ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಧರಿಸಿದ್ದ ಉಡುಗೆಯನ್ನು ಟೀಕಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಈಗ ಕ್ಷಮೆ ಕೇಳಿದ್ದಾರೆ. ಟ್ವೀಟ್ ಮಾಡಿ, ‘ನನ್ನ ಮಾತುಗಳಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ. ಅವರೆಲ್ಲರ ಬಳಿ ನಾನು ಕ್ಷಮೆ ಕೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮೇಘಾಲಯಕ್ಕೆ ಭೇಟಿ ಕೊಟ್ಟಿದ್ದಾಗ ಒಂದು ನೀಲಿ ಬಣ್ಣದ ಖಾಸಿ ಉಡುಪು ತೊಟ್ಟಿದ್ದರು. ನರೇಂದ್ರ ಮೋದಿಯವರು ತಾವು ಭೇಟಿ ಕೊಟ್ಟ ಸ್ಥಳವನ್ನು ಪ್ರತಿನಿಧಿಸುವಂಥ ಸಾಂಪ್ರದಾಯಿಕ ಉಡುಪನ್ನೋ, ಟೊಪ್ಪಿಯನ್ನೋ ಧರಿಸುವುದು ಸಾಮಾನ್ಯ. ಒಟ್ಟಿನಲ್ಲಿ ಆ ಸ್ಥಳದ ಸಾಂಪ್ರದಾಯಿಕತೆ-ಸಂಸ್ಕೃತಿಗೆ ಅವರು ಈ ಮೂಲಕ ಮಹತ್ವ ಕೊಡುತ್ತಾರೆ. ಇದೇ ವಿಚಾರಕ್ಕೆ ಪ್ರತಿಪಕ್ಷಗಳು, ವಿರೋಧಿಗಳು ಅವರನ್ನು ಟೀಕೆ ಮಾಡುತ್ತಾರೆ. ಹಾಗೇ, ಮೇಘಾಲಯಕ್ಕೆ ಭೇಟಿ ಕೊಟ್ಟಿದ್ದಾಗ ಅವರು ಧರಿಸಿದ್ದ ಉಡುಪನ್ನು ತೃಣಮೂಲ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ವ್ಯಂಗ್ಯ ಮಾಡಿದ್ದರು.
ನೀಲಿ ಬಣ್ಣದ, ಹೂವುಗಳ ಚಿತ್ತಾರ ಇರುವ ಖಾಸಿ ಉಡುಪನ್ನು ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ಫೋಟೋದ ಜತೆ, ಅದ್ಯಾವುದೋ ಆನ್ಲೈನ್ ಖರೀದಿ ವೇದಿಕೆಯಲ್ಲಿ ಮಾರಾಟಕ್ಕಿಟ್ಟ ಇದೇ ತರಹದ ಉಡುಪಿನ ಚಿತ್ರವನ್ನು ಕೊಲ್ಯಾಜ್ ಮಾಡಿದ ಫೋಟೋವನ್ನು ಕೀರ್ತಿ ಆಜಾದ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಆನ್ಲೈನ್ ಮಾರಾಟ ವೇದಿಕೆಯಲ್ಲಿರುವ ಫೋಟೋದಲ್ಲಿ, ಆ ನೀಲಿ ಉಡುಪನ್ನು ಮಹಿಳೆಯೊಬ್ಬರು ಧರಿಸಿದ್ದನ್ನು ನೋಡಬಹುದು. ಈ ಮಹಿಳೆಯ ಚಿತ್ರ ಕೂಡ ತಿರುಚಿದ್ದು ಎಂದು ಇಂಡಿಯಾಟುಡೆ ಫ್ಯಾಕ್ಟ್ಚೆಕ್ನಲ್ಲಿ ಸಾಬೀತಾಗಿದೆ. ಹೀಗೆ ಕೊಲ್ಯಾಜ್ ಫೋಟೋ ಹಂಚಿಕೊಂಡ ಕೀರ್ತಿ ಆಜಾದ್ ‘ಇದು ಗಂಡಸರ ಉಡುಪೂ ಅಲ್ಲ, ಮಹಿಳೆಯರ ಉಡುಪೂ ಅಲ್ಲ, ಕೇವಲ ಮೋದಿಯವರ ಫ್ಯಾಷನ್’ ಎಂದು ಕ್ಯಾಪ್ಷನ್ ಬರೆದಿದ್ದರು.
