Site icon Vistara News

ತಕ್ಷಣಕ್ಕೆ ಸಿಪಿಆರ್‌ ಚಿಕಿತ್ಸೆ ಸಿಕ್ಕಿದ್ದರೆ ಕೆಕೆ ಬದುಕುತ್ತಿದ್ದರು; ಪೋಸ್ಟ್‌ಮಾರ್ಟಮ್‌ ವರದಿ ನೀಡಿದ ವೈದ್ಯರು

KK Death

ಮುಂಬೈ: ಗಾಯಕ ಕೃಷ್ಣಕುಮಾರ್‌ ಕುನ್ನಾಥ್‌ (ಕೆಕೆ) ಅಂತ್ಯಕ್ರಿಯೆ ಇಂದು (ಜೂ. 2) ಮುಂಬೈನ ವರ್ಸೋವಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಪುತ್ರ ನಕುಲ್‌ ಅಂತಿಮ ವಿಧಿವಿಧಾನಗಳನ್ನು ನಡೆಸಿದರು. ಪತ್ನಿ ಜ್ಯೋತಿ ಉಪಸ್ಥಿತರಿದ್ದರು. ಹಾಗೇ, ಅವರ ಕುಟುಂಬದ ಇತರ ಸದಸ್ಯರು, ಬಾಲಿವುಡ್‌ನ ಹಲವು ನಟ/ನಟಿಯರು ಇಲ್ಲಿಗೆ ಆಗಮಿಸಿ ಕೆಕೆ ಅಂತಿಮ ದರ್ಶನ ಪಡೆದಿದ್ದಾರೆ.

ಕೃಷ್ಣಕುಮಾರ್‌ ಕುನ್ನಾಥ್‌ ಮಂಗಳವಾರ ರಾತ್ರಿ (ಮೇ 31) ಕೋಲ್ಕತ್ತದ ನಜ್ರುಲ್‌ ಮಂಚಾ ಅಡಿಟೋರಿಯಂನಲ್ಲಿ ಕನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದರು. ಸುಮಾರು ಮೂರು ತಾಸುಗಳ ಕಾಲ ತಮ್ಮ ಹಾಡುಗಳಿಂದ ಜನಸ್ತೋಮವನ್ನು ರಂಜಿಸಿದ ಕೆಕೆ ಬಳಿಕ ಸುಸ್ತಾಗಿ ಬಿದ್ದಿದ್ದಲ್ಲದೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದರು.

ಕೃಷ್ಣ ಕುಮಾರ್‌ ಕುನ್ನಾಥ್‌ ಪೋಸ್ಟ್‌ಮಾರ್ಟಮ್‌ನ ಅಂತಿಮ ವರದಿಯನ್ನು ವೈದ್ಯರು ನೀಡಿದ್ದಾರೆ. ಕೆಕೆ ಹೃದಯದಲ್ಲಿ ಹಲವು ಬ್ಲಾಕೇಜ್‌ಗಳು ಇದ್ದವು. ಅವರು ಕುಸಿದು ಬಿದ್ದಾಗ ತಕ್ಷಣಕ್ಕೇ ಸಿಪಿಆರ್‌ ಚಿಕಿತ್ಸೆ ಸಿಕ್ಕಿದ್ದರೆ (cardiopulmonary resuscitation) ಬದುಕುಳಿಯುವ ಸಾಧ್ಯತೆ ಇತ್ತು . ಹೃದಯದ ಎಡಭಾಗದ ಪರಿಧಮನಿಯ ಅಪಧಮನಿಯಲ್ಲಿ ದೊಡ್ಡ, ಅಂದರೆ ಶೇ.80ರಷ್ಟು ಬ್ಲಾಕೇಜ್‌ ಇತ್ತು. ಅದನ್ನು ಹೊರತುಪಡಿಸಿ ಉಳಿದ ಅಪಧಮನಿ ಮತ್ತು ಉಪ-ಅಪಧಮನಿಗಳಲ್ಲೂ ಚಿಕ್ಕಚಿಕ್ಕ ಹಲವು ಬ್ಲಾಕೇಜ್‌ಗಳಿದ್ದವು. ಮಂಗಳವಾರದ ಸಂಗೀತ ಕಾರ್ಯಕ್ರಮದಲ್ಲಿ ಕೆಕೆ ವೇದಿಕೆ ಮೇಲೆ ತುಂಬ ಓಡಾಡಿದ್ದಾರೆ. ವಿಪರೀತ ಉತ್ಸಾಹದಿಂದ ಡಾನ್ಸ್‌ ಕೂಡ ಮಾಡಿದ್ದಾರೆ. ಇದರಿಂದಾಗಿ ಅವರ ಹೃದಯಕ್ಕೆ ರಕ್ತ ಸಂಚಾರ ಸಾಧ್ಯವಾಗದೆ ಹೃದಯ ಸ್ತಂಭನವಾಗಿದೆ. ಆದರೆ ತಕ್ಷಣಕ್ಕೆ ಸಿಪಿಆರ್‌ (ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್‌) ಮಾಡಬೇಕಿತ್ತು. ಆಗ ಕೆಕೆ ಉಳಿಯುವ ಸಾಧ್ಯತೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಕಿಕ್ಕಿರಿದು ತುಂಬಿತ್ತು ಸಭಾಂಗಣ, ಕೆಕೆ ತುಂಬ ಬೆವರುತ್ತಿದ್ದರು; ವೇದಿಕೆ ಮೇಲೆ ಗಾಯಕನ ಕೊನೇ ಕ್ಷಣ

