ಲಖನೌ: ಗ್ಯಾಂಗ್ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಮತ್ತು ಅವನ ತಮ್ಮ ಅಶ್ರಫ್ ಅಹ್ಮದ್ನನ್ನು ಪೊಲೀಸರು, ಮಾಧ್ಯಮದವರ ಎದುರಲ್ಲೇ ಹತ್ಯೆ ಮಾಡಿದ ಆರೋಪದಡಿ ಲೊವ್ಲೇಶ್ ತಿವಾರಿ, ಅರುಣ್ ಮೌರ್ಯ ಹಾಗೂ ಸನ್ನಿ ಎಂಬ ಮೂವರನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಪ್ರಶ್ನೆಗೆ ಉತ್ತರಿಸಿದ ಅವರು ‘ನಮಗೆ ಪ್ರಸಿದ್ಧಿ ಬೇಕಿತ್ತು, ಜನಪ್ರಿಯರಾಗಲು ಬಯಸಿದ್ದೆವು, ಅದಕ್ಕಾಗಿಯೇ ಅತೀಕ್ ಮತ್ತು ಅಶ್ರಫ್ನನ್ನು ಕೊಂದಿದ್ದೇವೆ’ ಎಂದು ಹೇಳೀಕೊಂಡಿದ್ದಾರೆ ಎಂದು ವರದಿಯಾಗಿದೆ.
2005ರಲ್ಲಿ ನಡೆದಿದ್ದ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್ ಹತ್ಯೆ ಕೇಸ್ನಲ್ಲಿ ಆರೋಪಿಗಳಾಗಿರುವ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅಹ್ಮದ್ 2017ರಿಂದಲೂ ಜೈಲಲ್ಲಿ ಇದ್ದಾರೆ. ಆ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅಪಹರಣ ಕೇಸ್ನಲ್ಲಿ ಇತ್ತೀಚೆಗೆ ಅತೀಕ್ ಅಹ್ಮದ್ಗೆ ಪ್ರಯಾಗ್ರಾಜ್ ಕೋರ್ಟ್ ಜೀವಾವಧಿ ಶಿಕ್ಷೆ ಕೊಟ್ಟಿತ್ತು. ಈ ಉಮೇಶ್ ಪಾಲ್ ಹತ್ಯೆಯೂ ನನ್ನದೇ ಸಂಚು ಎಂದು ಅತೀಕ್ ಅಹ್ಮದ್ ಏಪ್ರಿಲ್ 12ರಂದು ಪೊಲೀಸರಿಗೆ ಲಿಖಿತವಾಗಿ ತಿಳಿಸಿದ್ದ. ಅಷ್ಟೇ ಅಲ್ಲ ಲಷ್ಕರೆ ತೊಯ್ಬಾ ಉಗ್ರಸಂಘಟನೆ, ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಜತೆ ತನಗೆ ಸಂಪರ್ಕವಿದೆ ಎಂದೂ ಒಪ್ಪಿಕೊಂಡಿದ್ದ. ನನ್ನನ್ನು ಉತ್ತರ ಪ್ರದೇಶ ಪೊಲೀಸರು ಉಳಿಸುವುದಿಲ್ಲ, ಎನ್ಕೌಂಟರ್ ಮಾಡಿ ಬಿಸಾಕುತ್ತಾರೆ ಎಂದು ಆತಂಕದಲ್ಲಿ ಅಲವತ್ತುಕೊಳ್ಳುತ್ತಲೇ ಇದ್ದ. ಆದರೆ ಏ.15ರ ರಾತ್ರಿ ಅತೀಕ್ ಮತ್ತು ಅಶ್ರಫ್ನನ್ನು ಪ್ರಯಾಗ್ರಾಜ್ನ ವೈದ್ಯಕೀಯ ಕಾಲೇಜಿಗೆ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಮೂವರು ದುಷ್ಕರ್ಮಿಗಳು ಅವರ ತಲೆಗೆ ಗುಂಡು ಹಾರಿಸಿದ್ದರು. ತಾವು ಮಾಧ್ಯಮದವರು ಎಂದು ಹೇಳಿಕೊಂಡು ಬಂದು ಕೊಂದಿದ್ದರು.
ಇದನ್ನೂ ಓದಿ: Atiq Ahmed Murder: ಅತೀಕ್ ಅಹ್ಮದ್-ಅಶ್ರಫ್ ಅಹ್ಮದ್ ಹತ್ಯೆಯಾದ ತಕ್ಷಣ ಸಿಎಂ ಯೋಗಿ ಆದಿತ್ಯನಾಥ್ ಮಾಡಿದ್ದೇನು?
ಅತೀಕ್ ಮತ್ತು ಅಶ್ರಫ್ಗೆ ಗುಂಡು ಹಾರಿಸುವಾಗ ಆರೋಪಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು ಎಂದು ಹೇಳಲಾಗಿದೆ. ಫೈರಿಂಗ್ ಮಾಡಿದ ಮೂವರನ್ನೂ ಪೊಲೀಸರು ಸ್ಥಳದಲ್ಲಿಯೇ ಬಂಧಿಸಿದ್ದಾರೆ. ಲೊವ್ಲೇಶ್ ತಿವಾರಿ, ಅರುಣ್ ಮೌರ್ಯ ಹಾಗೂ ಸನ್ನಿ ವಿರುದ್ಧ ಈಗಾಗಲೇ ಹಲವು ಸಣ್ಣಪುಟ್ಟ ಕೇಸ್ಗಳು ಇದ್ದು, ಕ್ರಿಮಿನಲ್ಗಳೇ ಎನ್ನಲಾಗಿದೆ. ಅತೀಕ್ ಅಹ್ಮದ್ ಸಮಜವಾದಿ ಪಕ್ಷದಿಂದ ಸ್ಪರ್ಧಿಸಿ 2004ರಲ್ಲಿ ಸಂಸದನೂ ಆಗಿದ್ದ. 2005ರಲ್ಲಿ ರಾಜುಪಾಲ್ ಹತ್ಯೆಯಲ್ಲಿ ಈತನ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದ್ದಂತೆ ಅವನನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. 2017ರಿಂದ ಅವನು ಜೈಲಲ್ಲಿಯೇ ಇದ್ದ. ಗುಜರಾತ್ನ ಸಬರಮತಿ ಜೈಲಲ್ಲಿ ಅವನನ್ನು ಇಡಲಾಗಿತ್ತು. ಉಮೇಶ್ ಪಾಲ್ ಹತ್ಯೆಯ ಬೆನ್ನಲ್ಲೇ ಕೋರ್ಟ್ನಲ್ಲಿ ವಿಚಾರಣೆಗಾಗಿ ಅವನನ್ನು ಪ್ರಯಾಗ್ರಾಜ್ಗೆ ಆಗಾಗ ಕರೆತರಲಾಗುತ್ತಿತ್ತು.