Site icon Vistara News

ಚೀತಾ, ಚಿರತೆ, ಜಾಗ್ವಾರ್‌ | ಇವುಗಳ ನಡುವಿನ ವ್ಯತ್ಯಾಸ ತಿಳಿದಿರಲಿ!

cheetah jaguar leopard

ಬೆಕ್ಕಿನ ಜಾತಿಯ ದೊಡ್ಡ ಪ್ರಾಣಿಗಳ ಪ್ರಭೇದದಲ್ಲಿ ಹಲವು ಉಪಪ್ರಭೇದಗಳಿವೆ. ಸಾಮಾನ್ಯವಾಗಿ ಹುಲಿ, ಸಿಂಹ, ಚಿರತೆ, ಕೌಗರ್‌ಗಳನ್ನು ಎಲ್ಲರೂ ಗುರುತಿಸಬಹುದು. ಆದರೆ ಚಿರತೆ- ಜಾಗ್ವಾರ್‌ ಮತ್ತು ಚೀತಾಗಳ ನಡುವೆ ವ್ಯತ್ಯಾಸ ಗುರುತಿಸುವಲ್ಲಿ ಹೆಚ್ಚಿನವರು ಸೋಲುತ್ತಾರೆ.

ಚೀತಾ

ಇದು ಮೂರೇ ಮೂರು ಸೆಕೆಂಡ್‌ನಲ್ಲಿ ಶೂನ್ಯದಿಂದ ಗಂಟೆಗೆ 96 ಕಿಲೋಮೀಟರ್‌ ವೇಗವನ್ನು ವರ್ಧಿಸಿಕೊಳ್ಳಬಲ್ಲದು. ಹೀಗಾಗಿಯೇ ಇದಕ್ಕೆ ಜಗತ್ತಿನ ಅತಿ ವೇಗದ ಪ್ರಾಣಿ ಎಂಬ ಬಿರುದು. ವಯಸ್ಕ ಚೀತಾದ ತೂಕ ಸಾಮಾನ್ಯವಾಗಿ 34ರಿಂದ 56 ಕಿಲೋ. ಗಂಡು ಚೀತಾಗಳು ಹೆಚ್ಚು ಭಾರ. ಕೇಸರಿ ಕಂದು ಅಥವಾ ಹಳದಿ ಕಂದು ಮಿಶ್ರವರ್ಣದ ಇದರ ಚರ್ಮದ ಮೇಲೆ ಹೊಳೆಯುವ ಕಪ್ಪು ಚುಕ್ಕೆಗಳಿದ್ದು, ಇವು ಪ್ರತಿ ಚೀತಾಕ್ಕೂ ವಿಭಿನ್ನ. ಉಭಯ ಕಂಗಳ ಒಳಬದಿಯಿಂದ ಬಾಯಿಯ ಹೊರಬದಿಯವರೆಗೆ ಕಪ್ಪು ಪಟ್ಟಿಗಳಿದ್ದು, ಇವು ಕಣ್ಣೀರಿನಂತೆ ಕಾಣಿಸುತ್ತವೆ. ಇವುಗಳ ಬಾಲ ದಪ್ಪ, ರೋಮಾವೃತ ಹಾಗೂ ಕಪ್ಪು ವೃತ್ತಗಳಿಂದ ಕೂಡಿದೆ. ಈ ಮೂರೂ ಜಾತಿಗಳಲ್ಲಿ ಚೀತಾಗಳು ಅತಿ ಅಳಿವಿನಂಚಿನ ಪ್ರಾಣಿಗಳು.

ಇದನ್ನೂ ಓದಿ | Cheetah in India | ಭಾರತದ ಕೊನೆಯ ಚೀತಾವನ್ನು ಕೊಂದವರು ಯಾರು?

ಜಾಗ್ವಾರ್‌

ಈ ಮೂರು ಪ್ರಾಣಿಗಳ ಗಾತ್ರದಲ್ಲಿ ಜಾಗ್ವಾರ್‌ ದೊಡ್ಡದು. ಹುಲಿ ಹಾಗೂ ಸಿಂಹದ ನಂತರ ಇದೇ ಗಾತ್ರದಲ್ಲಿ ಅತಿ ದೊಡ್ಡ ಬೆಕ್ಕು. ಇವು 65ರಿಂದ 140 ಕಿಲೋವರೆಗೂ ತೂಗಬಲ್ಲವು. ಇವುಗಳಲ್ಲೂ ಗಂಡುಗಳೇ ಹೆಚ್ಚು ಭಾರ. ತಿಳಿ ಹಳದಿಯಿಂದ ಕೆಂಪು ಹಳದಿಯವರೆಗೂ ಚರ್ಮದ ಬಣ್ಣ. ಬಿಳಿ ಹಿನ್ನೆಲೆ ಮತ್ತು ಕಪ್ಪು ಸ್ಪಾಟ್‌ಗಳಿರುತ್ತವೆ. ಇವು ಸಾಮಾನ್ಯವಾಗಿ ಗುಲಾಬಿ ಆಕೃತಿಯಲ್ಲಿರುತ್ತವೆ. ಗುಲಾಬಿಯ ನಡುವೆ ಕಪ್ಪು ಚುಕ್ಕಿ. ಇವು ಚೆನ್ನಾಗಿ ಈಜುತ್ತವೆ. ಭಾರತದಲ್ಲಿ ಈ ಜಾತಿ ಇಲ್ಲ.

ಚಿರತೆ

ಭಾರತದ ಎಲ್ಲ ಕಡೆ ಸರ್ವೇಸಾಮಾನ್ಯವಾಗಿ ಕಂಡುಬರುತ್ತವೆ. ಇವುಗಳ ಸ್ನಾಯುಗಳ ರಚನೆಯ ವಿಶಿಷ್ಟತೆಯಿಂದಾಗಿ ಇವು ಮರವನ್ನು ಸುಲಭವಾಗಿ ಏರಬಲ್ಲವು. ಇವುಗಳ ಬಣ್ಣ ಸಾಮಾನ್ಯವಾಗಿ ತಿಳಿ ಹಾಗೂ ಕಪ್ಪು ಚುಕ್ಕೆಗಳಿಂದ ಕೂಡಿರುತ್ತವೆ. ಕಪ್ಪು ಚುಕ್ಕೆಗಳು ಸಾಮಾನ್ಯವಾಗಿ ಗುಲಾಬಿ ಆಕೃತಿಯಲ್ಲಿರುತ್ತವೆ. ದೀರ್ಘ ದೇಹಕ್ಕೆ ಹೋಲಿಸಿದರೆ ಪುಟ್ಟ ಕಾಲುಗಳು. ತಲೆ ವಿಶಾಲ ಮತ್ತು ದೊಡ್ಡ ತಲೆಬುರುಡೆ. ಹೆಚ್ಚಿನ ಸಮಯವನ್ನು ಮರದ ಮೇಲೆ ಕಳೆಯುವ ಇವುಗಳ ದೇಹದ ಉದ್ದ ಆರು ಅಡಿಯವರೆಗೂ ಇರಬಹುದು. ಮಧ್ಯ ಹಾಗೂ ದಕ್ಷಿಣ ಏಷ್ಯಾದಲ್ಲಿ ಇವು ವಿಪುಲವಾಗಿವೆ.

ಇದನ್ನೂ ಓದಿ | Cheetah in India | ನಮೀಬಿಯಾದಿಂದ ಬಂದ ಚೀತಾಗಳ ಡೀಟೇಲ್ಸ್!

Exit mobile version