ಹೀಗೆ ಮೋದಿಯವರ ಉಡುಪನ್ನು ತೃಣಮೂಲ ಕಾಂಗ್ರೆಸ್ ನಾಯಕ ವ್ಯಂಗ್ಯವಾಡಿದ ಬೆನ್ನಲ್ಲೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸೇರಿ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮೇಘಾಲಯದ ಸಾಂಪ್ರದಾಯಿಕ ಉಡುಗೆಯನ್ನೇ ಕೀರ್ತಿ ಆಜಾದ್ ಅವಮಾನಿಸುತ್ತಿದ್ದಾರೆ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದರು. ಹಾಗೇ, ತಾವೂ ಅದೇ ನೀಲಿಬಣ್ಣದ ಖಾಸಿ ಉಡುಪನ್ನು ಧರಿಸಿ ನಿಂತ ಫೋಟೋವನ್ನು ಶೇರ್ ಮಾಡಿಕೊಂಡ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ‘ನಮಗೆ ನಮ್ಮ ಸಂಸ್ಕೃತಿ ಬಗ್ಗೆ ಅಪಾರ ಹೆಮ್ಮೆಯಿದೆ. ಅದನ್ನು ಯಾರು ಅಗೌರವಿಸುತ್ತಾರೋ, ಅವರನ್ನು ಖಂಡಿಸುತ್ತೇವೆ’ ಎಂದು ಕ್ಯಾಪ್ಷನ್ ಬರೆದಿದ್ದರು. ಅಷ್ಟಲ್ಲದೆ ಹಲವರು ಕೀರ್ತಿ ಆಜಾದ್ ಮಾತುಗಳನ್ನು ಖಂಡಿಸಿದ್ದರು. ಕೀರ್ತಿ ಆಜಾದ್ಗೆ ನಮ್ಮ ದೇಶದ ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಕ್ಷಮೆ ಕೇಳಿದ ಟಿಎಂಸಿ ನಾಯಕ
ಇನ್ನು ಕೀರ್ತಿ ಆಜಾದ್ ಹೇಳಿಕೆಯನ್ನು ಅವರದ್ದೇ ತೃಣಮೂಲ ಕಾಂಗ್ರೆಸ್ ಪಕ್ಷ ಕೂಡ ಒಪ್ಪಿರಲಿಲ್ಲ. ನಾವು ಭಾರತದ ವೈವಿಧ್ಯತೆಯನ್ನು ಗೌರವಿಸುತ್ತೇವೆ. ಈ ದೇಶದ ಎಲ್ಲ ಸಂಸ್ಕೃತಿಯನ್ನೂ ಸಮಾನವಾಗಿ ನೋಡುತ್ತೇವೆ. ವಿವಿಧ ಜನಾಂಗೀಯ ಸಂಪ್ರದಾಯಗಳನ್ನು ಆಚರಿಸುತ್ತೇವೆ ಮತ್ತು ಎಲ್ಲ ವರ್ಗದ ಜನರನ್ನೂ ಸಬಲೀಕರಣಗೊಳಿಸಲು ಶ್ರಮಿಸುತ್ತೇವೆ ಎಂದು ಟಿಎಂಸಿ ಟ್ವೀಟ್ ಮಾಡಿತ್ತು.
ಇಷ್ಟೆಲ್ಲ ಆದ ಬಳಿಕ ಈಗ ಅಂತಿಮವಾಗಿ ಕೀರ್ತಿ ಆಜಾದ್ ಕ್ಷಮೆ ಕೇಳಿದ್ದಾರೆ. ನಮ್ಮ ಪ್ರಧಾನಿಗಳು ಫ್ಯಾಷನ್ ಮಾಡುವುದರಲ್ಲಿ ನಿಸ್ಸೀಮರು ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಈಗಾಗಲೇ ಸಮರ್ಥಿಸಿಕೊಂಡಿದ್ದ ಕೀರ್ತಿ ಆಜಾದ್ ಈಗ ಮತ್ತೊಂದು ಟ್ವೀಟ್ ಮಾಡಿ ‘ನನಗೆ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ-ಪರಂಪರೆ ಬಗ್ಗೆ ಅಪಾರ ಗೌರವ ಇದೆ. ನಾನು ಉಡುಪಿನ ಬಗ್ಗೆ ಕಮೆಂಟ್ ಕೊಟ್ಟಿದ್ದು ಯಾರನ್ನೂ ನೋಯಿಸಲು ಅಲ್ಲ. ನನ್ನ ಮಾತುಗಳಿಂದ ಯಾರಿಗೆಲ್ಲ ನೋವಾಗಿದೆಯೋ, ಅವರ ಬಳಿ ಕ್ಷಮೆ ಕೇಳುತ್ತೇನೆ. ನಾನು ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸಗಳನ್ನು ಯಾವಾಗಲೂ ಮಾಡುತ್ತೇನೆ’ ಎಂದು ಹೇಳಿದ್ದಾರೆ.