Site icon Vistara News

Air India: ಒಂದು ವ್ಹೀಲ್​ ಚೇರ್​ ಕೂಡ ಇಲ್ಲ; ಏರ್​ ಇಂಡಿಯಾದ್ದು ಅತ್ಯಂತ ಕಳಪೆ ಸೇವೆ ಎಂದು ಕಿಡಿ ಕಾರಿದ ಬಿಜೆಪಿ ನಾಯಕಿ ಖುಷ್ಬು

My father started sexually abusing me when I was 8: Khushbu Sundar

Khushbu Sundar

ನವ ದೆಹಲಿ: ಈಗಾಗಲೇ ಸಾಲುಸಾಲು ವಿವಾದಾತ್ಮಕ ಪ್ರಕರಣಗಳ ಕಾರಣಕ್ಕೆ ಸುದ್ದಿಯಲ್ಲಿರುವ ಏರ್​ ಇಂಡಿಯಾ (Air India) ವಿಮಾನ ಯಾನ ಸಂಸ್ಥೆಗೆ ಬಿಜೆಪಿ ನಾಯಕಿ, ಚಿತ್ರ ನಟಿ ಖುಷ್ಬು ಸುಂದರ್​ ಛೀಮಾರಿ ಹಾಕಿದ್ದಾರೆ. ಏರ್​ ಇಂಡಿಯಾದ್ದು ಅತ್ಯಂತ ಕಳಪೆ ಮಟ್ಟದ ಸೇವೆ, ಅವರ ಬಳಿ ಒಂದು ವ್ಹೀಲ್​ ಚೇರ್​ (ಗಾಲಿ ಕುರ್ಚಿ) ಕೂಡ ಇಲ್ಲ ಎಂದು ಟ್ವಿಟರ್​ ಮೂಲಕ ಕಿಡಿಕಾರಿದ್ದಾರೆ.

ಟ್ವೀಟ್ ಮಾಡಿರುವ ಬಿಜೆಪಿ ನಾಯಕಿ ಖುಷ್ಬು ‘ನನಗೆ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, ಅಲ್ಲಿ ಪಟ್ಟಿಕಟ್ಟಲಾಗಿದೆ. ನಡೆದಾಡಲು ಸಾಧ್ಯವಿಲ್ಲ. ಚೆನ್ನೈ ಏರ್​ಪೋರ್ಟ್​​ನಲ್ಲಿ ನನಗೆ ಕೆಟ್ಟ ಅನುಭವ ಆಯಿತು. ಏರ್​ ಇಂಡಿಯಾದವರು ನನಗೆ ಒಂದು ವ್ಹೀಲ್​ ಚೇರ್​ ಒದಗಿಸಲು 30 ನಿಮಿಷ ಕಾಯಿಸಿದರು. ಆಮೇಲೆ ಕೂಡ ಇನ್ನೊಂದು ವಿಮಾನಯಾನ ಸಂಸ್ಥೆಯಿಂದ ಎರವಲು ಪಡೆದು ನನಗೆ ನೀಡಿದರು ಹೊರತು ಅವರ ಪ್ರಯಾಣಿಕರಿಗಾಗಿ, ಅವರದ್ದೇ ಒಂದು ವ್ಹೀಲ್​ಚೇರ್​​ನ್ನು ಇಟ್ಟುಕೊಂಡಿಲ್ಲ. ಏರ್​ ಇಂಡಿಯಾ ಇಂಥ ವಿಷಯದಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ಒದಗಿಸಬೇಕು’ ಎಂದು ಹೇಳಿದ್ದಾರೆ.

ಖುಷ್ಬು ಟ್ವೀಟ್​ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿ ಟ್ವೀಟ್​ ಮಾಡಿದ ಏರ್​ ಇಂಡಿಯಾ ವಿಮಾನ ಯಾನ ಸಂಸ್ಥೆ ‘ಮೇಡಂ, ನಮ್ಮಿಂದ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ನಾವು ಈ ಬಗ್ಗೆ ಚೆನ್ನೈ ಏರ್​ಪೋರ್ಟ್ ಸಿಬ್ಬಂದಿಯನ್ನು ವಿಚಾರಿಸುತ್ತೇವೆ ಮತ್ತು ನಿಮಗಾದ ಅನನುಕೂಲತೆಗೆ ವಿಷಾದಿಸುತ್ತೇವೆ’ ಎಂದು ಹೇಳಿದೆ.

ಏರ್​ ಇಂಡಿಯಾ ಸಂಸ್ಥೆಗೆ ಇತ್ತೀಚೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಎರಡು ಬಾರಿ ದಂಡ ವಿಧಿಸಿದೆ. ಕಳೆದ ವರ್ಷ ನವೆಂಬರ್ 26ರಂದು ಯುಎಸ್​ನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬಾತ ಕುಡಿದ ಅಮಲಿನಲ್ಲಿ ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆತ ಮೂತ್ರ ವಿಸರ್ಜಿದ ಸಂದರ್ಭವನ್ನು ಏರ್​ ಇಂಡಿಯಾ ಸಿಬ್ಬಂದಿ ಸೂಕ್ತವಾಗಿ ನಿಭಾಯಿಸಲಿಲ್ಲ ಎಂದು ಆ ಮಹಿಳೆ ಆರೋಪ ಮಾಡಿದ್ದರು. ಈ ಬಗ್ಗೆ ಏರ್​ ಇಂಡಿಯಾ ಅಧ್ಯಕ್ಷರಿಗೂ ಪತ್ರಬರೆದಿದ್ದರು. ಡಿಜಿಸಿಎ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೊದಲ ಬಾರಿಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಹಾಗೇ, ಇನ್ನೊಂದು ಕೇಸ್​ನಲ್ಲಿ, ಪ್ಯಾರಿಸ್​ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲೂ ಪ್ರಯಾಣಿಕನೊಬ್ಬ ಕುಡಿದ ಸ್ಥಿತಿಯಲ್ಲಿ ಅಶಿಸ್ತಿನಿಂದ ವರ್ತನೆ ಮಾಡಿದ್ದ. ವಿಮಾನದ ಶೌಚಗೃಹದಲ್ಲಿ ಸಿಗರೇಟ್​ ಸೇದಿದ್ದಲ್ಲದೆ, ಆತನೂ ಖಾಲಿ ಇರುವ ಸೀಟ್​ವೊಂದರ ಮೇಲೆ ಮೂತ್ರ ವಿಸರ್ಜಿಸಿದ್ದ. ಈ ವಿಷಯವನ್ನು ಏರ್​ ಇಂಡಿಯಾ ಮುಚ್ಚಿಟ್ಟಿದೆ. ನಾವೇ ಕೇಳುವವರೆಗೂ ಘಟನೆಯ ವರದಿ ನೀಡಿರಲಿಲ್ಲ ಎಂದು ಹೇಳಿದ್ದ ಡಿಜಿಸಿಎ ಎರಡನೇ ಬಾರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ಇದನ್ನೂ ಓದಿ: Air India Alcohol Policy: ಡಿಜಿಸಿಎ ಭಾರಿ ದಂಡದ ಬೆನ್ನಲ್ಲೇ ಆಲ್ಕೋಹಾಲ್‌ ನೀತಿ ಬದಲಿಸಿದ ಏರ್‌ ಇಂಡಿಯಾ, ಏನಿದು?

Exit mobile version