುರಿ, ಪಶ್ಚಿಮ ವಿಹಾರ್, ಪೀರಗರ್ಹಿ ಮತ್ತು ಇತರ ಕಡೆಗಳಲ್ಲಿ, ಖಲಿಸ್ತಾನಿ ಗೀಚು ಬರಹಗಳು, ಅದೇನೇನೋ ಕೋಡ್ಗಳು ಕಾಣಿಸಿಕೊಂಡಿದ್ದವು. ಇದೆಲ್ಲವೂ ಅದ್ಯಾವುದೋ ದೊಡ್ಡ ದಾಳಿಯ ಸಂಚಿನ ಭಾಗವೇ ಆಗಿರಬಹುದು ಎಂದು ಗುಪ್ತಚರ ಇಲಾಖೆ ತಿಳಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೆನಡಾದಲ್ಲಿರುವ ಹಿಂದು ದೇಗುಲ ಸ್ವಾಮಿನಾರಾಯಣ ಮಂದಿರವನ್ನು ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು
ಖಲಿಸ್ತಾನ ಪರ ಪೋಸ್ಟರ್-ಗೀಚುಬರಹಗಳು ಕಾಣಿಸಿಕೊಂಡ ಬೆನ್ನಲ್ಲೇ ದೆಹಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಆ ಪೋಸ್ಟರ್ಗಳನ್ನು ಕಿತ್ತೆಸೆದು, ಬರಹಗಳನ್ನು ಅಳಿಸಲಾಗಿದೆ. ಅದನ್ನು ಅಂಟಿಸಿದವರು/ಬರೆದವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಸಿಸಿಟಿವಿ ಫೂಟೇಜ್ಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಈ ಮಧ್ಯೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನೂ ಭದ್ರತಾ ಪಡೆ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿದ್ದಾರೆ.