ಸಿಪಿಆರ್‌ ಅಥವಾ cardiopulmonary resuscitation -ಹೀಗೆಂದರೆ ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಗೆ ನೀಡುವ ಪ್ರಾಥಮಿಕ ಚಿಕಿತ್ಸೆ.. ಹೃದಯ ಸ್ತಂಭನವಾದಾಗ ಆ ವ್ಯಕ್ತಿಯ ದೇಹದೊಳಗೆ ರಕ್ತ ಸಂಚಾರ ಸಂಪೂರ್ಣ ನಿಂತು ಹೋಗುತ್ತದೆ. ಇದರಿಂದಾಗಿ ಮೆದುಳಿಗೆ ಆಮ್ಲಜನಕ ಪೂರೈಕೆಯಾಗದೆ ಆತ ಕುಸಿದು ಬೀಳುತ್ತಾನೆ. ಹೀಗಾದಾಗ ಆತನ ಎದೆಯ ಮೇಲೆ ನಮ್ಮ ಎರಡೂ ಹಸ್ತಗಳನ್ನು ಇಟ್ಟು ಒತ್ತಬೇಕು. ರೋಗಿಯ ಸೆಟೆದುಕೊಂಡ ಎದೆ ಸ್ವಲ್ಪ ಒಳಭಾಗಕ್ಕೆ ಹೋಗುವಷ್ಟು ಗಟ್ಟಿಯಾಗಿ ಒತ್ತುತ್ತಾ ಹೋಗಬೇಕು. ಈ ಕ್ರಿಯೆ ತಕ್ಕಮಟ್ಟಿನ ವೇಗದಲ್ಲಿರಬೇಕು. ಆಗ ರಕ್ತಚಲನೆ ಮತ್ತೆ ಶುರುವಾಗಿ ಹೃದಯ ಪುನಶ್ಚೇತನಗೊಳ್ಳುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಸಿಪಿಆರ್‌ ಅಥವಾ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್‌ ಎನ್ನುತ್ತಾರೆ.

ಕೃಷ್ಣಕುಮಾರ್‌ ಕುನ್ನಾಥ್‌ ಅವರು ಮಂಗಳವಾರ ಸಂಜೆ 6ಗಂಟೆಯಿಂದ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. 8.40ಕ್ಕೆ ಹಾಡು ಮುಗಿದಾಗ ಅವರು ತುಂಬ ಬಳಲಿದ್ದರು. ವೇದಿಕೆಯಿಂದ ಹೊರಬರುತ್ತಿರುವಾಗಲೇ ತಮ್ಮ ಮೇಲೆ ನಿಯಂತ್ರಣ ಕಳೆದುಕೊಂಡರು. ಅವರನ್ನು ಮೊದಲು ಹೋಟೆಲ್‌ಗೆ ಕರೆದುಕೊಂಡು ಹೋಗಲಾಯಿತು. ಹೋಟೆಲ್‌ ಹೋಗುತ್ತಿದ್ದಂತೆ ಕೆಕೆ ಕುಸಿದುಬಿದ್ದರು. ಮತ್ತೆ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲೇ ಜೀವ ಹೋಗಿತ್ತು. ಕೆಕೆ ಮೃತದೇಹದ ಮೇಲೆ ಎರಡು ಗಾಯಗಳು ಕಂಡ ಹಿನ್ನೆಲೆಯಲ್ಲಿ ಕೋಲ್ಕತ್ತ ಪೊಲೀಸರು ಅಸ್ವಾಭಾವಿಕ ಸಾವು ಎಂದು ಕೇಸ್‌ ದಾಖಲಿಸಿಕೊಂಡಿದ್ದರು. ಆದರೆ ನಿನ್ನೆ ಹೊರಬಿದ್ದಿದ್ದ ಪೋಸ್ಟ್‌ಮಾರ್ಟಮ್‌ ಪ್ರಾಥಮಿಕ ವರದಿ ಇದನ್ನು ಅಲ್ಲಗಳೆದಿತ್ತು. ಕೆಕೆ ಅಸಹಜವಾಗಿ ಸತ್ತಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: ಕೆಕೆ ಸಾವು ಅಸಹಜವಲ್ಲ ಎಂದ ಪೋಸ್ಟ್‌ಮಾರ್ಟಮ್‌ ಪ್ರಾಥಮಿಕ ವರದಿ; ನಾಳೆ ಅಂತ್ಯಕ್ರಿಯೆ

Exit mobile version